T20 WC: ಗೆಲುವಿನೊಂದಿಗೆ ಭಾರತದ ಟಿ20 ವಿಶ್ವಕಪ್ ಅಭಿಯಾನ ಅಂತ್ಯ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಅಂತಿಮ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಈ ಮೂಲಕ ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗೆಲುವಿನ ವಿದಾಯ ಹಾಡಿದ್ದಾರೆ. ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಅರುಣ್ ಭರತ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಪಾಲಿಗೂ ಇದು ವಿದಾಯದ ಪಂದ್ಯವಾಗಿತ್ತು.
ಇದನ್ನೂ ಓದಿ: T20 WC | IND vs NAM: ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ಗೆಲುವಿನ ವಿದಾಯ Live
ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ವಿಫಲವಾಗಿರುವ ಭಾರತ ತಂಡವು ಸತತ ಮೂರನೇ ಗೆಲುವಿನೊಂದಿಗೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದೆ. ಆ ಮೂಲಕ ಐದು ಪಂದ್ಯಗಳಲ್ಲಿ ಒಟ್ಟು ಆರು ಅಂಕಗಳನ್ನು ಕಲೆ ಹಾಕಿದೆ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಭಾರತದ ವಿಶ್ವಕಪ್ ಕನಸು ಭಗ್ನಗೊಳ್ಳಲು ಕಾರಣವಾಗಿದೆ.
ರವೀಂದ್ರ ಜಡೇಜ (16ಕ್ಕೆ 3) ಹಾಗೂ ಆರ್. ಅಶ್ವಿನ್ (20ಕ್ಕೆ 3) ಸ್ಪಿನ್ ಮೋಡಿಗೆ ಸಿಲುಕಿರುವ ನಮೀಬಿಯಾ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 132 ರನ್ ಗಳಿಸಲಷ್ಟೇ ಸಾಧ್ಯವಾಯಿತು.
India sign off from the #T20WorldCup in style 👏 #INDvNAM | https://t.co/ICh1BVKEFJ pic.twitter.com/7Qg7J38ppW
— T20 World Cup (@T20WorldCup) November 8, 2021
ಬಳಿಕ ಗುರಿ ಬೆನ್ನತ್ತಿದ ಭಾರತ 15.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ರೋಹಿತ್ ಶರ್ಮಾ (56) ಹಾಗೂ ಕೆ.ಎಲ್. ರಾಹುಲ್ (54*) ಆಕರ್ಷಕ ಅರ್ಧಶತಕ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಈ ಮೊದಲು ನಮೀಬಿಯಾ ಪರ ಆರಂಭಿಕರಾದ ಸ್ಟೀಫನ್ ಬಾರ್ಡ್ ಹಾಗೂ ಮೈಕೆಲ್ ವಾನ್ ಲಿಂಗೆನ್ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 33 ರನ್ ಪೇರಿಸಿದರು.
ಆದರೆ ಆರಂಭಿಕ ಜೋಡಿಯ ಪತನದ ಬೆನ್ನಲ್ಲೇ ಹಿನ್ನಡೆಯನ್ನು ಅನುಭವಿಸಿತು. ಬಾರ್ಡ್ 21 ಹಾಗೂ ಮೈಕೆಲ್ 14 ರನ್ ಗಳಿಸಿ ಔಟಾದರು.
ಜಡೇಜ ಹಾಗೂ ಅಶ್ವಿನ್ ದಾಳಿಗೆ ಸಿಲುಕಿದ ನಮೀಬಿಯಾ ಅಲ್ಲಿಂದ ಬಳಿಕ ಚೇತರಿಸಿಕೊಳ್ಳಲಾಗಲಿಲ್ಲ. ಅಲ್ಲದೆ 72 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು.
A brilliant grab from Rohit Sharma 🤲
Jadeja has his third as Smit walks back for 9. #T20WorldCup | #INDvNAM | https://t.co/ICh1BVKEFJ pic.twitter.com/fmDqfNQmom
— T20 World Cup (@T20WorldCup) November 8, 2021
ಕೊನೆಯ ಹಂತದಲ್ಲಿ ಡೇವಿಡ್ ವೀಸ್ (26), ಜಾನ್ ಫ್ರಿಲಿಂಕ್ (15*) ಹಾಗೂ ರುಬೆನ್ ಟ್ರಂಪಲ್‌ಮ್ಯಾನ್ (13*) ಉಪಯುಕ್ತ ಇನ್ನಿಂಗ್ಸ್ ಕಟ್ಟುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಭಾರತದ ಪರ ಜಡೇಜ ಹಾಗೂ ಅಶ್ವಿನ್ ತಲಾ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಮೊಹಮ್ಮದ್ ಶಮಿ 39 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.