ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೋಕ್ಸ್‌ ಸಾಹಸ– ಇಂಗ್ಲೆಂಡ್‌ಗೆ ಪವಾಡಸದೃಶ ಗೆಲುವು

ಆ್ಯಷಸ್‌ ಮೂರನೇ ಟೆಸ್ಟ್‌
Last Updated 25 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಲೀಡ್ಸ್, ಇಂಗ್ಲೆಂಡ್‌: ಕಳೆದ ತಿಂಗಳ ಏಕದಿನ ವಿಶ್ವಕಪ್‌ ಟೂರ್ನಿಯ ಹೀರೊ ಬೆನ್‌ ಸ್ಟೋಕ್ಸ್‌ ಮತ್ತೊಮ್ಮೆ ಸಾಹಸ ಮೆರೆದರು. ಅವರ ಅತ್ಯಮೋಘ ಶತಕದ (ಔಟಾಗದೇ 135) ನೆರವಿನಿಂದ ಇಂಗ್ಲೆಂಡ್‌ ತಂಡ ಆ್ಯಷಸ್‌ ಸರಣಿಯ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಂಬಲಸಾಧ್ಯವಾದ ರೀತಿಯಲ್ಲಿ ಒಂದು ವಿಕೆಟ್‌ನ ರೋಚಕ ಗೆಲುವನ್ನು ಸಾಧಿಸಿತು.

ಐದು ಟೆಸ್ಟ್‌ಗಳ ಸರಣಿ ಈಗ 1–1ರಲ್ಲಿ ಸಮನಾಗಿದೆ. ಮೊದಲ ಇನಿಂಗ್ಸ್‌ನಲ್ಲಿ 67 ರನ್‌ಗಳಿಗೆ ಉರುಳಿದ್ದ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ನಲ್ಲಿ ತೀವ್ರ ಹೋರಾಟ ತೋರಿತ್ತು. ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಲಂಚ್‌ ನಂತರ ಗ್ಲೆಂಡ್‌ನ 9ನೇ ವಿಕೆಟ್‌ ಬಿದ್ದು ಕನ್ನಡಕಧಾರಿ ಜಾಕ್‌ ಲೀಚ್‌ ಕ್ರೀಸ್‌ಗೆ ಇಳಿದಾಗ ಗೆಲುವಿಗೆ ಇನ್ನೂ 73 ರನ್‌ ಬೇಕಿತ್ತು. ನಂತರದ್ದೆಲ್ಲಾ ಸ್ಟೋಕ್ಸ್‌ ಸಾಹಸಗಾಥೆ.

ಗೆಲ್ಲಲು 359 ರನ್‌ಗಳ ದೊಡ್ಡ ಗುರಿ ಎದುರಿಸಿದ್ದ ಇಂಗ್ಲೆಂಡ್‌ 9 ವಿಕೆಟ್‌ಗೆ 363 ರನ್‌ ಗಳಿಸಿ ಚಹ ವಿರಾಮಕ್ಕೆ ಮೊದಲೇ ಗೆಲುವಿನ ಸಂಭ್ರಮ ಆಚರಿಸಿತು. 211 ಎಸೆತ ಎದುರಿಸಿದ ಸ್ಟೋಕ್ಸ್‌ ಎಂಟು ಸಿಕ್ಸರ್‌, 11 ಬೌಂಡರಿ ಚಚ್ಚಿದರು. 76 ರನ್‌ಗಳ ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಲೀಚ್‌ ಗಳಿಸಿದ್ದು ಕೇವಲ 1 ರನ್‌ (17 ಎಸೆತ). ಆದರೆ ಅವರು ಸರಿಯಾಗಿ ಒಂದು ಗಂಟೆ ಸ್ಟೋಕ್ಸ್‌ಗೆ ಸಾಥ್‌ ನೀಡಿದರು. ಕಮಿನ್ಸ್‌ ಬೌಲಿಂಗ್‌ನಲ್ಲಿ ಕವರ್ಸ್‌ಗೆ ಬೌಂಡರಿ ಬಾರಿಸಿ ಸ್ಟೋಕ್ಸ್‌ ಗೆಲುವನ್ನಾಚರಿಸಿದರು.

ಇದು ನಾಲ್ಕನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಅತಿ ದೊಡ್ಡ ಯಶಸ್ವಿ ಚೇಸ್‌ ಎನಿಸಿತು. ಟೆಸ್ಟ್‌ ಇತಿಹಾಸದಲ್ಲೇ ಯಶಸ್ವಿಯಾಗಿ ಸಾಧಿಸಿದ 10ನೇ ದೊಡ್ಡ ಗೆಲುವಿನ ಗುರಿ ಎನಿಸಿತು. ಇದಕ್ಕೆ ಮೊದಲು ರೂಟ್‌ (ಶನಿವಾರ ಅಜೇಯ 75) ಭಾನುವಾರ ಕೇವಲ ಎರಡು ರನ್‌ ಸೇರಿಸಿ ನಿರ್ಗಮಿಸಿದಾಗ ಆಸ್ಟ್ರೇಲಿಯಾ ಗೆಲುವಿನ ವಿಶ್ವಾಸದಲ್ಲಿತ್ತು.

ಸ್ಕೋರುಗಳು: ಆಸ್ಟ್ರೇಲಿಯಾ: 179 ಮತ್ತು 246; ಇಂಗ್ಲೆಂಡ್‌ 67 ಮತ್ತು 9 ವಿಕೆಟ್‌ಗೆ 362 (ಜೋ ರೂಟ್‌ 77, ಜೊ ಡೆನ್ಲಿ 50, ಸ್ಟೋಕ್ಸ್‌ ಔಟಾಗದೇ 135; ಹೇಜಲ್‌ವುಡ್‌ 85ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT