ಶುಕ್ರವಾರ, ಡಿಸೆಂಬರ್ 3, 2021
20 °C

T20 WC: ಅಸ'ಲಂಕಾ', ರಾಜಪಕ್ಸ ಅಮೋಘ ಆಟಕ್ಕೆ ಬೆಚ್ಚಿದ ಬಾಂಗ್ಲಾ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸೂಪರ್-12 ಹಂತದ ಗ್ರೂಪ್ 1ರ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.  ಈ ಮೂಲಕ ಎರಡು ಅಂಕ ಕಲೆ ಹಾಕಿದೆ. 

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ಮೊಹಮ್ಮದ್ ನಯೀಮ್ (62) ಹಾಗೂ ಮುಷ್ಫಿಕುರ್ ರಹೀಮ್‌ (57*) ಬಿರುಸಿನ ಅರ್ಧಶತಕಗಳ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 171 ರನ್‌ಗಳ ಬೃಹತ್ ಮೊತ್ತ ಪೇರಿಸಿತು. 

ಬಳಿಕ ಗುರಿ ಬೆನ್ನತ್ತಿದ ಶ್ರೀಲಂಕಾ, ಒಂದು ಹಂತದಲ್ಲಿ ಸೋಲಿನ ಭೀತಿಗೆ ಒಳಗಾಗಿತ್ತು. ಆದರೆ ದಿಟ್ಟ ಹೋರಾಟ ಪ್ರದರ್ಶಿಸಿದ  ಚರಿತ್ ಅಸಲಂಕಾ (80*) ಹಾಗೂ ಭಾನುಕ ರಾಜಪಕ್ಸ (53) ಬಿರುಸಿನ ಅರ್ಧಶತಕ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 

ಲಂಕಾ ಆರಂಭ ಉತ್ತಮವಾಗಿರಲಿಲ್ಲ. ಆರಂಭದಲ್ಲೇ ಕುಶಲ್ ಪೆರೇರ (1) ವಿಕೆಟ್ ನಷ್ಟವಾಯಿತು. ದ್ವಿತೀಯ ವಿಕೆಟ್‌ಗೆ ಜೊತೆಗೂಡಿದ ಪಥುಮ್ ನಿಸಾಂಕ ಹಾಗೂ ಚರಿತ್ ಅಸಲಂಕಾ 69 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. 

ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಪಥುಮ್ (24) ಹಾಗೂ ಆವಿಷ್ಕಾ ಫೆರ್ನಾಂಡೊ (0) ಹೊರದಬ್ಬಿದ ಶಕೀಬ್ ಡಬಲ್ ಆಘಾತ ನೀಡಿದರು. ಇದರಿಂದಾಗಿ 9.4 ಓವರ್‌ಗಳಲ್ಲಿ 79 ರನ್ನಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 

ಆದರೆ ಐದನೇ ವಿಕೆಟ್‌ಗೆ 86 ರನ್‌ಗಳ ಬಿರುಸಿನ ಜೊತೆಯಾಟ ಕಟ್ಟಿದ ಅಸಲಂಕಾ ಹಾಗೂ ರಾಜಪಕ್ಸ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಈ ಮೂಲಕ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 

49 ಎಸೆತಗಳನ್ನು ಎದುರಿಸಿದ ಅಸಲಂಕಾ ತಲಾ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಔಟಾಗದೆ ಉಳಿದರು. ಇವರಿಗೆ ತಕ್ಕ ಸಾಥ್ ನೀಡಿದ ರಾಜಪಕ್ಸ 31 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು. 

ಬಾಂಗ್ಲಾದೇಶಕ್ಕೆ ಲಿಟನ್ ದಾಸ್ (16) ಜೊತೆ ಸೇರಿದ ನಯೀಮ್ ಮೊದಲ ವಿಕೆಟ್‌ಗೆ 40 ರನ್‌ಗಳ ಜೊತೆಯಾಟ ಕಟ್ಟಿದರು. ಈ ನಡುವೆ ಶಕೀಬ್ ಅಲ್ ಹಸನ್ (10) ಮಿಂಚಲು ಸಾಧ್ಯವಾಗಲಿಲ್ಲ. 

ಆದರೆ ಮುಷ್ಫಿಕುರ್ ಜೊತೆಗೆ ಮೂರನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ನಯೀಮ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. 

52 ಎಸೆತಗಳನ್ನು ಎದುರಿಸಿದ ನಯೀಮ್ ಆರು ಬೌಂಡರಿಗಳ ನೆರವಿನಿಂದ 62 ರನ್ ಗಳಿಸಿದರು. 

ಕೊನೆಯ ಹಂತದಲ್ಲಿ ಕೇವಲ 37 ಎಸೆತಗಳಲ್ಲಿ 57 ರನ್ ಗಳಿಸಿ ಔಟಾಗದೆ ಉಳಿದ ಮುಷ್ಫಿಕುರ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು. ಅವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಇನ್ನುಳಿದಂತೆ ಅಫಿಫ್ ಹುಸೇನ್ (7) ಹಾಗೂ ನಾಯಕ ಮೊಹಮ್ಮದುಲ್ಲಾ (10) ರನ್ ಗಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು