ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಸೆಮಿಫೈನಲ್: ಸೌರಾಷ್ಟ್ರ ಬೌಲರ್‌ಗಳಿಗೆ ಅಗರವಾಲ್–ಶರತ್ ದಿಟ್ಟ ಉತ್ತರ

Last Updated 8 ಫೆಬ್ರುವರಿ 2023, 21:15 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಬುಧವಾರ ಸೌರಾಷ್ಟ್ರ ಎದುರು ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಗಳಿಸಿದ ಶತಕವು ಅವರು ಈ ಮೊದಲು ಗಳಿಸಿದ ಎಲ್ಲ ಶತಕಗಳಿಗಿಂತಲೂ ವಿಶೇಷವಾದದ್ದು.

ಅವರ ಆಟದಿಂದಾಗಿ ಕರ್ನಾಟಕ ತಂಡವು ಪಂದ್ಯದ ಮೊದಲ ದಿನವೇ ಅಲ್ಪಮೊತ್ತಕ್ಕೆ ಮುಗ್ಗರಿಸುವುದು ತಪ್ಪಿತು. ಗುಂಪು ಹಂತದಲ್ಲಿ ಮಿಂಚಿದ್ದ ಬ್ಯಾಟರ್‌ಗಳೆಲ್ಲರೂ ಸೌರಾಷ್ಟ್ರ ಬೌಲರ್‌ಗಳ ಶಿಸ್ತಿನ ದಾಳಿಗೆ ಶರಣಾದರು. ಕೇವಲ 112 ರನ್‌ಗಳಿಗೆ ಐದು ವಿಕೆಟ್‌ಗಳು ಪತನವಾದವು. ಆದರೆ, ಆತ್ಮವಿಶ್ವಾಸಭರಿತರಾಗಿ ಆಡಿದ ಮಯಂಕ್ (ಬ್ಯಾಟಿಂಗ್ 110) ಮುರಿಯದ ಆರನೇ
ವಿಕೆಟ್ ಜೊತೆಯಾಟದಲ್ಲಿ ಶರತ್ ಶ್ರೀನಿವಾಸ್ (ಬ್ಯಾಟಿಂಗ್ 50) ಅವರೊಂದಿಗೆ 117 ರನ್ ಸೇರಿಸಿದರು.

ಇದರಿಂದಾಗಿ ದಿನದಾಟದ ಕೊನೆಗೆ ತಂಡವು 87 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 229 ರನ್ ಗಳಿಸಲು ಸಾಧ್ಯವಾಯಿತು.

ಈ ಪಂದ್ಯದಲ್ಲಿ ಮಯಂಕ್ ಬ್ಯಾಟಿಂಗ್ ಶೈಲಿ ಕೊಂಚ ಭಿನ್ನವಾಗಿತ್ತು. ಬಹುತೇಕ ಪ್ರತಿ ಓವರ್‌ನಲ್ಲಿಯೂ ಒಂದೆರಡು ಎಸೆತಗಳನ್ನು ಕ್ರೀಸ್‌ನಿಂದ ಮುಂದೆ ಬಂದು ಎದುರಿಸುವ ಆಕ್ರಮಣಕಾರಿ ಶೈಲಿ ಅನುಸರಿಸಿದರು. ಇದು ಫೀಲ್ಡರ್‌ಗಳ ಮೇಲೆ ಒತ್ತಡ ಹೆಚ್ಚಿಸಿತು. ಅಲ್ಲದೇ ಒಂಟಿ ಮತ್ತು ಎರಡು ರನ್‌ ಪಡೆಯುವಲ್ಲಿ ಅವರು ಅಪಾರ ಚುರುಕುತನ ಮೆರೆದರು. ಅಂದದ ಡ್ರೈವ್ ಮತ್ತು ಕಲಾತ್ಮಕ ಕಟ್‌ ಅವರ ಬ್ಯಾಟಿಂಗ್‌ನಲ್ಲಿತ್ತು. 105 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಶತಕ ಪೂರೈಸಲು ಒಟ್ಟು 215 ಎಸೆತಗಳನ್ನು ಎದುರಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15ನೇ ಹಾಗೂ ಈ ಸರಣಿಯಲ್ಲಿ ಮೂರನೇ ಬಾರಿ ಶತಕ ಗಳಿಸಿದರು.

ಇನ್ನೊಂದೆಡೆ ಬಿ.ಆರ್. ಶರತ್ ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆದಿದ್ದರಿಂದ ಕಣಕ್ಕಿಳಿದ ಶರತ್ ಶ್ರೀನಿವಾಸ್ 120 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದಕ್ಕಾಗಿ 177 ನಿಮಿಷಗಳನ್ನು ಕ್ರೀಸ್‌ನಲ್ಲಿ ಕಳೆದರು. ಇಬ್ಬರ ಜೊತೆಯಾಟವು ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಮುದ ನೀಡಿತು.

ಶಿಸ್ತಿನ ಬೌಲಿಂಗ್: ಚಿನ್ನಸ್ವಾಮಿ ಕ್ರೀಡಾಂ ಗಣದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲರ್‌ಗಳು ಆತಿಥೇಯ ಬ್ಯಾಟರ್‌ಗಳ ದೌರ್ಬಲ್ಯಗಳನ್ನು ಬಹಿರಂಗಗೊಳಿಸಿದರು. ಭಾರತ ತಂಡದಲ್ಲಿ ಆಡಲು ತೆರಳಿರುವ ಜೈದೇವ್ ಉನದ್ಕತ್ ಗೈರುಹಾಜರಿಯಲ್ಲಿ ಹೊಣೆ ಹಂಚಿಕೊಂಡ ಮಧ್ಯಮವೇಗಿ ಖುಷಾಂಗ್ ಪಟೇಲ್ ಹಾಗೂ ಎಡಗೈ ಬೌಲರ್ ಚೇತನ್ ಸಕಾರಿಯಾ ಕರ್ನಾಟಕಕ್ಕೆ ಪೆಟ್ಟುಕೊಟ್ಟರು.

ಆರನೇ ಓವರ್‌ನಲ್ಲಿ ಸಮರ್ಥ್ ವಿಕೆಟ್ ಗಳಿಸಿದ ಪಟೇಲ್ ಸಂಭ್ರಮಿಸಿದರು. ಎರಡು ಬೌಂಡರಿ ಹೊಡೆದು ವಿಶ್ವಾಸ ಮೂಡಿಸಿದ್ದ ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್, ವಿಕೆಟ್‌ ಕಬಳಿಸುವಲ್ಲಿ ಸಕಾರಿಯಾ ಯಶಸ್ವಿಯಾದರು. ಯುವ ಬ್ಯಾಟರ್ ನಿಕಿನ್ ಜೋಸ್ (18; 66ಎ) ಅವರ ಏಕಾಗ್ರತೆಯನ್ನು ಭಂಗಗೊಳಿಸಿದ ಪಟೇಲ್ ವಿಕೆಟ್ ಗಳಿಸಿದರು. ಅನುಭವಿ ಮನೀಷ್ ಪಾಂಡೆ ಜೊತೆಗೆ ಮಯಂಕ್ ತಾಳ್ಮೆಯಿಂದ ಆಡಿದರು. ಆದರೆ ಊಟ ಮುಗಿಸಿ ಬಂದ ನಂತರ ಮೊದಲ ವಿಕೆಟ್ ಪತನವಾಗಿದ್ದು ಪಾಂಡೆಯರದ್ದೇ!

ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಶ್ರೇಯಸ್ ಗೋಪಾಲ್ (15; 29ಎ) ಇಲ್ಲಿ ರನೌಟ್ ಆದರು.

ಸ್ಕೋರ್‌ ಕಾರ್ಡ್‌


ಮೊದಲ ಇನಿಂಗ್ಸ್: ಕರ್ನಾಟಕ: 5ಕ್ಕೆ229 (87 ಓವರ್‌ಗಳಲ್ಲಿ)

ಸಮರ್ಥ್ ಸಿ ವಿಶ್ವರಾಜ್ ಸಿಂಹ ಬಿ ಪಟೇಲ್ 3 (20ಎ), ಮಯಂಕ್ ಬ್ಯಾಟಿಂಗ್ 110 (246ಎ, 4X11,6X1), ದೇವದತ್ತ ಸಿ ಜ್ಯಾಕ್ಸನ್ ಬಿ ಸಕಾರಿಯಾ 9 (8ಎ, 4X2), ನಿಕಿನ್ ಸಿ ದೇಸಾಯಿ ಬಿ ಪಟೇಲ್ 18 (66ಎ,4X2), ಮನೀಷ್ ಸಿ ಸ್ನೆಲ್ ಬಿ ಮಂಕಡ್ 7 (13ಎ, 4X1), ಶ್ರೇಯಸ್ ರನ್ಔಟ್ (ಬದಲೀ) ವ್ಯಾಸ್ 15 (29ಎ, 4X2), ಶರತ್ ಬ್ಯಾಟಿಂಗ್ 58 (143ಎ, 4X4)

ಇತರೆ: 9 (ಬೈ 5, ಲೆಗ್‌ಬೈ 1,

ನೋಬಾಲ್ 3)

ವಿಕೆಟ್ ಪತನ: 1–12 (ಸಮರ್ಥ್; 5.5), 2–21 (ದೇವದತ್ತ ಪಡಿಕ್ಕಲ್; 8.1), 3–68 (ನಿಕಿನ್ ಜೋಸ್; 28.3), 4–79 (ಮನೀಷ್ ಪಾಂಡೆ;31.6), 5–112 (ಶ್ರೇಯಸ್ ಗೋಪಾಲ್; 40.3)

ಬೌಲಿಂಗ್‌: ಚೇತನ್ ಸಕಾರಿಯಾ 17–5–39–1, ಖುಷಾಂಗ್ ಪಟೇಲ್ 16–0–64–2, ಚಿರಾಗ್ ಜಾನಿ 15–5–25–0, ಪ್ರೇರಕ್ ಮಂಕಡ್ 18–3–42–1, ಧರ್ಮೇಂದ್ರಸಿಂಹ ಜಡೇಜ 14–2–28–0, ಪಾರ್ಥ್ ಭುತ್ 7–1–25–0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT