ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾಕ್ಕೆ ಜಯದೊಂದಿಗೆ ಅಭಿಯಾನ ಮುಗಿಸುವ ಹಂಬಲ

Last Updated 5 ಜುಲೈ 2019, 20:00 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ಜಯದೊಂದಿಗೆ ಅಭಿಯಾನ ಮುಗಿಸುವ ಹಂಬಲದೊಂದಿಗೆ ಶನಿವಾರ ಕಣಕ್ಕೆ ಇಳಿಯಲಿದೆ.

ಸೆಮಿಫೈನಲ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಎದುರು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೆಣಸಲಿದೆ.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಕಳೆದ ವರ್ಷ ನಡೆದಿದ್ದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದಲ್ಲಿ ಸಿಲುಕಿ ಆಸ್ಟ್ರೇಲಿಯಾದ ಅಂದಿನ ನಾಯಕ ಸ್ಟೀವ್ ಸ್ಮಿತ್‌ ಮತ್ತು ಉಪನಾಯಕ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷ ನಿಷೇಧ ಹೇರಲಾಗಿತ್ತು.

ನಿಷೇಧ ಅವಧಿ ಮುಗಿದ ನಂತರ ಇದೇ ಮೊದಲ ಬಾರಿ ಇವರಿಬ್ಬರು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದಾರೆ. ವಿಶ್ವಕಪ್‌ ಟೂರ್ನಿಯ ಆರಂಭದ ಕೆಲವು ‍ ಪಂದ್ಯಗಳಲ್ಲಿ ಇವರಿಬ್ಬರು ಆಡಲು ಇಳಿದಾಗ ಇಂಗ್ಲೆಂಡ್‌ನ ಪ್ರೇಕ್ಷಕರು ಮೂದಲಿಸಿದ್ದರು. ಆದರೆ ಶನಿವಾರದ ಪಂದ್ಯದಲ್ಲಿ ಅವರು ಒತ್ತಡವಿಲ್ಲದೆ ಬ್ಯಾಟಿಂಗ್‌ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿದೆ. ಶನಿವಾರದ ಪಂದ್ಯದಲ್ಲಿ ಗೆದ್ದರೆ ಈ ಸ್ಥಾನವನ್ನು ಉಳಿಸಿಕೊಳ್ಳಲಿದೆ. ಅಗ್ರ ಸ್ಥಾನದಲ್ಲಿ ಉಳಿದರೆ ತಂಡ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡುವುದರಿಂದ ತಪ್ಪಿಸಿಕೊಳ್ಳಲಿದೆ.

ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿರುವ ಡೇವಿಡ್ ವಾರ್ನರ್ ಉತ್ತಮ ಲಯದಲ್ಲಿದ್ದು ಮತ್ತೊಮ್ಮೆ ಮಿಂಚುವ ಭರವಸೆಯಲ್ಲಿದ್ದಾರೆ. ನಾಯಕ ಆ್ಯರನ್ ಫಿಂಚ್ ಕೂಡ ಉತ್ತಮ ಲಯದಲ್ಲಿದ್ದು ವಾರ್ನರ್ ಜೊತೆ ಮೊದಲ ವಿಕೆಟ್‌ಗೆ ಉಪಯುಕ್ತ ಬ್ಯಾಟಿಂಗ್ ಮಾಡಿದ್ದಾರೆ. ಉಸ್ಮಾನ್ ಖ್ವಾಜಾ ಅವರೂ ತಂಡದ ಭರವಸೆಯಾಗಿದ್ದಾರೆ.

ಬೌಲಿಂಗ್‌ನಲ್ಲಿ ಮಿಷಲ್ ಸ್ಟಾರ್ಕ್ ಅಮೋಘ ಫಾರ್ಮ್‌ನಲ್ಲಿದ್ದು ಈಗಾಗಲೇ ಆಡಿರುವ ಎಲ್ಲ ತಂಡಗಳ ಬ್ಯಾಟ್ಸ್‌ಮನ್‌ಗಳನ್ನೂ ಕಾಡಿದ್ದಾರೆ.

ಆರಂಭದಿಂದಲೇ ನೀರಸ ಆಟವಾಡುತ್ತ ಬಂದಿರುವ ದಕ್ಷಿಣ ಆಫ್ರಿಕಾ ಆಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಕ್ತಾಯಗೊಳಿಸಲು ತಂಡ ಪ್ರಯತ್ನಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT