ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಪಾಪುವಾ ವಿರುದ್ಧ ಗೆದ್ದು ಎಂಟರ ಘಟ್ಟ ತಲುಪಿದ ಅಫ್ಗಾನಿಸ್ತಾನ

Published 14 ಜೂನ್ 2024, 4:29 IST
Last Updated 14 ಜೂನ್ 2024, 4:29 IST
ಅಕ್ಷರ ಗಾತ್ರ

ತರೂಬಾ (ಟ್ರಿನಿಡಾಡ್‌): ಉತ್ತಮ ಲಯದಲ್ಲಿರುವ ಎಡಗೈ ವೇಗಿ ಫಜಲ್ಹಖ್ ಫರೂಖಿ (16ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಮತ್ತು ಗುಲ್ಬದಿನ್ ನೈಬ್ ಅವರ ಅಜೇಯ 49 ರನ್‌ಗಳ (36ಎ) ನೆರವಿನಿಂದ ಅಫ್ಗಾನಿಸ್ತಾನ ತಂಡ ಶುಕ್ರವಾರ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ಮೇಲೆ ಏಳು ವಿಕೆಟ್‌ಗಳ ಸುಲಭ ಜಯ ಪಡೆಯಿತು.

‘ಸಿ’ ಗುಂಪಿನಲ್ಲಿ ಸತತ ಮೂರನೇ ಗೆಲುವಿನೊಡನೆ ರಶೀದ್ ಖಾನ್ ಬಳಗ ಮೊದಲ ಬಾರಿ ಸೂಪರ್ ಎಂಟರಲ್ಲಿ ಸ್ಥಾನ ಕಾದಿರಿಸಿತು. ವೆಸ್ಟ್‌ ಇಂಡೀಸ್‌ ಈ ಮೊದಲೇ ಗುಂಪಿನಿಂದ ಸೂಪರ್‌ ಎಂಟಕ್ಕೆ ಅರ್ಹತೆ ಪಡೆದಿತ್ತು. ಅಫ್ಗನ್ನರ ಗೆಲುವಿನಿಂದ, ನ್ಯೂಜಿಲೆಂಡ್‌ ಹೊರಬಿದ್ದಂತಾಯಿತು. ಆಡಿದ ಮೂರೂ ಪಂದ್ಯ ಸೋತು ಗುಂಪಿನಲ್ಲಿ ಅದು ಕೊನೆಯ ಸ್ಥಾನದಲ್ಲಿದೆ.

ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಪಾಪುವಾ ನ್ಯೂಗಿನಿ 96ಕ್ಕೆ (19.1) ಉರುಳಿತು. ಅಫ್ಗನ್ ತಂಡ 15.1 ಓವರುಗಳಲ್ಲಿ 3 ವಿಕೆಟ್‌ಗೆ 101 ರನ್ ಹೊಡೆದು ಗೆಲುವು ಪೂರೈಸಿತು.

ಫರೂಕಿ ತಮ್ಮ ಎರಡನೇ ಓವರ್‌ನ ಸತತ ಎರಡು ಎಸೆತಗಳಲ್ಲಿ ವಿಕೆಟ್‌ಗಳನ್ನು ಪಡೆದು ನ್ಯೂಗಿನಿಗೆ ಹೊಡೆತ ನೀಡಿದರು. ಆಗ ಮೊತ್ತ 17ಕ್ಕೆ4. ನಂತರ ನಿಯಮಿತವಾಗಿ ವಿಕೆಟ್‌ಗಳು ಬಿದ್ದವು. ಹೊಸ ಚೆಂಡಿನಲ್ಲಿ ಅವರ ಜೊತೆಗಾರ ನವೀನ್ ಉಲ್ ಹಕ್ 4 ರನ್ನಿಗೆ 2 ವಿಕೆಟ್‌ ಪಡೆದು ಉತ್ತಮ ಬೆಂಬಲ ನೀಡಿದರು. ಅನನುಭವಿ ನ್ಯೂಗಿನಿ ತಂಡದ ನಾಲ್ವರು ರನೌಟ್‌ ಆದರು. ವಿಕೆಟ್ ಕೀಪರ್ ಕಿಪ್ಲಿನ್ ದೊರಿಗಾ ಗಳಿಸಿದ 27 ರನ್‌ಗಳೇ ತಂಡದ ವೈಯಕ್ತಿಕ ಗರಿಷ್ಠ.

ಇದುವರೆಗಿನ ಮೂರು ಪಂದ್ಯಗಳಲ್ಲಿ ಫರೂಖಿ ಅವರ ಒಟ್ಟು ನಿರ್ವಹಣೆ 11.2–0–42–12. ಅವರು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇತರೆ ರೂಪದಲ್ಲಿ 25 ರನ್‌ಗಳು ಹರಿದುಬಂದ ಕಾರಣ ನ್ಯೂಗಿನಿ ತಂಡದ ಮೊತ್ತ 95 ತಲುಪಲು ಸಾಧ್ಯವಾಯಿತು.

ಸಣ್ಣ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ ಅಫ್ಗನ್ನರು ಆರಂಭ ಆಟಗಾರರಾದ ರಹಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಜದ್ರಾನ್ ಅವರನ್ನು ಬೇಗ ಕಳೆದುಕೊಂಡರು. ಆದರೆ ನೈಬ್ ಒಂದೆಡೆ ಅಚಲವಾಗಿ ನಿಂತರು.

ನ್ಯೂಜಿಲೆಂಡ್‌ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಯುಗಾಂಡ ಮತ್ತು ಪಾಪುವಾ ನ್ಯೂಗಿನಿ ವಿರುದ್ಧ ಆಡಲಿದ್ದು, ಈ ಪಂದ್ಯಗಳು ಔಪಚಾರಕ್ಕಷ್ಟೇ ನಡೆಯಬೇಕಾಗಿದೆ.

ಸ್ಕೋರುಗಳು: ಪಾಪುವಾ ನ್ಯೂಗಿನಿ: 19.5 ಓವರುಗಳಲ್ಲಿ 95 (ಕಿಪ್ಲಿನ್ ದೊರಿಗಾ 27; ಫಜಲ್ಹಖ್ ಫರೂಕಿ 16ಕ್ಕೆ3, ನವೀನ್ ಉಲ್‌ ಹಕ್ 4ಕ್ಕೆ2); ಆಪ್ಗಾನಿಸ್ತಾನ: 15.1 ಓವರುಗಳಲ್ಲಿ 3 ವಿಕೆಟ್‌ಗೆ 101 (ಗುಲ್ಬದಿನ್ ನೈಬ್‌ ಔಟಾಗದೇ 49, ಮೊಹಮ್ಮದ್ ನಬಿ ಔಟಾಗದೇ 16; ಅಲಿ ನಾವೊ 26ಕ್ಕೆ1, ಸೆಮೊ ಕಮಿಯಾ 16ಕ್ಕೆ1, ನಾರ್ಮನ್‌ ವನುವ 18ಕ್ಕೆ1). ಪಂದ್ಯದ ಆಟಗಾರ: ಫಜಲ್ಹಖ್‌ ಫರೂಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT