ಸೋಮವಾರ, ನವೆಂಬರ್ 28, 2022
20 °C
ಬಾಂಗ್ಲಾ ವಿರುದ್ಧ ಪಂದ್ಯ; ರೋಹಿತ್ ಬಳಗಕ್ಕೆ ಸೆಮಿ ಕನಸು; ರಾಹುಲ್‌ಗೆ ಮತ್ತೊಂದು ಅವಕಾಶ?

T20WC: ಓವಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶದ ಸವಾಲ್

ಆರ್. ಕೌಶಿಕ್ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್: ಐತಿಹಾಸಿಕ ಅಡಿಲೇಡ್ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತಕ್ಕೆ ಹಾಗೂ ಬಾಂಗ್ಲಾದೇಶ ತಂಡಗಳಿಗೆ ಮರೆಯಲಾಗದ ನೆನಪುಗಳಿವೆ. 

ಎರಡು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 36 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿದ ಅತ್ಯಂತ ಸಣ್ಣ ಮೊತ್ತ ಅದಾಗಿದೆ. ಆದರೆ ಇದೇ ಅಂಗಳದಲ್ಲಿ 2015ರಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ತಂಡಕ್ಕೆ ಬಾಂಗ್ಲಾ ಆಘಾತ ನೀಡಿತ್ತು.  

ಇದೇ ತಾಣದಲ್ಲಿ ಬುಧವಾರ ಭಾರತ ಮತ್ತು ಬಾಂಗ್ಲಾ ಮುಖಾಮುಖಿಯಾಗಲಿವೆ. ಕಳೆದೊಂದು ದಶಕದಲ್ಲಿ ಬಾಂಗ್ಲಾದೇಶ ತಂಡವೂ ತನ್ನ ಬಲವರ್ಧನೆ ಮಾಡಿಕೊಂಡಿದೆ. ಅದರಿಂದಾಗಿ  ಉಭಯ ತಂಡಗಳು ಎದುರಾದಾಗಲೆಲ್ಲ ತುರುಸಿನ ಪೈಪೋಟಿಯ ನಿರೀಕ್ಷೆ ಗರಿಗೆದರುತ್ತದೆ. ಚುಟುಕು ಮಾದರಿಯಲ್ಲಿ ಭಾರತವು ಬಾಂಗ್ಲಾ ಎದುರು 10–1ರ ಗೆಲುವಿನ ಮುನ್ನಡೆಯನ್ನು ಹೊಂದಿದೆ. ಆದರೂ ಸೋತ ಪಂದ್ಯಗಳಲ್ಲೂ ಬಾಂಗ್ಲಾ ದಿಟ್ಟ ಪೈಪೋಟಿ ನೀಡಿರುವುದು ಗಮನಾರ್ಹ. 

2016ರಲ್ಲಿ ಬೆಂಗಳೂರಿನಲ್ಲಿ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಬಾಂಗ್ಲಾಕ್ಕೆ  ಜಯಿಸಲು ಮೂರು ಎಸೆತಗಳಲ್ಲಿ ಎರಡು ರನ್‌ಗಳು ಬೇಕಾಗಿದ್ದವು. ಬ್ಯಾಟರ್ ಮುಷ್ಫಿಕುರ್ ರಹೀಮ್ ಮುಂಚಿತವಾಗಿಯೇ ವಿಜಯೋತ್ಸವ ಆಚರಿಸಿದ್ದರು. ಹಾರ್ದಿಕ್ ಪಾಂಡ್ಯ ಹಾಕಿದ ಆ ಓವರ್‌ನಲ್ಲಿ ಬಾಂಗ್ಲಾ ಕೊನೆಯ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಕೊನೆಯ ಎಸೆತದಲ್ಲಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಓಡುತ್ತ ಬಂದು ಮುಸ್ತಫಿಜರ್ ರೆಹಮಾನ್ ಅವರನ್ನು ರನೌಟ್ ಮಾಡಿದ್ದರು. ಬಾಂಗ್ಲಾ ಕೇವಲ ಒಂದು ರನ್‌ ಅಂತರದಿಂದ ಸೋಲುಂಡಿತ್ತು. 

2018ರಲ್ಲಿ ಕೊಲಂಬೊದಲ್ಲಿ ನಡೆದಿದ್ದ ನಿಧಾಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಭಾರತಕ್ಕೆ ಐದು ರನ್‌ಗಳ ಅಗತ್ಯವಿತ್ತು. ದಿನೇಶ್ ಕಾರ್ತಿಕ್ ಅವರು ಸೌಮ್ಯ ಸರ್ಕಾರ್ ಎಸೆತವನ್ನು ಫ್ಲ್ಯಾಟ್‌ ಸಿಕ್ಸರ್‌ ಹೊಡೆಯುವ ಮೂಲಕ ಬಾಂಗ್ಲಾದಿಂದ ಗೆಲುವು ಕಿತ್ತುಕೊಂಡಿದ್ದರು. ಈ ಸೋಲುಗಳ ಮುಯ್ಯಿ ತೀರಿಸಿಕೊಳ್ಳುವ ಛಲದಿಂದ ಇಲ್ಲಿ ಶಕೀಬ್ ಬಳಗವು ಭಾರತಕ್ಕೆ ಕಠಿಣ ಸವಾಲೊಡ್ಡಬಹುದು. ಸೂಪರ್ 12ರ ಹಂತದಲ್ಲಿ ಬಾಂಗ್ಲಾ ತಂಡವು ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಜಯಿಸಿತ್ತು. ಎರಡನೇಯದ್ದರಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋತಿತ್ತು. ಮೂರನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ರೋಚಕ ಜಯಗಳಿಸಿತ್ತು. 

ಭಾರತ ತನ್ನ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ಧ ಗೆದ್ದಿತ್ತು. ಆದರೆ, ದಕ್ಷಿಣ ಆಫ್ರಿಕಾ ಎದುರು ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವೈಫಲ್ಯಗಳಿಂದ ಸೋಲಿನ ಕಹಿಯುಂಡಿತು. ಸತತ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್. ರಾಹುಲ್ ಅವರಿಗೆ ತಮ್ಮ ತಂಡದ ನಾಯಕ ಹಾಗೂ ಆಯ್ಕೆಗಾರರ  ವಿಶ್ವಾಸವನ್ನು ಉಳಿಸಿಕೊಳ್ಳಲು ಮತ್ತೊಂದು ಅವಕಾಶ ಲಭಿಸಬಹುದು.  ಆದರೆ ವಿರಾಟ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಕಟ್ಟಿಹಾಕುವ ಸವಾಲು ಬಾಂಗ್ಲಾದ ಬೌಲರ್‌ಗಳಾದ ತಸ್ಕಿನ್ ಹಾಗೂ ಅನುಭವಿ ಮುಸ್ತಫಿಜುರ್ ರೆಹಮಾನ್ ಮುಂದಿದೆ.

ಮಳೆ ಸಾಧ್ಯತೆ

ಅಡಿಲೇಡ್‌ನಲ್ಲಿ ತಂಪು ವಾತಾವರಣವಿದೆ. ಮಂಗಳವಾರ ಆಗಾಗ ಮಳೆಯಾಗಿದೆ. ಬುಧವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ವರದಿಗಳಿವೆ. ಉಭಯ ತಂಡಗಳಿಗೂ ಸೆಮಿ ಪ್ರವೇಶಕ್ಕೆ ಇದೂ ಸೇರಿದಂತೆ ಎರಡು ಪಂದ್ಯಗಳಲ್ಲಿ ಜಯಿಸುವುದು ಅಗತ್ಯವಾಗಿದೆ. ಆದರೆ ಮಳೆ ಬಂದು ರದ್ದಾದರೆ ತಲಾ ಒಂದು ಅಂಕ ಹಂಚಿಕೊಳ್ಳಬೇಕಾಗುತ್ತದೆ.

ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಆರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ರಿಷಭ್ ಪಂತ್.

ಬಾಂಗ್ಲಾದೇಶ: ಶಕೀಬ್ ಅಲ್ ಹಸನ್ (ನಾಯಕ), ನಜ್ಮುಲ್ ಹುಸೇನ್ ಶಾಂತೊ, ಸೌಮ್ಯ ಸರ್ಕಾರ್, ಲಿಟನ್ ದಾಸ್, ಅಫಿಫ್ ಹುಸೇನ್, ಮೊಸಾದೆಕ್ ಹುಸೇನ್, ನೂರುಲ್ ಹಸನ್ (ವಿಕೆಟ್‌ಕೀಪರ್), ಯಾಸೀರ್ ಅಲಿ, ಮುಸ್ತಫಿಜರ್ ರೆಹಮಾನ್, ಹಸನ್ ಮೆಹಮೂದ್, ತಸ್ಕಿನ್ ಅಹಮದ್

ಭಾರತದ ಸೆಮಿ ಹಾದಿ..

ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಸೋತ ಭಾರತ ತಂಡಕ್ಕೆ ಸೆಮಿಫೈನಲ್ ಹಾದಿ ಸುಲಭವಾಗಿಲ್ಲ. ಎರಡನೇ ಗುಂಪಿನಲ್ಲಿ ಆಡುತ್ತಿರುವ ಭಾರತ ತಂಡವು ತನ್ನ ಪಾಲಿನ ಇನ್ನೆರಡು ಪಂದ್ಯಗಳಲ್ಲಿ ಬಾಂಗ್ಲಾ ಹಾಗೂ ಜಿಂಬಾಬ್ವೆ ತಂಡಗಳನ್ನು ಸೋಲಿಸಿದರೆ ಸೆಮಿ ಹಾದಿ ಸರಾಗವಾಗಲಿದೆ. ಇದರಿಂದ ಕೊನೆಯ ಹಂತದ ಲೆಕ್ಕಾಚಾರಗಳ ಜಂಜಾಟ ತಪ್ಪಲಿದೆ. ಮೂರು ಪಂದ್ಯಗಳನ್ನು ಅಡಿ ಎರಡರಲ್ಲಿ ಜಯಿಸಿರುವ ಭಾರತದ ಖಾತೆಯಲ್ಲಿ ನಾಲ್ಕು ಅಂಕಗಳು ಇವೆ. ಬಾಂಗ್ಲಾದೇಶದ ಖಾತೆಯಲ್ಲಿಯೂ ಇಷ್ಟೇ ಅಂಕಗಳಿವೆ.

ಬುಧವಾರ ಉಭಯ ತಂಡಗಳು ಮುಖಾಮುಖಿಯಾಗಲಿರುವ ಪಂದ್ಯದ ಶೇ 70ರಷ್ಟು ಅವಧಿಯಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಅದರಿಂದಾಗಿ ಪಂದ್ಯ ರದ್ದಾದರೆ ಎರಡೂ ತಂಡಗಳೂ ತಲಾ ಒಂದು ಅಂಕ ಗಳಿಸುತ್ತವೆ. ಆದರೆ, ಬಾಂಗ್ಲಾಗಿಂತ (–1.533) ಭಾರತದ ನೆಟ್‌ ರನ್‌ರೇಟ್ (+0.844) ಉತ್ತಮವಾಗಿದೆ. ಈ ಸನ್ನಿವೇಶದಲ್ಲಿ ಭಾರತವು ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಹಾಗೂ ಬಾಂಗ್ಲಾ ತಂಡ ಪಾಕಿಸ್ತಾನ ಎದುರು ಜಯಿಸಿದಾಗ ಈ ರನ್‌ರೇಟ್‌ ಲೆಕ್ಕಾಚಾರ ಮುನ್ನೆಲೆಗೆ ಬರಬಹುದು. ಉಭಯ ತಂಡಗಳು ತಮ್ಮ ಪಾಲಿನಲ್ಲಿರುವ ಎರಡೂ ಪಂದ್ಯಗಳ ಪೈಕಿ ಒಂದರಲ್ಲಿ ಸೋತರೂ ನಾಲ್ಕರ ಘಟ್ಟದ ಹಾದಿ ಕಠಿಣವಾಗಲಿದೆ. ಒಟ್ಟಿನಲ್ಲಿ ಈ ಎರಡೂ ತಂಡಗಳಲ್ಲಿ ಏಳು ಅಂಕ ಗಳಿಸಿದವರಿಗೆ ಸೆಮಿ ಹಂತ ಸುಲಭ.

ಈಗಾಗಲೇ ಐದು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ತನ್ನ ಇನ್ನುಳಿದ ಎರಡರಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್‌ ಎದುರು ಆಡಲಿದೆ. ಇದರಲ್ಲಿ ಒಂದು ಪಂದ್ಯ ಗೆದ್ದರೂ ತೆಂಬಾ ಬವುಮಾ ಬಳಗವು ನಾಲ್ಕರ ಹಂತಕ್ಕೇರಲಿದೆ. ಆದರೆ ಪಾಕಿಸ್ತಾನವು ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್ ಪ್ರವೇಶ ಕಷ್ಟ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು