ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಟ್ರಿಕ್ 'ಗೋಲ್ಡನ್ ಡಕ್': ಈ ರೀತಿ ಔಟಾದ ಭಾರತದ ಮೊದಲ ಬ್ಯಾಟರ್ ಸೂರ್ಯಕುಮಾರ್

Last Updated 23 ಮಾರ್ಚ್ 2023, 13:12 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಬ್ಯಾಟರ್ ಸೂರ್ಯಕುಮಾರ್‌ ಯಾದವ್‌ ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಕ್ರಿಕೆಟ್‌ ಸರಣಿಯ ಮೂರೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದಾರೆ. ಆ ಮೂಲಕ ಸತತ ಮೂರು ಬಾರಿ 'ಗೋಲ್ಡನ್‌ ಡಕ್‌' (ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್‌) ಆದ ಭಾರತದ ಮೊದಲ ಬ್ಯಾಟರ್‌ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಮೂರು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ತಂಡ 1–2 ಅಂತರದಿಂದ ಗೆದ್ದುಕೊಂಡಿದೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯವನ್ನು 5 ವಿಕೆಟ್‌ ಅಂತರದಿಂದ ಗೆದ್ದಿದ್ದ ಭಾರತ, ನಂತರ ವಿಶಾಖಪಟ್ಟಣ ಹಾಗೂ ಚೆನ್ನೈನಲ್ಲಿ ನಡೆದ ಉಳಿದೆರಡು ಪಂದ್ಯಗಳಲ್ಲಿ ಮುಗ್ಗರಿಸಿತ್ತು.

ಸೂರ್ಯಕುಮಾರ್‌ ಮೊದಲೆರಡು ಪಂದ್ಯಗಳಲ್ಲಿ ಆಸಿಸ್‌ ವೇಗಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದರು. ಮೂರನೇ ಪಂದ್ಯದಲ್ಲಿ ಸ್ಪಿನ್ನರ್‌ ಆಸ್ಟನ್‌ ಅಗರ್‌ಗೆ ಕ್ಲೀನ್‌ ಬೌಲ್ಡ್‌ ಆದರು.

ಭಾರತದವರೇ ಆದ ಸಚಿನ್‌ ತೆಂಡೂಲ್ಕರ್‌ (1994), ಅನಿಲ್‌ ಕುಂಬ್ಳೆ (1996), ಜಹೀರ್‌ ಖಾನ್‌ (2003-04), ಇಶಾಂತ್‌ ಶರ್ಮಾ (2010-11), ಜಸ್‌ಪ್ರೀತ್‌ ಬೂಮ್ರಾ (2017-2019) ಈ ಹಿಂದೆ ಸತತ ಮೂರು ಸಲ ಶೂನ್ಯಕ್ಕೆ ಔಟಾಗಿದ್ದರು. ಆದರೆ, 'ಗೋಲ್ಡನ್‌ ಡಕ್‌' ಆದ ಭಾರತದ ಮೊದಲ ಹಾಗೂ ವಿಶ್ವದ 14ನೇ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌.

ಗೋಲ್ಡನ್‌ ಡಕ್‌ ಆದ ಬ್ಯಾಟರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಅಲೆಕ್‌ ಸ್ಟೆವರ್ಟ್‌, ಆಸ್ಟ್ರೇಲಿಯಾದ ಆಂಡ್ರೋ ಸೈಮಂಡ್ಸ್ ಹಾಗೂ ಶೇನ್‌ ವಾಟ್ಸನ್‌ ಅವರಂಥ ದಿಗ್ಗಜರೂ ಇದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಅಬ್ಬರಿಸುವ ಸೂರ್ಯ, ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. 50 ಓವರ್‌ಗಳ ಕ್ರಿಕೆಟ್‌ನಲ್ಲಿ ಈವರೆಗೆ 23 ಪಂದ್ಯಗಳ 21 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು, ಕೇವಲ 24.06ರ ಸರಾಸರಿಯಲ್ಲಿ 433 ರನ್‌ ಗಳಿಸಿದ್ದಾರೆ. 64 ರನ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದ್ದು, ಎರಡು ಬಾರಿ ಮಾತ್ರಯಷ್ಟೇ ಅರ್ಧಶತಕ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT