ಶುಕ್ರವಾರ, ಡಿಸೆಂಬರ್ 4, 2020
22 °C

PV Web Exclusive | ಕ್ರಿಕೆಟ್‌ ಲೋಕದ ಚಿರ ಯುವಕ ಕ್ರಿಸ್‌ ಗೇಲ್‌!

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

‘ಸ್ಟಿಲ್‌ ದಿ ಬಾಸ್‌’... ‘ದಿ ಫೈರ್‌ ಸ್ಟಿಲ್‌ ಬರ್ನ್ಸ್‌ ಬ್ರೈಟ್‌’... ‘ದಿ ಗ್ರೇಟೆಸ್ಟ್‌ ಟಿ–20 ಪ್ಲೇಯರ್‌ ಆಫ್‌ ಆಲ್‌ ಟೈಮ್‌’.. ‘ಬ್ರಾಡ್ಮನ್‌ ಆಫ್‌ ಟಿ–20 ಕ್ರಿಕೆಟ್‌’...‘ಎಂಟರ್‌ಟೇನ್‌ಮೆಂಟ್ ಕಾ ಬಾಪ್‌’....

ನಾಲ್ಕು ದಿನಗಳ ಹಿಂದೆ, ಅಂದರೆ ಅ.30ರಂದು ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ಹಾಗೂ ಕಿರಿಯ ಕ್ರಿಕೆಟಿಗರು ಹೀಗೆ ಶುಭಾಶಯಗಳ ಮಳೆಯನ್ನೇ ಸುರಿಸಿದ್ದರು.

ಅಂದು ಅವರೆಲ್ಲಾ ಹಾಡಿ ಹೊಗಳಿದ ಆ ಕ್ರಿಕೆಟಿಗನ ಹೆಸರು ಕ್ರಿಸ್ಟೋಫರ್‌ ಹೆನ್ರಿ ಗೇಲ್‌. ಕ್ರಿಕೆಟ್‌ ಲೋಕದ ಚಿರ ಯುವಕ!

ಅಂದಹಾಗೆ ಗೇಲ್‌ಗೆ ಈಗ 41 ವರ್ಷ ವಯಸ್ಸು. ಅವರ ಓರಗೆಯ ಆಟಗಾರರ ಪೈಕಿ ಹಲವರು ಕ್ರಿಕೆಟ್‌ಗೆ ‘ಗುಡ್‌ ಬೈ’ ಹೇಳಿ ಕೋಚಿಂಗ್‌ನತ್ತ ಹೊರಳಿದ್ದಾರೆ. ಇನ್ನೂ ಕೆಲವರು ವೀಕ್ಷಕ ವಿವರಣೆ ನೀಡುವುದರಲ್ಲಿ ಮುಳುಗಿ ಹೋಗಿದ್ದಾರೆ. ಆದರೆ ಗೇಲ್‌ ಈಗಲೂ ಕ್ರಿಕೆಟ್‌ ಅಂಗಳದಲ್ಲಿ ರನ್‌ ಹೊಳೆ ಹರಿಸುತ್ತಿದ್ದಾರೆ. ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸುವ ಮೂಲಕ ಅಭಿಮಾನಿಗಳ ಹೃದಯ ಸಾಮಾಟ್ರರಾಗಿ ಮೆರೆಯುತ್ತಿದ್ದಾರೆ.

ಕೆರಿಬಿಯನ್‌ ನಾಡಿನ ಈ ಕ್ರಿಕೆಟ್‌ ಕಲಿ, ಮೈದಾನಕ್ಕಿಳಿದರೆ ಎದುರಾಳಿ ಬೌಲರ್‌ಗಳಲ್ಲಿ ನಡುಕ ಶುರುವಾಗುತ್ತದೆ. ಬೌಲರ್‌ ಎಷ್ಟೇ ವೇಗವಾಗಿ ಚೆಂಡನ್ನು ಹಾಕಿದರೂ ಅದನ್ನು ಲೀಲಾಜಾಲವಾಗಿ ಬೌಂಡರಿಗಟ್ಟಬಲ್ಲ ತಾಕತ್ತು ಗೇಲ್‌ ಅವರಲ್ಲಿ ಇನ್ನೂ ಇದೆ.

ಅದಕ್ಕೆ ಈ ಬಾರಿಯ ಐಪಿಎಲ್‌ನ 50ನೇ ಪಂದ್ಯವೇ ಸಾಕ್ಷಿ. ಅಬುಧಾಬಿಯ ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಅ.30ರಂದು ನಡೆದಿದ್ದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಹಣಾಹಣಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಗೇಲ್‌, ಅಕ್ಷರಶಃ ಗರ್ಜಿಸಿದ್ದರು. ಯುವ ಆಟಗಾರರೇ ನಾಚುವಂತೆ ಬ್ಯಾಟ್‌ ಬೀಸಿದ್ದ ಅವರು 63 ಎಸೆತಗಳಲ್ಲಿ 99 ರನ್‌ಗಳನ್ನು ದಾಖಲಿಸಿದ್ದರು. ಅಂದು ಅವರ ಬ್ಯಾಟ್‌ನಿಂದ ಎಂಟು ಸಿಕ್ಸರ್‌ಗಳೂ ಸಿಡಿದಿದ್ದವು. ಆ ಮೂಲಕ ಹೊಸ ಮೈಲಿಗಲ್ಲೊಂದನ್ನೂ ಅವರು ಸ್ಥಾಪಿಸಿದ್ದರು.

ಗೇಲ್‌ ಅವರ ದಾಖಲೆಗಳ ಪಟ್ಟಿ ಬಹಳ ದೊಡ್ಡದಿದೆ. ಅದಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಸಹಸ್ರ ಸಿಕ್ಸರ್‌ಗಳು.

ಹೌದು. ಗೇಲ್‌ ಈಗ 1,000 ಸಿಕ್ಸರ್‌ಗಳ ಸರದಾರ. ಟಿ–20 ಮಾದರಿಯಲ್ಲಿ ಅವರಿಂದ ಈ ಸಾಧನೆ ಅರಳಿದೆ. ಅವರು ಐಪಿಎಲ್‌ನಲ್ಲಷ್ಟೇ ಅಲ್ಲ. ಆಸ್ಟ್ರೇಲಿಯಾದ ಬಿಗ್‌ಬ್ಯಾಷ್‌, ಇಂಗ್ಲೆಂಡ್‌ನ ಕೌಂಟಿ, ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌, ಪಾಕಿಸ್ತಾನ ಸೂಪರ್‌ ಲೀಗ್‌, ಅಫ್ಗಾನಿಸ್ತಾನ ಪ್ರೀಮಿಯರ್‌ ಲೀಗ್‌ ಹೀಗೆ ವಿಶ್ವದ ನಾನಾ ಭಾಗಗಳಲ್ಲಿ ಆಯೋಜನೆಯಾಗುವ ಚುಟುಕು ಕ್ರಿಕೆಟ್‌ ಲೀಗ್‌ಗಳಲ್ಲೆಲ್ಲಾ ಪಾಲ್ಗೊಂಡು ಭುಜಬಲ ಪರಾಕ್ರಮ ಮೆರೆದಿದ್ದಾರೆ. ಅದಕ್ಕೆ ಈ ದಾಖಲೆಯೇ ಸಾಕ್ಷಿ. ಚುಟುಕು ಕ್ರಿಕೆಟ್‌ನಲ್ಲಿ ಸಾವಿರ ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಗೇಲ್‌ ಭಾಜನರಾಗಿದ್ದಾರೆ.

ಐಪಿಎಲ್‌ನಲ್ಲಿ ‘ಕಿಂಗ್‌’...

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ದಾಖಲೆಗಳ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ ಗೇಲ್‌ ಹೆಸರು ಎದ್ದು ಕಾಣುತ್ತದೆ. ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ಪರ ಆಡುವ ಮೂಲಕ ಐಪಿಎಲ್‌ ಪಯಣ ಶುರು ಮಾಡಿದ್ದ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಏಳು ವರ್ಷ ರಾಜನಾಗಿ ಮೆರೆದಿದ್ದರು. 2018ರಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಸೇರಿದ ನಂತರವೂ ಅವರ ಅಬ್ಬರ ಮುಂದುವರಿದಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದವರ ಪಟ್ಟಿಯಲ್ಲಿ ಗೇಲ್‌ ಅಗ್ರ ಪಟ್ಟ ಅಲಂಕರಿಸಿದ್ದಾರೆ. 132 ಪಂದ್ಯಗಳನ್ನು ಆಡಿರುವ ಅವರ ಖಾತೆಯಲ್ಲಿ 349 ಸಿಕ್ಸರ್‌ಗಳಿವೆ.

ಐಪಿಎಲ್‌ನ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರ ಎಂಬ ಹಿರಿಮೆಯೂ ಗೇಲ್‌ ಅವರದ್ದು. 2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪುಣೆ ವಾರಿಯರ್ಸ್‌ ವಿರುದ್ಧದ ಹೋರಾಟದಲ್ಲಿ ಅವರು ಬರೋಬ್ಬರಿ 17 ಸಿಕ್ಸರ್‌ಗಳನ್ನು ದಾಖಲಿಸಿದ್ದರು. ಆ ಹೋರಾಟದಲ್ಲಿ ಅವರ ಖಾತೆಗೆ ಸೇರಿದ್ದು 175ರನ್‌!

ಕೆರಿಬಿಯನ್‌ನ ದಣಿವರಿಯದ ದೊರೆ...

ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ಜನಿಸಿದ ಗೇಲ್‌, ಅಲ್ಲಿನ ಲುಕಾಸ್‌ ಕ್ಲಬ್‌ ಮೂಲಕ ಕ್ರಿಕೆಟ್‌ ಪಯಣ ಶುರುಮಾಡಿದ್ದರು. 19ನೇ ವಯಸ್ಸಿನಲ್ಲಿ (1998) ಪ್ರಥಮ ದರ್ಜೆ ಕ್ರಿಕೆಟ್‌ಗೆ ಅಡಿ ಇಟ್ಟ ಅವರು ಮರು ವರ್ಷವೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. 1999ರ ಸೆಪ್ಟೆಂಬರ್‌ 11ರಂದು ನಡೆದಿದ್ದ ಭಾರತದ ವಿರುದ್ಧದ ಏಕದಿನ ಪಂದ್ಯ ಅವರ ಪಾಲಿಗೆ ಮೊದಲನೆಯದ್ದು. ಅನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ‘ಆನೆ ನಡೆದದ್ದೇ ಹಾದಿ’ ಎಂಬಂತೆ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಛಾಪು ಒತ್ತಿ ‘ಯುನಿವರ್ಸ್‌ ಬಾಸ್‌’ ಆಗಿ ಬೆಳೆದಿದ್ದಾರೆ. ಜಮೈಕಾ ಮತ್ತು ಲಂಡನ್‌ನಲ್ಲಿ ಕ್ರಿಕೆಟ್‌ ಅಕಾಡೆಮಿಗಳನ್ನು ತೆರೆದು ಎಳೆಯರಿಗೆ ಆಟದ ಪಾಠಗಳನ್ನೂ ಹೇಳಿಕೊಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು