ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind vs Aus: ಕೊನೆಯ ದಿನದ ಕದನ ಕುತೂಹಲ

ಬ್ರಿಸ್ಬೇನ್ ಟೆಸ್ಟ್‌: ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಭಾರತದ ಮೊಹಮ್ಮದ್ ಸಿರಾಜ್–ಶಾರ್ದೂಲ್ ಠಾಕೂರ್
Last Updated 18 ಜನವರಿ 2021, 17:37 IST
ಅಕ್ಷರ ಗಾತ್ರ

ಬ್ರಿಸ್ಬೇನ್‌: ಆತಿಥೇಯ ಆಸ್ಟ್ರೇಲಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪ್ರತಿರೋಧ ತೋರಿ ಬೃಹತ್ ಮೊತ್ತ ಪೇರಿಸುವ ಆತಂಕ ಸೃಷ್ಟಿಸಿದರು. ಅವರಿಗೆ ದಿಟ್ಟ ಉತ್ತರ ನೀಡಿದ ಮಧ್ಯಮ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಭಾರತ ತಂಡ ಮೇಲುಗೈ ಸಾಧಿಸಲು ಕಾರಣರಾದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಲಭಿಸಿದ್ದ ಮುನ್ನಡೆಯ ನೆರವಿನಿಂದ ಗೆಲುವಿಗೆ ಸವಾಲಿನ ಮೊತ್ತ ನೀಡುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಯಿತು.

ಐದು ವಿಕೆಟ್ ಉರುಳಿಸಿದ ಸಿರಾಜ್ ಮತ್ತು ನಾಲ್ವರ ವಿಕೆಟ್ ಗಳಿಸಿದ ಠಾಕೂರ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್‌ನ ನಾಲ್ಕನೇ ಹಾಗೂ ಕೊನೆಯ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟಿಮ್ ಪೇನ್ ಬಳಗವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಅಜಿಂಕ್ಯ ರಹಾನೆ ಪಡೆಗೆ ಸಾಧ್ಯವಾಯಿತು. 328 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಭಾರತ ನಾಲ್ಕನೇ ದಿನ ವಿಕೆಟ್ ಕಳೆದುಕೊಳ್ಳದೆ ನಾಲ್ಕು ರನ್ ಗಳಿಸಿದೆ. ಎರಡೂ ತಂಡಗಳಿಗೆ ಗೆಲ್ಲುವ ಅವಕಾಶ ತೆರೆದುಕೊಂಡಿರುವುದರಿಂದ ಕೊನೆಯ ದಿನ ಪಂದ್ಯ ಕುತೂಹಲ ಕೆರಳಿಸಿದೆ.ಮಳೆಯಿಂದಾಗಿ ನಿಗದಿತ ವೇಳೆಗಿಂತ ಮೊದಲೇ ದಿನದಾಟ ಮುಕ್ತಾಯಗೊಳಿಸಿದಾಗ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಕ್ರೀಸ್‌ನಲ್ಲಿದ್ದಾರೆ.

ಮೂರನೇ ದಿನವಾದ ಭಾನುವಾರ ಎರಡನೇ ಇನಿಂಗ್ಸ್‌ನಲ್ಲಿ ಆರು ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಳ್ಳದೆ 21 ರನ್ ಗಳಿಸಿದ್ದ ಆಸ್ಟ್ರೇಲಿಯಾ ಸೋಮವಾರ 75.5 ಓವರ್‌ಗಳಲ್ಲಿ 294 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು. ಸಿರಾಜ್ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದುಕೊಂಡರೆ, ಮೊದಲ ಇನಿಂಗ್ಸ್‌ನಲ್ಲಿ ಕುಸಿತದಿಂದ ಭಾರತವನ್ನು ಪಾರು ಮಾಡಿದ ಠಾಕೂರ್ ಬೌಲಿಂಗ್‌ನಲ್ಲೂ ಮಿಂಚಿ ನಾಲ್ಕು ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೂಲಕ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳ ಸಾಧನೆ ಅವರದಾಯಿತು. ಮೋಹಕ ಕ್ಯಾಚ್ ಮೂಲಕ ಜೋಶ್ ಹ್ಯಾಜಲ್‌ವುಡ್ ಅವರನ್ನು ಔಟ್ ಮಾಡಿ ಸಿರಾಜ್‌ಗೆ ಐದನೇ ವಿಕೆಟ್‌ ಕೊಡುಗೆ ನೀಡುವುದಕ್ಕೂ ಠಾಕೂರ್ ಕಾರಣರಾದರು.

ನಾಲ್ಕನೇ ದಿನದಾಟ ರೋಚಕ ಏಳು–ಬೀಳುಗಳಿಂದ ಕೂಡಿತ್ತು.ಅನುಭವಿ ಬೌಲರ್‌ಗಳ ಅನುಪಸ್ಥಿತಿಯಲ್ಲಿ ದಾಳಿ ಸಂಘಟಿಸಿದ ತಂಡ ಎದುರಾಳಿಗಳಿಗೆ ಪೆಟ್ಟು ನೀಡಿತು. ಮಾರ್ಕಸ್ ಹ್ಯಾರಿಸ್ ಮತ್ತು ಡೇವಿಡ್ ವಾರ್ನರ್ (48; 75 ಎಸೆತ, 6 ಬೌಂಡರಿ) ಮೊದಲ ವಿಕೆಟ್‌ಗೆ 89 ರನ್ ಸೇರಿಸಿ ಬೃಹತ್ ಮೊತ್ತದ ಭರವಸೆ ಮೂಡಿಸಿದರು. ಆದರೆ ದಿನದ 20ನೇ ಓವರ್‌ನಲ್ಲಿ ಹ್ಯಾರಿಸ್ ವಿಕೆಟ್ ಕಬಳಿಸುವ ಮೂಲಕ ಠಾಕೂರ್ ಮೊದಲ ಪೆಟ್ಟು ನೀಡಿದರು. ಮುಂದಿನ ಓವರ್‌ನಲ್ಲಿ ವಾರ್ನರ್ ವಿಕೆಟ್ ಉರುಳಿಸಿ ವಾಷಿಂಗ್ಟನ್ ಸುಂದರ್ ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.

31 ನೇ ಓವರ್‌ನಲ್ಲಿ ಲಾಬುಷೇನ್ ಮತ್ತು ಮ್ಯಾಥ್ಯೂ ವೇಡ್ ವಾಪಸಾದರು. ನಂತರ ಸ್ಟೀವನ್ ಸ್ಮಿತ್ (55; 74 ಎ, 7 ಬೌಂ) ಮತ್ತು ಕ್ಯಾಮರಾನ್ ಗ್ರೀನ್ ನಡುವೆ ಉತ್ತಮ ಜೊತೆಯಾಟ ಮೂಡಿಬಂತು. ಟಿಮ್ ಪೇನ್ ಮತ್ತು ಪ್ಯಾಟ್ ಕಮಿನ್ಸ್ ಕೂಡ ಕೆಲಕಾಲ ಕ್ರೀಸ್‌ನಲ್ಲಿ ತಳವೂರಿ ಸವಾಲೆಸೆದರು. ಆದರೆ ದೊಡ್ಡ ಜೊತೆಯಾಟಗಳು ಮೂಡಿಬರದಂತೆ ನೋಡಿಕೊಳ್ಳುವಲ್ಲಿ ಬೌಲರ್‌ಗಳು ಯಶಸ್ವಿಯಾದರು. ಮೊಹಮ್ಮದ್ ಸಿರಾಜ್ ವೈವಿಧ್ಯಮಯ ಎಸೆತಗಳ ಮೂಲಕ ಎದುರಾಳಿಗಳನ್ನು ಕಾಡಿದರು.

ಚಹಾ ವಿರಾಮಕ್ಕೂ ಮೊದಲು ಕೂಡ ಮಳೆ ಕಾಡಿತ್ತು. ಕೊನೆಯ ದಿನವೂ ಮಳೆ ಸುರಿದರೆ ಉಭಯ ತಂಡಗಳ ಜಯದ ಆಸೆಗೆ ತಣ್ಣೀರು ಬೀಳಲಿದೆ. ಬ್ರಿಸ್ಬೇನ್‌ನಲ್ಲಿ ಈ ವರೆಗೆ ಯಶಸ್ವಿಯಾಗಿ ಬೆನ್ನತ್ತಿದ ಗರಿಷ್ಠ 236 ರನ್‌. ಅದು ಕೂಡ ಏಳು ದಶಕಗಳ ಹಿಂದೆ. 1988ರಿಂದೀಚೆ ಆಸ್ಟ್ರೇಲಿಯಾ ಇಲ್ಲಿ ಒಂದು ‍ಪಂದ್ಯವನ್ನೂ ಸೋತಿಲ್ಲ ಎಂಬುದು ಕೂಡ ಗಮನಾರ್ಹ. ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಸಾಕು.

ತಂದೆಯ ನೆನಪು ಮತ್ತು ತಾಯಿಯ ಕರೆ...

ನವೆಂಬರ್‌ನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ಬೇಸರ ಕಾಡುತ್ತಿದ್ದರೂ ಟೆಸ್ಟ್ ಪಂದ್ಯಗಳ ನಡುವೆ ಮನೆಗೆ ದೂರವಾಣಿ ಕರೆ ಮಾಡಿದಾಗ ತಾಯಿ ಹೇಳಿದ ಮಾತುಗಳು ಧೈರ್ಯ ತುಂಬಿದವು ಎಂದುಮೊಹಮ್ಮದ್ ಸಿರಾಜ್ ಹೇಳಿದರು. ಮೂರನೇ ಟೆಸ್ಟ್ ಆಡುತ್ತಿರುವ ಸಿರಾಜ್ ಐದು ವಿಕೆಟ್‌ ಗಳಿಸಿದ ನಂತರ ಮಾತನಾಡಿ ‘ಈ ಸಾಧನೆ ಮಾಡಲು ಸಾಧ್ಯವಾದದ್ದರಲ್ಲಿ ಖುಷಿ ಇದೆ. ತಂದೆಯನ್ನು ಕಳೆದುಕೊಂಡ ನಂತರ ದಿಕ್ಕು ತೋಚದಂತಾಗಿತ್ತು. ಆದರೆ ಮನೆ ಮಂದಿ, ವಿಶೇಷವಾಗಿ ತಾಯಿಯ ಮಾತುಗಳು ನವಚೇತನ ತುಂಬಿದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT