ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಆಯ್ಕೆಸಮಿತಿಯು ಪೂಜಾರ ಅವರನ್ನು ಬಲಿಪಶು ಮಾಡಿದೆ: ಗಾವಸ್ಕರ್‌ ತರಾಟೆ

Published 24 ಜೂನ್ 2023, 23:31 IST
Last Updated 24 ಜೂನ್ 2023, 23:31 IST
ಅಕ್ಷರ ಗಾತ್ರ

ನವದೆಹಲಿ: ಬಿಸಿಸಿಐ ಆಯ್ಕೆಸಮಿತಿಯು ಚೇತೇಶ್ವರ ಪೂಜಾರ ಅವರನ್ನು ‘ಬಲಿಪಶು’ವನ್ನಾಗಿ ಮಾಡಿದೆ ಮತ್ತು ದೇಶಿ ಕ್ರಿಕೆಟ್‌ನಲ್ಲಿ ರನ್ನುಗಳನ್ನು ಹರಿಸಿರುವ ಸರ್ಫರಾಜ್‌ ಖಾನ್‌ ಅವರನ್ನು ಕಡೆಗಣಿಸಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳುವ ಟೆಸ್ಟ್ ಮತ್ತು ಏಕದಿನ ತಂಡವನ್ನು ಶುಕ್ರವಾರ ಆಯ್ಕೆ ಸಮಿತಿ ಪ್ರಕಟಿಸಿತ್ತು.

ಸರ್ಫರಾಜ್‌ ಅವರನ್ನು ಕೈಬಿಟ್ಟಿರುವುದರ ಬಗ್ಗೆ ಪ್ರಸ್ತಾಪಿಸಿದ ಅವರು, ಟೆಸ್ಟ್‌ ತಂಡದ ಆಯ್ಕೆ ವೇಳೆ ದೇಶಿಯ ಕ್ರಿಕೆಟ್‌ನ ಅತ್ಯುನ್ನತ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ತೋರುವ ಸಾಧನೆಯನ್ನು ಪರಿಗಣಿಸದೇ ಇರುವುದರ ಹಿಂದಿನ ತರ್ಕ ಏನು ಎಂದು ಪ್ರಶ್ನಿಸಿದ್ದಾರೆ.

‘ಕಳೆದ ಮೂರು ಋತುಗಳಲ್ಲಿ ಸರ್ಫರಾಜ್ ಅವರು 100ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ತಂಡಕ್ಕೆ ಆಯ್ಕೆಯಾಗಲು ಅವರು ಇದಕ್ಕಿಂತ ಹೆಚ್ಚು ಇನ್ನೇನು ಮಾಡಬೇಕು? ಅವರಿಗೆ ಆಡುವ 11ರಲ್ಲಿ ಸ್ಥಾನ ಕೊಡದಿದ್ದರೂ, ತಂಡಕ್ಕೆ ತೆಗೆದುಕೊಳ್ಳಬಹುದಲ್ಲವೇ’ ಎಂದು ಗಾವಸ್ಕರ್ ಕ್ರೀಡಾ ಪತ್ರಿಕೆಯೊಂದರ ಜೊತೆ ಸಂದರ್ಶನದ ವೇಳೆ ಕೇಳಿದ್ದಾರೆ.

2022–23ನೇ ಋತುವಿನಲ್ಲಿ ಸರ್ಫರಾಜ್‌ ಅವರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಮೂರು ಶತಕಗಳನ್ನು ಒಳಗೊಂಡಂತೆ 92.66 ಸರಾಸರಿಯಲ್ಲಿ 556 ರನ್‌ಗಳನ್ನು ಪೇರಿಸಿದ್ದರು. 25 ವರ್ಷದ ಈ ಬ್ಯಾಟರ್‌ 2021–22ನೇ ಋತುವಿನಲ್ಲಿ 122.75 ಸರಾಸರಿಯಲ್ಲಿ 982 ರನ್‌ ಗಳಿಸಿದ್ದರು.

ಮುಂಬೈನ ಈ ಆಟಗಾರ ಒಟ್ಟಾರೆ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 79.65 ಸರಾಸರಿಯಲ್ಲಿ 3,505 ರನ್‌ ಗಳಿಸಿ ಗಮನ ಸೆಳೆದಿದ್ದಾರೆ. ಇದರಲ್ಲಿ 13 ಶತಕಗಳೂ ಒಳಗೊಂಡಿವೆ.

ಪೂಜಾರ ಅವರನ್ನು ಕೈಬಿಟ್ಟಿದ್ದಕ್ಕೂ ‘ಸನ್ನಿ’ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ‌ರೀತಿ ಭಾರತ ತಂಡದ ಸ್ಟಾರ್‌ ಆಟಗಾರರಿಗಿರುವಂತೆ ಅವರಿಗೆ (ಪೂಜಾರ) ಕೋಟಿಗಟ್ಟಲೆ ಫಾಲೋವರ್‌ಗಳಿಲ್ಲದೇ ಇರಬಹುದು. ಆದರೆ ಇದು ಯಾರನ್ನೂ ಕೈಬಿಡಲು ಕಾರಣವಾಗಬಾರದು’ ಎಂದಿದ್ದಾರೆ.

‘ಭಾರತ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಅವರೊಬ್ಬರನ್ನು ಬಲಿಪಶು ಮಾಡಲಾಗುತ್ತಿದೆ. ಅವರು ಭಾರತ ತಂಡದ ನಿಷ್ಠಾವಂತ ಸೇವಕ. ಸಮರ್ಥ ಸಾಧಕ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಟ್ಯಂತರ ಫಾಲೋವರ್‌ಗಳಿಲ್ಲದೇ ಇರುವುದರಿಂದ ಅವರನ್ನು ಕೈಬಿಟ್ಟರೆ ಏನೂ ಆಗದೆಂದು ಈ ರೀತಿ ಮಾಡುವುದು ಸರಿಯೇ? ಇದು ಗ್ರಹಿಕೆಗೆ ನಿಲುಕದ್ದು’ ಎಂದು ಹೇಳಿದ್ದಾರೆ.

‘ವಿಫಲವಾಗಿರುವ ಇತರ ಆಟ ಗಾರರನ್ನು ಉಳಿಸಿ, ಅವರನ್ನು ಕೈಬಿಡು ವುದರ ಹಿಂದಿನ ಮಾನದಂಡ ಏನು? ಇತ್ತೀಚಿನ ದಿನಗಳಲ್ಲಿ ಆಯ್ಕೆ ಸಮಿತಿ ಅಧ್ಯಕ್ಷರ ಅಥವಾ ಇತರ ಇನ್ನಾರದ್ದೇ ಪ್ರಮುಖರ ಮಾಧ್ಯಮಗೋಷ್ಠಿ ನಡೆಯುತ್ತಿಲ್ಲ. ಹೀಗಾಗಿ ಇಂಥ ಪ್ರಶ್ನೆಗಳನ್ನೂ ಕೇಳಲಾಗುತ್ತಿಲ್ಲ’ ಎಂದರು.

ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್‌ ಅವರನ್ನು ಪೂಜಾರ ಆಡುತ್ತಿದ್ದ ಮೂರನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ. ಸುಮಾರು ಒಂದು ದಶಕದಿಂದ ಪೂಜಾರ ಈ ಕ್ರಮಾಂಕದಲ್ಲಿ ಆಡಿದ್ದರು.

ಆಟಗಾರರನ್ನು ಆಯ್ಕೆ ಮಾಡುವಾಗ ವಯಸ್ಸು ಅಡ್ಡಿ ಬರಬಾರದು. ಇತ್ತೀಚಿನ ವರ್ಷಗಳಲ್ಲಿ ಆಟಗಾರರು 39 ಅಥವಾ 40 ವರ್ಷದವರೆಗೆ ಆಡುತ್ತಾರೆ. ಅವರೆಲ್ಲರೂ ದೈಹಿಕ ಕ್ಷಮತೆ ಹೊಂದಿರುತ್ತಾರೆ. ರನ್‌ಗಳನ್ನು ಹರಿಸುವವರೆಗೆ ಮತ್ತು ವಿಕೆಟ್‌ಗಳನ್ನು ಪಡೆಯುವವರೆಗೆ ವಯಸ್ಸು  ತಡೆಯಾಗಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT