ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಬಗ್ಗೆ ಸೂರ್ಯಕುಮಾರ್ ಮಾಡಿದ್ದ ಹಳೆಯ ಟ್ವೀಟ್‌ಗಳಿಗೆ ಮೆಚ್ಚುಗೆಯ ಮಹಾಪೂರ

Last Updated 29 ಅಕ್ಟೋಬರ್ 2020, 14:38 IST
ಅಕ್ಷರ ಗಾತ್ರ

ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಆಡಿದ ಎರಡನೇ ಪಂದ್ಯದ ವೇಳೆ, ವಿರಾಟ್‌ ಕೊಹ್ಲಿ ಅವರು ಸೂರ್ಯಕುಮಾರ್‌ ಯಾದವ್‌ ಅವರನ್ನು ಕೆಣಕಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ. ಅದರ ಬೆನ್ನಲ್ಲೇ ಕೊಹ್ಲಿ ಕುರಿತು ಯಾದವ್‌ ಅವರು ಈ ಹಿಂದೆ ಮಾಡಿದ್ದ ಕೆಲವು ಟ್ವೀಟ್‌ಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಬುಧವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ, ನಿಗದಿತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಮುಂಬೈ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 166 ರನ್‌ ಗಳಿಸಿ ಜಯದ ನಗೆ ಬೀರಿತ್ತು.

ಮುಂಬೈ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಯಾದವ್‌ ಬಾರಿಸಿದ ಚೆಂಡನ್ನು ಹಿಡಿತಕ್ಕೆ ಪಡೆದ ಕೊಹ್ಲಿ, ಅವರನ್ನೇ ದಿಟ್ಟಿಸಿ ನೋಡುತ್ತಾ ಹತ್ತಿರಕ್ಕೆ ಹೋಗಿದ್ದರು. ಯಾದವ್‌ ಕೂಡ ಕೊಹ್ಲಿಯನ್ನೇ ನೋಡುತ್ತ ಇಂದಿಂಚೂ ಕದಲದೆ ನಿಂತರು. ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿರಲಿಲ್ಲವಾದರೂ, ಕೊಹ್ಲಿಯ ವರ್ತನೆಗೆ ಟೀಕೆ ವ್ಯಕ್ತವಾಗಿದೆ.

ಪಂದ್ಯದಲ್ಲಿ ಅಜೇಯ ಆಟವಾಡಿದ ಯಾದವ್‌ ಕೇವಲ 43 ಎಸೆತಗಳಲ್ಲಿ ಅಜೇಯ 79 ರನ್‌ ಗಳಿಸಿ ತಮ್ಮ ತಂಡಕ್ಕೆ ನಿರಾಯಾಸವಾಗಿ ಗೆಲುವು ತಂದುಕೊಟ್ಟರು.

ಯಾದವ್‌ ಟ್ವೀಟ್‌ಗಳಿಗೆ ಮೆಚ್ಚುಗೆ
ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಕೊಹ್ಲಿ ಅವರ ಚಿತ್ರಗಳನ್ನು ಹಂಚಿಕೊಂಡಿದ್ದ ಯಾದವ್‌,‘ಈ ಒಂದು ಕಾರಣಕ್ಕಾಗಿ. ವಿಶ್ವದ ಶ್ರೇಷ್ಠ ಸ್ಥಾನಕ್ಕೇರಿದ ಅವರ ಪಯಣ ಬಗ್ಗೆ ಯಾರಾದರೂ ಒಂದು ಪದದಲ್ಲಿ ಹೇಳುವಿರಾ?‘ ಎಂದು 2019ರ ಡಿಸೆಂಬರ್‌ನಲ್ಲಿ ಬರೆದುಕೊಂಡಿದ್ದರು.

‘ಎಲ್ಲಿ ಒತ್ತಡ ಇರುತ್ತದೋ ಅಲ್ಲಿ ಆತನಿರುತ್ತಾನೆ. ಭಾರತದ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಮಾಡುವಾಗ ದೇವರೇ ನಡೆದಾಡುವುದನ್ನು ಕಂಡೆ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಕೊಹ್ಲಿಯನ್ನು ಹೊಗಳಿದ್ದರು. ಈ ಟ್ವೀಟ್‌ಗಳಿಗೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಈ ಬಾರಿಯ ಐಪಿಎಲ್‌ನಲ್ಲಿ 12 ಪಂದ್ಯಗಳ 11 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಯಾದವ್‌, ಮೂರು ಅರ್ಧಶತಕ ಸಹಿತ 362 ರನ್‌ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದರೂ ಅವರನ್ನು ಆಯ್ಕೆಗೆ ಪರಿಗಣಿಸದಿರುವುರು ಏಕೆ ಎಂದು ಕೆಲ ಹಿರಿಯ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದಾಗಲೇ ವಿರಾಟ್‌ ಈ ರೀತಿ ವರ್ತಿಸಿರುವುದು ಕ್ರಿಕೆಟ್‌ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT