ಗುರುವಾರ , ಏಪ್ರಿಲ್ 2, 2020
19 °C

ಸೋಲಿನ ಸುಳಿಯಲ್ಲಿ ನ್ಯೂಜಿಲೆಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಲ್‌ (ಎಎಫ್‌ಪಿ): ಲಸಿತ್‌ ಎಂಬಲ್ದೆನಿಯಾ (71ಕ್ಕೆ4) ಮತ್ತು ಧನಂಜಯ ಡಿಸಿಲ್ವಾ (16ಕ್ಕೆ2) ಅವರ ಮಾರಕ ದಾಳಿಗೆ ಕಂಗೆಟ್ಟ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ.

ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 7 ವಿಕೆಟ್‌ಗೆ 227ರನ್‌ಗಳಿಂದ ಶುಕ್ರವಾರ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಲಂಕಾ ತಂಡಕ್ಕೆ ನಿರೋಷನ್‌ ಡಿಕ್ವೆಲ್ಲಾ (61; 109ಎ, 3ಬೌಂ) ಮತ್ತು ಸುರಂಗ ಲಕ್ಮಲ್‌ (40; 98ಎ, 3ಬೌಂ, 2ಸಿ) ಅಲ್ಪ ಮುನ್ನಡೆ ತಂದುಕೊಟ್ಟರು.

ಎಂಟನೇ ವಿಕೆಟ್‌ ಪಾಲುದಾರಿಕೆಯಲ್ಲಿ 81ರನ್‌ ಸೇರಿಸಿದ ಈ ಜೋಡಿ ಆತಿಥೇಯರು 267ರನ್‌ ಕಲೆಹಾಕಲು ನೆರವಾಯಿತು.

18ರನ್‌ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಶುರುಮಾಡಿದ ಕಿವೀಸ್‌ ನಾಡಿನ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಕೇನ್‌ ವಿಲಿಯಮ್ಸನ್‌ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 76 ಓವರ್‌ಗಳಲ್ಲಿ 7 ವಿಕೆಟ್‌ಗೆ 195ರನ್‌ ಗಳಿಸಿತು.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಪಡೆಗೆ ಧನಂಜಯ ಡಿಸಿಲ್ವಾ ಮತ್ತು ಲಸಿತ್‌ ಎಂಬಲ್ದೆನಿಯಾ ಆರಂಭದಲ್ಲೇ ಪೆಟ್ಟು ನೀಡಿದರು.

ಜೀತ್ ರಾವಲ್‌ (4), ನಾಯಕ ವಿಲಿಯಮ್ಸನ್‌ (4) ಮತ್ತು ರಾಸ್‌ ಟೇಲರ್‌ (3) ಒಂದಂಕಿ ಮೊತ್ತಕ್ಕೆ ಔಟಾದರು. ಟಾಮ್‌ ಲಥಾಮ್‌ (45; 81ಎ, 3ಬೌಂ, 1ಸಿ) ಅರ್ಧಶತಕದ ಹಾದಿಯಲ್ಲಿ ಎಡವಿದರು.

ತಂಡದ ಮೊತ್ತ 98ರನ್‌ ಆಗಿದ್ದಾಗ ಹೆನ್ರಿ ನಿಕೋಲ್ಸ್‌ (26; 71ಎ, 2ಬೌಂ) ಕೂಡ ಪೆವಿಲಿಯನ್‌ ಸೇರಿದರು. ಹೀಗಾಗಿ ವಿಲಿಯಮ್ಸನ್‌ ಬಳಗದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.

ಈ ಹಂತದಲ್ಲಿ ಒಂದಾದ ವಿಕೆಟ್‌ ಕೀಪರ್‌ ಬಿ.ಜೆ.ವಾಟ್ಲಿಂಗ್‌ (ಬ್ಯಾಟಿಂಗ್‌ 63; 138ಎ, 5ಬೌಂ) ಮತ್ತು ಮಿಷೆಲ್‌ ಸ್ಯಾಂಟನರ್‌ (12) ತಂಡಕ್ಕೆ ಆಸರೆಯಾದರು. 50ನೇ ಓವರ್‌ನ ಮೂರನೇ ಎಸೆತದಲ್ಲಿ ಸ್ಯಾಂಟನರ್‌ ಅವರು ಲಸಿತ್‌ ಎಂಬಲ್ದೆನಿಯಾಗೆ ವಿಕೆಟ್‌ ನೀಡಿದರು. 

ಬಳಿಕ ವಾಟ್ಲಿಂಗ್‌ ಮತ್ತು ಟಿಮ್‌ ಸೌಥಿ (23; 62ಎ, 1ಬೌಂ) ಪ್ರವಾಸಿ ಪಡೆಯ ಇನಿಂಗ್ಸ್‌ ಬೆಳೆಸಿದರು. ಇವರು ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 54ರನ್‌ ಸೇರಿಸಿ ಕಳೆಗುಂದಿದ್ದ ಕೇನ್‌ ಪಡೆಯ ಇನಿಂಗ್ಸ್‌ಗೆ ರಂಗು ತುಂಬಲು ಪ್ರಯತ್ನಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌; 83.2 ಓವರ್‌ಗಳಲ್ಲಿ 249 ಮತ್ತು 76 ಓವರ್‌ಗಳಲ್ಲಿ 7 ವಿಕೆಟ್‌ಗೆ 195 (ಟಾಮ್‌ ಲಥಾಮ್‌ 45, ಹೆನ್ರಿ ನಿಕೋಲ್ಸ್‌ 26, ಬಿ.ಜೆ.ವಾಟ್ಲಿಂಗ್‌ ಬ್ಯಾಟಿಂಗ್‌ 63, ಮಿಷೆಲ್‌ ಸ್ಯಾಂಟನರ್‌ 12, ಟಿಮ್‌ ಸೌಥಿ 23; ಅಖಿಲ ಧನಂಜಯ 56ಕ್ಕೆ1, ಧನಂಜಯ ಡಿಸಿಲ್ವಾ 16ಕ್ಕೆ2, ಲಸಿತ್‌ ಎಂಬಲ್ದೆನಿಯಾ 71ಕ್ಕೆ4).

ಶ್ರೀಲಂಕಾ: ಮೊದಲ ಇನಿಂಗ್ಸ್‌: 93.2 ಓವರ್‌ಗಳಲ್ಲಿ 267 (ನಿರೋಷನ್‌ ಡಿಕ್ವೆಲ್ಲಾ 61, ಸುರಂಗ ಲಕ್ಮಲ್‌ 40, ಲಸಿತ್‌ ಎಂಬಲ್ದೆನಿಯಾ 5; ಟ್ರೆಂಟ್‌ ಬೌಲ್ಟ್‌ 45ಕ್ಕೆ2, ವಿಲಿಯಮ್‌ ಸೋಮರ್‌ವಿಲ್‌ 83ಕ್ಕೆ3, ಅಜಾಜ್‌ ಪಟೇಲ್‌ 89ಕ್ಕೆ5).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು