ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಗಪ್ಟಿಲ್ ಭರ್ಜರಿ ಬ್ಯಾಟಿಂಗ್, ಸ್ಕಾಟ್ಲೆಂಡ್ ವಿರುದ್ಧ ಕಿವೀಸ್‌ಗೆ ಜಯ

Last Updated 3 ನವೆಂಬರ್ 2021, 14:02 IST
ಅಕ್ಷರ ಗಾತ್ರ

ದುಬೈ: ಸಿಕ್ಸರ್‌ಗಳ ಮಳೆ ಸುರಿಸಿದ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅವರು ನ್ಯೂಜಿಲೆಂಡ್‌ ತಂಡದಲ್ಲಿ ಗೆಲುವಿನ ಸಂಭ್ರಮ ಮೂಡಿಸಿದರು. ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ 16 ರನ್‌ಗಳ ಜಯ ಸಾಧಿಸಿದ ಕೇನ್ ವಿಲಿಯಮ್ಸನ್ ಬಳಗ ಸೆಮಿಫೈನಲ್‌ ಕನಸು ಜೀವಂತವಾಗಿರಿಸಿಕೊಂಡಿತು.

ಸೂಪರ್ 12ರ ಎರಡನೇ ಗುಂಪಿನ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಗಪ್ಟಿಲ್ (93; 56 ಎ, 6 ಬೌಂಡರಿ, 7 ಸಿಕ್ಸರ್) ಅವರ ಮೋಹಕ ಬ್ಯಾಟಿಂಗ್‌ ನೆರವಿನಿಂದ ಐದು ವಿಕೆಟ್‌ಗಳಿಗೆ 172 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕೈಲ್ ಕೊಯೆಟ್ಜೆರ್ ಬಳಗ ಪ್ರಬಲ ಪೈಪೋಟಿ ನೀಡಿತು. ಆದರೆ ಐದು ವಿಕೆಟ್‌ಗಳಿಗೆ 156 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಅಂತಿಮ ಓವರ್‌ಗಳಲ್ಲಿ ಮಿಚೆಲ್ ಲೀಸ್ಕ್ (ಔಟಾಗದೆ 42; 20 ಎ, 3 ಬೌಂ, 3 ಸಿ) ಸ್ಫೋಟಕ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ಪಾಳಯದಲ್ಲಿ ಆತಂಕ ಮೂಡಿಸಿದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಗಿಲ್ಲ.

ಟಾಸ್ ಗೆದ್ದ ಸ್ಕಾಟ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಾರ್ಟಿನ್ ಗಪ್ಟಿಲ್ ಮತ್ತು ಡ್ಯಾರಿಲ್ ಮಿಚೆಲ್ ಅತ್ಯುತ್ತಮ ಆರಂಭ ಒದಗಿಸಿದರು. ಬ್ರಾಡ್ ವ್ಹೀಲ್ ಅವರ ಮೊದಲ ಓವರ್‌ನಲ್ಲಿ 13 ರನ್‌ಗಳು ಹರಿದುಬಂದವು. ಆದರೆ ಮೊದಲ ವಿಕೆಟ್‌ಗೆ 35 ರನ್ ಸೇರಿಸಿದ್ದಾಗ ಸಫಿಯಾನ್ ಷರೀಫ್ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಮಿಚೆಲ್ ವಾಪಸಾದರು. ನಾಯಕ ಕೇನ್ ವಿಲಿಯಮ್ಸನ್ ನಾಲ್ಕು ಎಸೆತ ಎದುರಿಸಿ ಖಾತೆ ತೆರೆಯಲಾಗದೆ ಮರಳಿದರು. ಮ್ಯಾಥ್ಯೂ ಕ್ರಾಸ್ ಡೈವ್ ಮಾಡಿ ಪಡೆದ ಮೋಹಕ ಕ್ಯಾಚ್ ವಿಲಿಯಮ್ಸನ್ ಅವರನ್ನು ವಾಪಸ್ ಕಳುಹಿಸಿತು.

ಒಂದು ತುದಿಯಲ್ಲಿ ಡೇವಾನ್ ಕಾನ್ವೆ ಅವರನ್ನು ಇರಿಸಿಕೊಂಡು ಗಪ್ಟಿಲ್ ರನ್‌ ಕಲೆ ಹಾಕುತ್ತ ಸಾಗಿದರು. 17 ರನ್‌ಗಳ ಜೊತೆಯಾಟದಲ್ಲಿ ಕಾನ್ವೆ ಅವರ ಕಾಣಿಕೆ ಒಂದು ರನ್ ಮಾತ್ರವಾಗಿತ್ತು.

ಕಾನ್ವೆ ಔಟಾದ ನಂತರ ಗಪ್ಟಿಲ್ ಮತ್ತು ಗ್ಲೆನ್ ಫಿಲಿಪ್ಸ್ ಆಟ ರಂಗೇರಿತು. ಉರಿ ಬಿಸಿಯಲ್ಲಿ ಗಪ್ಟಿಲ್ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ರಂಜಿಸಿದರು. ಅವರ ಬಹುತೇಕ ಸಿಕ್ಸರ್‌ಗಳು ಮಿಡ್‌ವಿಕೆಟ್ ಮೇಲಿಂದ ಗ್ಯಾಲರಿ ಸೇರಿದವು. ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ತಂಡಕ್ಕೆ ಇವಾನ್ಸ್ ಎಸೆತವನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ ಮೂಲಕ ಬೌಂಡರಿ ಗೆರೆ ದಾಟಿಸಿ ಗಪ್ಟಿಲ್ ಭರವಸೆ ಮೂಡಿಸಿದರು. ಆರನೇ ಓವರ್‌ನಲ್ಲಿ ಬಂದ 16 ರನ್ ಸೇರಿದಂತೆ ಪವರ್ ಪ್ಲೇ ಮುಕ್ತಾಯದ ವೇಳೆ ನ್ಯೂಜಿಲೆಂಡ್ 52 ರನ್ ಕಲೆ ಹಾಕಿತು.

ಗಪ್ಟಿಲ್ ಮತ್ತು ಫಿಲಿಪ್ಸ್ ಅವರ ಶತಕದ (105 ರನ್) ಜೊತೆಯಾಟ ತಂಡದ ಮೊತ್ತವನ್ನು 150ರ ಗಡಿ ದಾಟಿಸಿತು. ಭರ್ಜರಿ ಬ್ಯಾಟಿಂಗ್ ಮೂಲಕ ಶತಕದತ್ತ ಹೆಜ್ಜೆ ಹಾಕಿದ್ದ ಗಪ್ಟಿಲ್ ಅವರಿಗೆ ಬ್ರಾಡ್ ವ್ಹೀಲ್ ನಿರಾಸೆ ಮೂಡಿಸಿದರು. ಈ ಇನಿಂಗ್ಸ್ ಮೂಲಕ ಮಾರ್ಟಿನ್ ಗಪ್ಟಿಲ್ ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಈ ಸಾಧನೆ ಮಾಡಿದ ಮೊದಲ ಬ್ಯಾಟರ್‌ ಭಾರತದ ನಾಯಕ ವಿರಾಟ್ ಕೊಹ್ಲಿ.

ಒಂದು ಹಂತದಲ್ಲಿ ಸ್ಕಾಟ್ಲೆಂಡ್ ಹಿಡಿತ ಬಿಗಿ ಮಾಡಿತ್ತು. ಆರು ಮತ್ತು 10ನೇ ಓವರ್‌ಗಳ ನಡುವೆ ನ್ಯೂಜಿಲೆಂಡ್‌ಗೆ 18 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.

ಮಾರ್ಟಿನ್ ಗಪ್ಟಿಲ್

ರನ್ 93

ಎಸೆತ 56

ಸಿಕ್ಸರ್‌ 7

ಬೌಂಡರಿ 6

ಸ್ಟ್ರೈಕ್ ರೇಟ್ 166.07

ಟಿ–20ಯಲ್ಲಿ ಮಾರ್ಟಿನ್ ಗಪ್ಟಿಲ್ ಸಾಧನೆ

ಪಂದ್ಯ 105

ಇನಿಂಗ್ಸ್ 101

ರನ್ 3069

ಗರಿಷ್ಠ 105

ಶತಕ 2

ಅರ್ಧಶತಕ 18

ಬೌಂಡರಿ 268

ಸಿಕ್ಸರ್‌ 154

ಸ್ಟ್ರೈಕ್ ರೇಟ್ 136.94

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT