ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಪರೀಕ್ಷೆ ಬಳಿಕ ಗಂಗೂಲಿಗೆ ಸ್ಟಂಟ್ ಆಳವಡಿಕೆ ಬಗ್ಗೆ ನಿರ್ಧಾರ

Last Updated 28 ಜನವರಿ 2021, 9:01 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಹಾಗೂ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅವರನ್ನು ಗುರುವಾರ ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ವರದಿ ಬಂದ ಬಳಿಕ ಚಿಕಿತ್ಸೆಯ ಸಂಬಂಧ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರಿಗೆ ಬುಧವಾರ ಮತ್ತೆ ಎದೆನೋವು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ತಿಂಗಳೊಂದರಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜನವರಿ 2ರಂದು ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಸೌರವ್ ಗಂಗೂಲಿ ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್‌ಗಳು ಕಂಡುಬಂದ ಕಾರಣ ಆ್ಯಂಜಿಯೊಪ್ಲಾಸ್ಟಿ ನಡೆಸಿ ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು. ಈಗ ಎರಡನೇ ಬಾರಿಗೆ ಆ್ಯಂಜಿಯೊಪ್ಲಾಸ್ಟಿ ನಡೆಸಿ ಮತ್ತೊಂದು ಸ್ಟಂಟ್ ಆಳವಡಿಕೆ ಅಗತ್ಯವಿದೆಯೇ ಎಂಬುದನ್ನು ವೈದ್ಯರ ತಂಡ ನಿರ್ಧರಿಸಲಿದೆ.

ಗಂಗೂಲಿ ಅವರು ರಾತ್ರಿಯಿಡಿ ಚೆನ್ನಾಗಿ ನಿದ್ರೆ ಮಾಡಿದ್ದಾರೆ. ಬೆಳಗ್ಗೆ ಲಘು ಉಪಹಾರ ಸೇವಿಸಿದ್ದಾರೆ. ಚಿಕಿತ್ಸೆಯ ಮುಂದಿನ ಹಂತವನ್ನು ನಿರ್ಧರಿಸಲು ಹಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ವೈದ್ಯಕೀಯ ತಂಡದ ಹಿರಿಯ ವೈದ್ಯರು ತಿಳಿಸಿದರು.

ಖ್ಯಾತ ಹೃದ್ರೊಗ ತಜ್ಞ ದೇವಿ ಶೆಟ್ಟಿ, ಕೋಲ್ಕತ್ತಗೆ ಪ್ರಯಾಣ ಬೆಳೆಸಲಿದ್ದು, ಗಂಗೂಲಿ ವೈದ್ಯಕೀಯ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂಬುದು ತಿಳಿದು ಬಂದಿದೆ.

ವೈದ್ಯಕೀಯ ಪರೀಕ್ಷಾ ವರದಿಗಳು ಬಂದ ಬಳಿಕವಷ್ಟೇ ಬ್ಲಾಕ್‌ಗಳನ್ನು ನಿವಾರಿಸಲು ಸ್ಟಂಟ್ ಆಳವಡಿಸಬೇಕೇ ಎಂಬುದನ್ನು ಖಚಿತಗೊಳಿಸಲು ಸಾಧ್ಯವಾಗಲಿದೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ.

48 ವರ್ಷದ ಸೌರವ್ ಗಂಗೂಲಿಗೆ ಬುಧವಾರ ಮಧ್ಯಾಹ್ನದ ವೇಳೆಗೆ ಮತ್ತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೋಲ್ಕತ್ತದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT