ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್: ಭಾರತ ಆಡದಿದ್ದರೆ ಪಾಕಿಸ್ತಾನಕ್ಕೆ ಲಾಭ!

Last Updated 21 ಫೆಬ್ರುವರಿ 2019, 20:41 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವುಆಡದಿದ್ದರೆ ಪಾಕಿಸ್ತಾನ ತಂಡಕ್ಕೆ ಹೆಚ್ಚು ಲಾಭವಾಗಲಿದೆ. ಅನಾಯಾಸವಾಗಿ ಎರಡು ಪಾಯಿಂಟ್ ಗಳಿಸಿ ಗೆಲುವಿನ ಪಟ್ಟಿ ಸೇರುವುದು ಎಂದು ಸುನಿಲ್ ಗಾವಸ್ಕರ್ ಹೇಳಿದ್ದಾರೆ.

‘ಪುಲ್ವಾಮಾ ದಾಳಿಯು ಅತ್ಯಂತ ಹೇಯ ಕೃತ್ಯವಾಗಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು. ಈಗಾಗಲೇ ನಾವು ಪಾಕ್‌ನೊಂದಿಗೆ ದ್ವಿಪಕ್ಷೀಯ ಸರಣಿಗಳನ್ನು ಆಡುವುದನ್ನು ಬಿಟ್ಟಿದ್ದೇವೆ. ಮುಂದೆಯೂ ಸರಣಿಗಳನ್ನು ಆಡಬಾರದು. ಅದರಿಂದ ಪಾಕ್‌ ಕ್ರಿಕೆಟ್‌ಗೆ ಹೆಚ್ಚು ನಷ್ಟ ಮತ್ತು ಅವಮಾನವಾಗುತ್ತದೆ. ಆದರೆ ಬಹುತಂಡಗಳ ಸ್ಪರ್ಧೆಯಿರುವ ಟೂರ್ನಿಗಳಲ್ಲಿ ಭಾರತವು ಹಿಂದೆ ಸರಿದರೆ ನಮಗೆ ನಷ್ಟವಾಗುತ್ತದೆ. ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಭಾರತವು ಪಾಕ್ ವಿರುದ್ಧ ಒಮ್ಮೆಯೂ ಸೋತಿಲ್ಲ’ ಎಂದು ‘ಇಂಡಿಯಾ ಟುಡೆ’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಆದರೆ ಒಂದೊಮ್ಮೆ ಭಾರತ ಸರ್ಕಾರವು ತಂಡವನ್ನು ಆಡದಂತೆ ತಡೆದರೆ ನನ್ನ ಸಂಪೂರ್ಣ ಬೆಂಬಲ ಇದೆ. ಸರ್ಕಾರದ ಯಾವುದೇ ನಿರ್ಧಾರಕ್ಕೂ ಸಹಮತ ಇದೆ’ ಎಂದು ಸುನಿಲ್ ಹೇಳಿದ್ದಾರೆ.

‘ಐಸಿಸಿಯು ತನ್ನ ಸದಸ್ಯ ರಾಷ್ಟ್ರಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳಬಹುದು. ಆದರೆ, ಸದಸ್ಯ ರಾಷ್ಟ್ರಗಳು ಒಮ್ಮತ ನೀಡುವುದು ಕಷ್ಟ’ ಎಂದರು.

ಫೆ.27ರಿಂದ ನಾಲ್ಕು ದಿನಗಳ ಕಾಲ ನಡೆಯುವ ಐಸಿಸಿ ಸಭೆ ನಡೆಯಲಿದೆ.

‘ಪಾಕಿಸ್ತಾನದ ಪ್ರಧಾನಿಯಾಗಿರುವ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಈಕುರಿತು ಗಮನ ಹರಿಸಬೇಕು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಂದರ್ಭದಲ್ಲಿ ಇನ್ನು ಮುಂದೆ ಹೊಸ ಪಾಕಿಸ್ತಾನ ಉದಯಿಸಲಿದೆ ಎಂದಿದ್ದರು. ಭಾರತ ಒಂದು ಹೆಜ್ಜೆ ಮುಂದೆ ಬಂದರೆ, ಪಾಕ್ ಎರಡು ಹೆಜ್ಜೆ ಮುಂದೆ ಬರಲಿದೆ ಎಂದಿದ್ದರು. ಎರಡೂ ದೇಶಗಳ ಸಾಮರಸ್ಯ ಮರುಸ್ಥಾಪನೆಗೆ ಅವರೇ ಮೊದಲ ಹೆಜ್ಜೆ ಇಡಬೇಕು’ ಎಂದು ಗಾವಸ್ಕರ್ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 16ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಫೆಬ್ರುವರಿ 14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರರ ಬಾಂಬ್ ದಾಳಿಯಿಂದಾಗಿ ಸಿಆರ್‌ಪಿಎಫ್ ನ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಆದ್ದರಿಂದ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಆಡಬಾರದು ಎಂಬ ಒತ್ತಾಯ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರದ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ.

ಎಲ್ಲ ಕ್ರೀಡೆಗಳನ್ನೂ ಬಹಿಷ್ಕರಿಸಿ: ಗಂಗೂಲಿ
ಭಾರತ ತಂಡವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಮಾತ್ರವಲ್ಲ. ಬೇರೆ ಎಲ್ಲ ಕ್ರೀಡೆಗಳಲ್ಲಿಯೂ ಆಟವನ್ನು ಬಹಿಷ್ಕರಿಸಬೇಕು ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

‘ಭಾರತವು ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಿ ಮತ್ತು ಬಲಿಷ್ಠ ರಾಷ್ಟ್ರವಾಗಿದೆ. ಒಂದೊಮ್ಮೆ ಭಾರತ ತಂಡವು ವಿಶ್ವಕಪ್‌ ಟೂರ್ನಿಯಿಂದ ಹಿಂದೆ ಸರಿದರೆ ಐಸಿಸಿಗೇ ಹೆಚ್ಚು ಕಷ್ಟ–ನಷ್ಟಗಳು ಆಗಲಿವೆ. ಆದ್ದರಿಂದ ಬಿಸಿಸಿಐ ದಿಟ್ಟ ನಿರ್ಧಾರ ಕೈಗೊಳ್ಳಬೇಕು’ ಎಂದು ಗಂಗೂಲಿ ಹೇಳಿದ್ದಾರೆ.

ಮೂರು ದಿನಗಳ ಹಿಂದೆ ಸ್ಪಿನ್ನರ್ ಹರಭಜನ್ ಸಿಂಗ್ ಕೂಡ ಭಾರತವು ಪಾಕ್ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಬೇಕು ಎಂದಿದ್ದರು. ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಶಮಿ ಅವರು, ಪಾಕ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT