ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | IND vs CAN: ರೋಹಿತ್ ಬಳಗಕ್ಕೆ ಸುಲಭ ಜಯದ ಗುರಿ

Published 15 ಜೂನ್ 2024, 0:19 IST
Last Updated 15 ಜೂನ್ 2024, 0:19 IST
ಅಕ್ಷರ ಗಾತ್ರ

ಫ್ಲಾರಿಡಾ: ಭಾರತ ಕ್ರಿಕೆಟ್ ತಂಡ ಗುರುವಾರ ಫೋರ್ಟ್ ಲಾಡೆರ್‌ಡೇಲ್–ಹಾಲಿವುಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. 

ವಿಮಾನ ಭೂಸ್ಪರ್ಷ ಮಾಡಿದಾಗ ರನ್‌ವೇ ಮೇಲಿದ್ದ ನೀರು, ಮಳೆ ಬಂದು ನಿಂತಿರುವುದನ್ನು ಸೂಚ್ಯವಾಗಿ ಹೇಳುತ್ತಿತ್ತು. ಪ್ರಯಾಣದುದ್ದಕ್ಕೂ ಕಾರ್ಮೋಡಗಳ ನಡುವೆ ನಡುಗಿಕೊಂಡೆ ಬಂದಿದ್ದ ಲೋಹದ ಹಕ್ಕಿಯನ್ನು ಪೈಲಟ್‌ಗಳು ಜಾಗರೂಕತೆಯಿಂದ ಲ್ಯಾಂಡ್ ಮಾಡಿದ್ದರು. 

ಶನಿವಾರ ಇದೇ ಊರಿನ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಕೆನಡಾ ತಂಡವನ್ನು ಎದುರಿಸಲಿದೆ. ಬಹುತೇಕ ಪಂದ್ಯದ ಅವಧಿಯ ಶೇ 70ರಷ್ಟು ಭಾಗವು ಮಳೆಯಿಂದಾಗಿ ಕೊಚ್ಚಿಹೋಗುವ ಸಾಧ್ಯತೆಗಳಿವೆ. 

ಆದರೆ ಮಳೆಮಾರುತದ ದಿಕ್ಕು ಬದಲಾದರೆ ಪೂರ್ಣ ಪಂದ್ಯವೂ ನಡೆಯಬಹುದು.

ಅಷ್ಟಕ್ಕೂ ಭಾರತ ತಂಡವು ಈಗಾಗಲೇ ಸೂಪರ್ 8ರ ಹಂತ ತಲುಪಿದೆ. ಕಳೆದ ಮೂರು ಪಂದ್ಯಗಳಲ್ಲಿ ಜಯಸಿದೆ, ಗುಂಪು ಹಂತದಲ್ಲಿ ರೋಹಿತ್ ಶರ್ಮಾ ಬಳಗಕ್ಕೆ ಇದು ಕೊನೆಯ ಪಂದ್ಯವಾಗಿದೆ. ಕೆನಡಾ ತಂಡಕ್ಕೂ ಇದು ಕೊನೆಯ ಹಣಾಹಣಿ. ಕಳೆದ ಮೂರು ಪಂದ್ಯಗಳಲ್ಲಿ ಎರಡು ಸೋತಿರುವ ತಂಡವು ಐರ್ಲೆಂಡ್ ಎದುರು ಜಯಿಸಿತ್ತು. 

ರೋಹಿತ್ ಬಳಗಕ್ಕೆ ಎಂಟರ ಘಟ್ಟದ ಪೂರ್ವಸಿದ್ಧತೆಗೆ ಈ ಪಂದ್ಯ ವೇದಿಕೆಯಾಗಲಿದೆ. ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್‌ನಲ್ಲಿರುವವರಿಗೆ ಅವಕಾಶ ನೀಡುವತ್ತ ತಂಡದ ಮ್ಯಾನೇಜ್‌ಮೆಂಟ್ ಚಿತ್ತ ಹರಿಸುವ ಸಾಧ್ಯತೆ ಇದೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ. 

ಕೆನಡಾ ತಂಡವು ಕಳೆದ ಪಂದ್ಯಗಳಲ್ಲಿ ಆಡಿದ ಸಂಯೋಜನೆಯನ್ನೇ ಉಳಿಸಿಕೊಂಡು ಕಣಕ್ಕಿಳಿಯಬಹುದು. ಈ ತಂಡದಲ್ಲಿ ಒಟ್ಟು ಐವರು ಭಾರತೀಯ ಮೂಲದವರಿದ್ದಾರೆ. ಅದರಲ್ಲಿ  ದಾವಣಗೆರೆಯ ಶ್ರೇಯಸ್ ಮೊವಾ (ವಿಕೆಟ್‌ಕೀಪರ್) ಕೂಡ ಒಬ್ಬರಾಗಿದ್ದರೆ. 

ತಂಡದ ನಾಯಕ ಸಾದ್ ಬಿನ್ ಜಾಫರ್ ಸೇರಿದಂತೆ ಮೂವರು ಪಾಕಿಸ್ತಾನದವರಿದ್ದಾರೆ.

ಭಾರತ ಮತ್ತು ಕೆನಡಾ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಗುಂಪು ಹಂತದಲ್ಲಿ ಅಜೇಯವಾಗುಳಿಯುವ ಭಾರತ ತಂಡದ ಗುರಿಗೆ ಸವಾಲೊಡ್ಡಲು ಕೆನಡಾ ಸಿದ್ಧವಾಗಿದೆ. 

ಭಾರತ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ಸಾಧ್ಯತೆ ಸ್ಪಿನ್ನರ್‌ಗಳಿಗೆ ಹೆಚ್ಚು ಪ್ರಾಶಸ್ತ್ಯ ನಿರೀಕ್ಷೆ ಕೆನಡಾ ತಂಡದಲ್ಲಿ ದಾವಣಗೆರೆಯ ಶ್ರೇಯಸ್ ಮೊವಾ
ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ರಿಷಭ್ ಪಂತ್ (ವಿಕೆಟ್‌ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಜಸ್‌ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ಅರ್ಷದೀಪ್ ಸಿಂಗ್ ಕೆನಡಾ: ಸಾದ್ ಬಿನ್ ಜಾಫರ್ (ನಾಯಕ)   ಆ್ಯರನ್ ಜಾನ್ಸನ್ ನವನೀತ್ ಧಲಿವಾಲ್ ಪರ್ಗತ್ ಸಿಂಗ್ ನಿಕೋಲಸ್ ಕಿರ್ಟನ್ ಶ್ರೇಯಸ್ ಮೊವಾ (ವಿಕೆಟ್‌ಕೀಪರ್) ರವಿಂದರ್‌ಪಾಲ್ ಸಿಂಗ್ ಖಲೀಂ ಸನಾ ದಿಲ್ಲೋನ್  ಹೆಲಿಗರ್ ಜುನೈದ್ ಸಿದ್ಧಿಕ್ ಜೆರೆಮಿ ಗೊರ್ಡಾನ್.  ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT