ಶನಿವಾರ, ಮಾರ್ಚ್ 25, 2023
31 °C

T20 WC: ಬಟ್ಲರ್ ಶತಕ; ಸತತ 4ನೇ ಗೆಲುವು ದಾಖಲಿಸಿದ ಇಂಗ್ಲೆಂಡ್ ಸೆಮೀಸ್ ಹಾದಿ ಸುಗಮ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಅಮೋಘ ಶತಕದ (101*) ನೆರವಿನಿಂದ ಇಂಗ್ಲೆಂಡ್ ತಂಡವು, ಸೋಮವಾರ ಶ್ರೀಲಂಕಾ ವಿರುದ್ಧ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ 26 ರನ್ ಅಂತರದ ಗೆಲುವು ದಾಖಲಿಸಿದೆ. 

ಈ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿರುವ ಆಂಗ್ಲರ ಪಡೆ ಅಜೇಯ ಓಟ ಮುಂದುವರಿಸಿದ್ದು, ಒಟ್ಟು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಅತ್ತ ಲಂಕಾ ಅಷ್ಟೇ ಪಂದ್ಯಗಳಲ್ಲಿ ಒಂದು ಗೆಲುವಿನೊಂದಿಗೆ ಎರಡು ಅಂಕ ಮಾತ್ರ ಹೊಂದಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ತಂಡವು 35 ರನ್ ಗಳಿಸುವುದರೆಡೆ ಜೇಸನ್ ರಾಯ್ (9), ಡೇವಿಡ್ ಮಲಾನ್ (6) ಹಾಗೂ ಜಾನಿ ಬೆಸ್ಟೊ (0) ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಇದನ್ನೂ ಓದಿ: 

ಆದರೆ ನಾಲ್ಕನೇ ವಿಕೆಟ್‌ಗೆ 112 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದ ಬಟ್ಲರ್ ಹಾಗೂ ನಾಯಕ ಏಯಾನ್ ಮಾರ್ಗನ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 40 ಎಸೆತಗಳನ್ನು ಎದುರಿಸಿದ ಮಾರ್ಗನ್ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 40 ರನ್ ಗಳಿಸಿದರು. 

ಇನ್ನಿಂಗ್ಸ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗಟ್ಟಿದ ಬಟ್ಲರ್ ಅಮೋಘ ಶತಕ ಸಾಧನೆ ಮಾಡಿದರು. ಅಲ್ಲದೆ ಇಂಗ್ಲೆಂಡ್ ಪರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಶತಕ ಗಳಿಸಿದ ಮೊತ್ತ ಮೊದಲ ಬ್ಯಾಟರ್ ಎನಿಸಿದರು. ಪ್ರಸಕ್ತ ಸಾಲಿನ ಟ್ವೆಂಟಿ-20 ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ಶತಕವೂ ಇದಾಗಿದೆ. 

ಈ ಮೂಲಕ ಆಂಗ್ಲರ ಪಡೆ ನಾಲ್ಕು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 67 ಎಸೆತಗಳನ್ನು ಎದುರಿಸಿದ ಬಟ್ಲರ್ ತಲಾ ಆರು ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದರು. ಲಂಕಾ ಪರ ವನಿಂದು ಹಸರಂಗ ಮೂರು ವಿಕೆಟ್ ಕಬಳಿಸಿದರು. 

ಬಳಿಕ ಗುರಿ ಬೆನ್ನತ್ತಿದ ಲಂಕಾ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆಗೊಳಗಾಯಿತು. ಒಂದು ಹಂತದಲ್ಲಿ 76ಕ್ಕೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯ ಹಂತದಲ್ಲಿ ವನಿಂದು ಹಸರಂಗ (34) ಹಾಗೂ ನಾಯಕ ದಸುನ್ ಶನಕ (26) ದಿಟ್ಟ ಹೋರಾಟ ತೋರಿದರು. 

ಅಲ್ಲದೆ ಆರನೇ ವಿಕೆಟ್‌ಗೆ 53 ರನ್‌ಗಳ ಜೊತೆಯಾಟ ಕಟ್ಟಿದರು. ಆದರೆ ಈ ಜೋಡಿಯ ಪತನದೊಂದಿಗೆ ಲಂಕಾ ಸೋಲಿಗೆ ಶರಣಾಯಿತು. ಅಂತಿಮವಾಗಿ 19 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು. ಇನ್ನುಳಿದಂತೆ ಭಾನುಕಾ ರಾಜಪಕ್ಷ 26 ರನ್ ಗಳಿಸಿದರು. 

ಇಂಗ್ಲೆಂಡ್ ಪರ ಆದಿಲ್ ರಶೀದ್, ಕ್ರಿಸ್ ಜಾರ್ಡನ್  ಹಾಗೂ ಮೊಯಿನ್ ಅಲಿ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು. ಇಂಗ್ಲೆಂಡ್ ಆಟಗಾರರ ಅದ್ಭುತ ಕ್ಷೇತ್ರರಕ್ಷಣೆ ಕೂಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. 

ಇದರೊಂದಿಗೆ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಯಶಸ್ವಿ ನಾಯಕನ ಪಟ್ಟಕ್ಕೆ ಏಯಾನ್ ಮಾರ್ಗನ್ ಭಾಜನರಾಗಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ಒಲಿದ 43ನೇ ಗೆಲುವು ಇದಾಗಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು