ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈನಾ ಆತ್ಮಕಥೆ 'ಬಿಲೀವ್‌' ಜೂ.14ಕ್ಕೆ: ಚಾಪೆಲ್‌ ಹೊಗಳಿದ ಸಿಎಸ್‌ಕೆ ಸ್ಟಾರ್‌

ಅಕ್ಷರ ಗಾತ್ರ

ನವದೆಹಲಿ: 22 ವರ್ಷಗಳ ಯಶಸ್ವಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪ್ರಯಾಣದ ನಂತರ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್‌ ರೈನಾ ಬರಹಗಾರನಾಗಿ ಬಡ್ತಿ ಪಡೆದಿದ್ದಾರೆ. ಪ್ರಸ್ತುತ 'ಚೆನ್ನೈ ಸೂಪರ್‌ ಕಿಂಗ್ಸ್‌' (ಸಿಎಸ್‌ಕೆ) ತಂಡದ ಪರ ಆಡುತ್ತಿರುವ ಸುರೇಶ್‌ ರೈನಾ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್‌ ವೃತ್ತಿಜೀವನದಿಂದ ಕಲಿತ ಪಾಠದ ಸಾರವನ್ನು ಬರಹದ ರೂಪದಲ್ಲಿ ಅಚ್ಚಾಗಿಸಿದ್ದಾರೆ.

ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ನೀಡಿದ ಸ್ಪೂರ್ತಿಯ ಪದ 'ಬಿಲೀವ್‌' ಎಂಬುದನ್ನು ತಮ್ಮ ಪುಸ್ತಕದ ಹೆಸರಾಗಿಸಿಕೊಂಡಿರುವುದು ವಿಶೇಷ. 2014ರಲ್ಲಿ 'ಬಿಲೀವ್' ಎಂಬ ಇಂಗ್ಲಿಷ್‌ ಪದವನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಗಲೂ ತೆಂಡೂಲ್ಕರ್‌ ಅವರಿಂದ ಸ್ಪೂರ್ತಿ ಪಡೆದ ಪದವಿದು ಎಂದು ಹೇಳಿದ್ದರು.

ಬಿಲೀವ್‌ - ವಾಟ್‌ ಲೈಫ್‌ ಆ್ಯಂಡ್‌ ಕ್ರಿಕೆಟ್‌ ಟಾಟ್‌ ಮಿ:
ಟೀಂ ಇಂಡಿಯಾದ ಎಡಗೈ ಬ್ಯಾಟ್ಸಮನ್‌ ಸುರೇಶ್‌ ರೈನಾ ಅವರ ಆತ್ಮಕಥೆಯ ಪೂರ್ಣ ಹೆಸರು 'ಬಿಲೀವ್‌ - ವಾಟ್‌ ಲೈಫ್‌ ಆ್ಯಂಡ್‌ ಕ್ರಿಕೆಟ್‌ ಟಾಟ್‌ ಮಿ'. ಇದೇ ಜೂನ್‌ 14ರಂದು ಪುಸ್ತಕ ಬಿಡುಗಡೆಗೊಳಿಸುವುದಾಗಿ ರೈನಾ ತಿಳಿಸಿದ್ದಾರೆ.

ಕ್ರಿಕೆಟ್‌ ಪ್ರಯಣದುದ್ದಕ್ಕೂ ಎದುರಿಸಿದ ಸವಾಲುಗಳು, ಗಾಯಗಳು, ವೈಫಲ್ಯಗಳು ಎಲ್ಲವನ್ನು ಮುಕ್ತವಾಗಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗುರಿಯಿಲ್ಲದೆ ಗಲ್ಲಿ ಸುತ್ತಿಕೊಂಡಿದ್ದ ಹುಡುಗ ಕ್ರಿಕೆಟ್‌ ಐಕಾನ್‌ ಆಗಿದ್ದು ಹೇಗೆ, ಲಕ್ಷಾಂತರ ಮಂದಿಯ ಪ್ರೀತಿ ಗಳಿಸಿದ್ದು ಹೇಗೆ ಎಂಬ ಸ್ಪೂರ್ತಿಗಾಥೆಯನ್ನು ಪುಸ್ತಕದಲ್ಲಿ ಎಳೆಎಳೆಯಾಗಿ ಬಿಡಿಸಿದ್ದಾರೆ. ರೈನಾರ ಈ ಪುಸ್ತಕವು ಬರಹಗಾರ ಭರತ್‌ ಸುಂದರೇಸನ್‌ ಸಹಾಯದೊಂದಿಗೆ ರಚಿಸಿದ್ದಾಗಿದೆ.

ಟೀಂ ಇಂಡಿಯಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇರು ಸ್ಥಾನ ಕಲ್ಪಿಸಿದ ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌, ರಾಹುಲ್‌‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಮಹೇಂದ್ರ ಸಿಂಗ್‌ ಧೋನಿ ಮತ್ತಿತರರಿಂದ ಅರಿತುಕೊಂಡ ವಿಚಾರಗಳನ್ನು ದಾಖಲಿಸಿದ್ದಾರೆ. ನಂಬಿಕೆ, ಜೀವನಪ್ರೀತಿ ಮತ್ತು ಶ್ರಮ ಎಷ್ಟು ಮುಖ್ಯ ಎಂಬುದನ್ನು ಅನುಭವದ ಮಾತುಗಳಲ್ಲಿ ರೈನಾ ಹೇಳಿದ್ದಾರೆ.
ಪೆಂಗ್ವಿನ್‌ಇಂಡಿಯಾ, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಪುಸ್ತಕಗಳನ್ನು ಕಾಯ್ದಿರಿಸಬಹುದು ಎಂದು ಸುರೇಶ್‌ ರೈನಾ ಟ್ವೀಟ್‌ ಮಾಡಿದ್ದಾರೆ.

226 ಏಕದಿನ ಪಂದ್ಯಗಳನ್ನು ಆಡಿರುವ ಸುರೇಶ್‌ ರೈನಾ 35.31 ರನ್‌ರೇಟ್‌ ಸರಾಸರಿಯಲ್ಲಿ 5,615 ರನ್‌ಗಳನ್ನು ಗಳಿಸಿದ್ದಾರೆ. ಸ್ಪಿನ್‌ ಮೂಲಕ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಗೆಲುವಿನ ಮಂತ್ರ ಬೋಧಿಸಿದ್ದು ಗ್ರೇಗ್‌ ಚಾಪೆಲ್‌!
ರೈನಾ ಜೊತೆಗೆ ಆಡಿದ ಹೆಚ್ಚಿನ ಆಟಗಾರರು ಭಾರತ ತಂಡದ ತರಬೇತುದಾರರಾಗಿದ್ದ ಆಸ್ಟ್ರೇಲಿಯಾದ ಗ್ರೇಗ್‌ ಚಾಪೆಲ್‌ ಅವರನ್ನು ಟೀಕಿಸಿದ್ದರು. ಆದರೆ ರೈನಾ ತಮ್ಮ ಪುಸ್ತಕದಲ್ಲಿ ಚೇಸಿಂಗ್‌ ಸಂದರ್ಭದಲ್ಲಿ ಏಕದಿನ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎಂಬುದನ್ನು ಆಸ್ಟ್ರೇಲಿಯನ್ನರು ಹೇಳಿಕೊಟ್ಟರು. ಚಾಪೆಲ್‌ ತರಬೇತುದಾರರಾಗಿದ್ದ ಸಂದರ್ಭದ ಎಲ್ಲ ವಿವಾದಗಳ ಹೊರತಾಗಿ ಗೆಲ್ಲುವುದು ಹೇಗೆ ಮತ್ತು ಗೆಲುವಿನ ಪ್ರಾಮುಖ್ಯತೆ ಏನು ಎಂಬುದನ್ನು ತಿಳಿಸಿಕೊಟ್ಟರು ಎಂದು ರೈನಾ ಪುಸ್ತಕದಲ್ಲಿ ದಾಖಲಿಸಿರುವುದಾಗಿ ಇನ್‌ಸೈಡ್‌ಸ್ಪೋರ್ಟ್‌ ವರದಿ ಮಾಡಿದೆ.

ದಂಬುಲ್ಲಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೈನಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಸರಣಿಯ ಮುಖ್ಯಸ್ಥಿಕೆ ವಹಿಸಿದ್ದವರು ಗ್ರೇಗ್‌ ಚಾಪೆಲ್‌ ಎಂಬುದು ಗಮನಾರ್ಹ. ಇದರಿಂದ ರೈನಾ ಅವರ ಪ್ರತಿಭೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುವಂತೆ ಮಾಡಿದ್ದವರ ಪೈಕಿ ಚಾಪೆಲ್‌ ಕೂಡ ಒಬ್ಬರು ಎನ್ನಬಹುದು.

ಐಪಿಎಲ್‌ನಲ್ಲಿ ರನ್‌ ರೈನಾ!
ಟೀಂ ಇಂಡಿಯಾ ತಂಡದಿಂದ ಬಹುತೇಕ ಹೊರಗುಳಿದಿರುವ ಸುರೇಶ್‌ ರೈನಾ ಐಪಿಎಲ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತಿರುವ ಸುರೇಶ್‌ ರೈನ್‌ ಅತಿಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೆ ಆಡಿದ ಐಪಿಎಲ್‌ ಪಂದ್ಯಗಳಲ್ಲಿ ರೈನಾ ಒಟ್ಟು 5,491 ರನ್‌ಗಳನ್ನು ಕಲೆಹಾಕಿದ್ದಾರೆ. ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT