ಶನಿವಾರ, ಮೇ 21, 2022
23 °C

T20 WC: ಪಾಕಿಸ್ತಾನದ ಕನಸು ಭಗ್ನ; ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಫೈನಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆದ ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಫೈನಲ್‌ಗೆ ಪ್ರವೇಶಿಸಿದೆ. 

ಈ ಮೂಲಕ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ, ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಹಿಂದೆ 2010ರಲ್ಲಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು. ಈಗ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅತ್ತ ಪಾಕಿಸ್ತಾನದ ಎರಡನೇ ಟಿ20 ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿದೆ. 

ಇದೀಗ ಭಾನುವಾರ ದುಬೈಯಲ್ಲಿ ನಡೆಯಲಿರುವ ಪ್ರಶಸ್ತಿಗಾಗಿನ ಹೋರಾಟದಲ್ಲಿ ಆಸ್ಟ್ರೇಲಿಯಾವು ನ್ಯೂಜಿಲೆಂಡ್ ಸವಾಲನ್ನು ಎದುರಿಸಲಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. 

ಮೊಹಮ್ಮದ್ ರಿಜ್ವಾನ್ (67) ಹಾಗೂ ಫಖರ್ ಜಮಾನ್ (55) ಬಿರುಸಿನ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 176 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. 

ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ (49), ಮಾರ್ಕಸ್ ಸ್ಟೋಯಿನಿಸ್ (40*) ಹಾಗೂ ಮ್ಯಾಥ್ಯೂ ವೇಡ್ (41*) ದಿಟ್ಟ ಹೋರಾಟದ ನೆರವಿನಿಂದ ಇನ್ನೂ ಆರು ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ಶದಾಬ್ ಖಾನ್ (26ಕ್ಕೆ 4 ವಿಕೆಟ್) ಹೋರಾಟವು ವ್ಯರ್ಥವೆನಿಸಿತು. 

ಸ್ಟೋಯಿನಿಸ್, ವೇಡ್ ಅಬ್ಬರ, ಫೈನಲ್‌ಗೆ ಆಸೀಸ್...
ಸವಾಲಿನ ಮೊತ್ತ ಬೆನ್ನತ್ತಿದ ಆಸೀಸ್ ಆರಂಭ ಉತ್ತಮವಾಗಿರಲಿಲ್ಲ. ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ನಾಯಕ ಆ್ಯರನ್ ಫಿಂಚ್ ಅವರನ್ನು ಶಾಹೀನ್ ಅಫ್ರಿದಿ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಈ ಮೂಲಕ ಫಿಂಚ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು. 

ಈ ಹಂತದಲ್ಲಿ ಜೊತೆಗೂಡಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಕೌಂಟರ್ ಅಟ್ಯಾಕ್ ಮಾಡಿದ ವಾರ್ನರ್-ಮಾರ್ಷ್ ಜೋಡಿ ಅಮೂಲ್ಯ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. 

ಈ ನಡುವೆ ಉತ್ತಮವಾಗಿ ಆಡುತ್ತಿದ್ದ ಮಾರ್ಷ್ ವಿಕೆಟ್ ಪತನವಾಯಿತು. 22 ಎಸೆತಗಳನ್ನು ಎದುರಿಸಿದ ಮಾರ್ಷ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿದರು. 

ಇನ್ನೊಂದೆಡೆ ವಾರ್ನರ್ ದಿಟ್ಟ ಹೋರಾಟ ತೋರಿದರು. ಆದರೆ ವಾರ್ನರ್ ಓಟಕ್ಕೆ ಶದಾಬ್ ಖಾನ್ ಬ್ರೇಕ್ ಹಾಕಿದರು. ಮಿಚೆಲ್ ಮಾರ್ಷ್ ಹಾಗೂ ಸ್ಟೀವನ್ ಸ್ಮಿತ್  (5) ಬೆನ್ನಲ್ಲೇ ವಾರ್ನರ್ ವಿಕೆಟ್ ಗಳಿಸಿದ ಶದಾಬ್, ಪಂದ್ಯಕ್ಕೆ ತಿರುವು ನೀಡಿದರು. 30 ಎಸೆತಗಳನ್ನು ಎದುರಿಸಿದ ವಾರ್ನರ್ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು. 

ಗ್ಲೆನ್ ಮ್ಯಾಕ್ಸ್‌ವೆಲ್ (7) ಅವರಿಗೂ ಶದಾಬ್ ಖಾನ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 12.2 ಓವರ್‌ಗಳಲ್ಲಿ 96 ರನ್ನಿಗೆ ಐದು ವಿಕೆಟ್ ಕಳೆದುಕೊಂಡ ಆಸೀಸ್ ಸಂಕಷ್ಟಕ್ಕೆ ಸಿಲುಕಿತ್ತು. 

ಅಂತಿಮ 30 ಎಸೆತಗಳಲ್ಲಿ ಆಸೀಸ್ ಗೆಲುವಿಗೆ 62 ರನ್ ಬೇಕಿತ್ತು. ಆದರೆ ಮುರಿಯದ ಆರನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ಕಟ್ಟಿದ ಮಾರ್ಕಸ್ ಸ್ಟೋಯಿನಿಸ್ ಹಾಗೂ ಮ್ಯಾಥ್ಯೂ ವೇಡ್ ಆಸೀಸ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. 

ಈ ಪೈಕಿ ಶಾಹೀನ್ ಅಫ್ರಿದಿ ಅವರ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಚಚ್ಚಿದ ವೇಡ್ ಅಬ್ಬರಿಸಿದರು. 17 ಎಸೆತಗಳನ್ನು ಎದುರಿಸಿದ ವೇಡ್ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ನೆರವಿನಿಂದ 41 ರನ್ ಗಳಿಸಿ ಔಟಾಗದೆ ಉಳಿದರು. ಅತ್ತ ಸ್ಟೋಯಿನಿಸ್ 31 ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 40 ರನ್ ಗಳಿಸಿ ಅಜೇಯರಾಗುಳಿದರು. 

ರಿಜ್ವಾನ್, ಫಖರ್ ಅರ್ಧಶತಕ ಸಾಧನೆ...
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 71 ರನ್‌ಗಳ ಜೊತೆಯಾಟ ಕಟ್ಟಿ ಭದ್ರ ಅಡಿಪಾಯ ಹಾಕಿದರು.  

ಉತ್ತಮವಾಗಿ ಆಡುತ್ತಿದ್ದ ಬಾಬರ್ ಅವರನ್ನು ಆ್ಯಡಂ ಜಂಪಾ ಹೊರದಬ್ಬಿದರು. 34 ಎಸೆತಗಳನ್ನು ಎದುರಿಸಿದ ಬಾಬರ್ ಐದು ಬೌಂಡರಿಗಳ ನೆರವಿನಿಂದ 39 ರನ್ ಗಳಿಸಿದರು. 

ಅತ್ತ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಿಜ್ವಾನ್ 41 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಈ ಮೂಲಕ ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಅರ್ಧಶತಕ ಗಳಿಸಿದರು. 

ರಿಜ್ವಾನ್‌ಗೆ ಫಖರ್ ಜಮಾನ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಅಲ್ಲದೆ ದ್ವಿತೀಯ ವಿಕೆಟ್‌ಗೆ 72 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. 
ಅತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿದ ರಿಜ್ವಾನ್, 52 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 67 ರನ್ ಗಳಿಸಿದರು. 

ಕೊನೆಯ ಹಂತದಲ್ಲಿ ತಮ್ಮ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಿದ ಫಖರ್, ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ನಡುವೆ ಆಸಿಫ್ ಅಲಿ (0) ಹಾಗೂ ಶೋಯಬ್ ಮಲಿಕ್‌ಗೆ (0) ಪ್ರಭಾವಿ ಎನಿಸಿಕೊಳ್ಳಲಾಗಲಿಲ್ಲ. 

32 ಎಸೆತಗಳನ್ನು ಎದುರಿಸಿದ ಫಖರ್, ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 55 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಪಾಕಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು.

ಆಸೀಸ್ ಪರ ಮಿಚೆಲ್ ಸ್ಟಾರ್ಕ್ ಎರಡು ಮತ್ತು ಪ್ಯಾಟ್ ಕಮಿನ್ಸ್ ಹಾಗೂ ಆ್ಯಡಂ ಜಂಪಾ ತಲಾ ಒಂದು ವಿಕೆಟನ್ನು ಹಂಚಿದರು. ಈ ನಡುವೆ 49 ರನ್ ಬಿಟ್ಟುಕೊಟ್ಟ ಜೋಶ್ ಹ್ಯಾಜಲ್‌ವುಡ್ ದುಬಾರಿಯೆನಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು