ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ವಿರುದ್ಧದ ಗೆಲುವಿಗೆ ವಿರಾಟ್ ಕೊಹ್ಲಿಯೇ ಸ್ಫೂರ್ತಿ: ಜೆಮಿಮಾ ರಾಡ್ರಿಗಸ್

Last Updated 13 ಫೆಬ್ರುವರಿ 2023, 4:17 IST
ಅಕ್ಷರ ಗಾತ್ರ

ಕೇಪ್‌ಟೌನ್: ಮಹಿಳೆಯರ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡವು ತಾನಾಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 7 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಪಂದ್ಯದ ಶ್ರೇಷ್ಠ ಆಟಗಾರ್ತಿ ಎನಿಸಿದ ಜೆಮಿಮಾ ರಾಡ್ರಿಗಸ್ ಅವರು ಈ ಗೆಲುವಿಗೆ ವಿರಾಟ್‌ ಕೊಹ್ಲಿಯೇ ಸ್ಫೂರ್ತಿ ಎಂದು ಹೇಳಿದ್ದಾರೆ.

ಕೇಪ್‌ ಟೌನ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 149 ರನ್ ಕಲೆಹಾಕಿತ್ತು. ನಾಯಕಿ ಬಿಸ್ಮಾ ಮರೂಫ್ (ಔಟಾಗದೆ 68 ರನ್‌) ಹಾಗೂ ಆಯೇಷಾ ನಸೀಮ್ (ಔಟಾಗದೆ 43 ರನ್‌) ಪಾಕಿಸ್ತಾನ ಇನಿಂಗ್ಸ್‌ಗೆ ಬಲ ತುಂಬಿದ್ದರು.

ಈ ಗುರಿ ಬೆನ್ನತ್ತಿದ ಭಾರತ ಪರ ಜೆಮಿಮಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 38 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಸಹಿತ ಅಜೇಯ 51 ರನ್‌ ಗಳಿಸಿ ಮಿಂಚಿದರು. ಇದರೊಂದಿಗೆ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಪಂದ್ಯದ ಬಳಿಕ ಮಾತನಾಡಿದ 22 ವರ್ಷದ ಆಟಗಾರ್ತಿ ಜೆಮಿಮಾ, ಸವಾಲಿನ ಗುರಿ ಬೆನ್ನತ್ತಲು ವಿರಾಟ್‌ ಕೊಹ್ಲಿ ಸ್ಫೂರ್ತಿ ಎಂದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳು ಯಾವಾಗಲೂ ಸ್ವಲ್ಪ ವಿಶೇಷತೆಯಿಂದ ಕೂಡಿರುತ್ತವೆ. ಇಂತಹ ಪಂದ್ಯಗಳನ್ನು ನೋಡುತ್ತಾ ಬೆಳದಿದ್ದೇವೆ. ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ವಿರಾಟ್‌ ಕೊಹ್ಲಿ ಅವರು ಅಸಾಧಾರಣ ಇನಿಂಗ್ಸ್‌ ಆಡಿದ ಪಂದ್ಯವನ್ನು ವೀಕ್ಷಿಸಿದ್ದು ನೆನಪಿದೆ. ಅದೇ ರೀತಿ ಹಾಗೂ ಅಷ್ಟೇ ತೀವ್ರವಾಗಿ ಆಡಬೇಕು ಎಂದು ತಂಡದ ಸಭೆಯಲ್ಲಿ ಮಾತನಾಡಿದ್ದೆವು ಎಂದು ಹೇಳಿದ್ದಾರೆ.

ಕೊಹ್ಲಿ ಮಿಂಚು
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಕಳೆದ ವರ್ಷ (2022ರಲ್ಲಿ) ಆಸ್ಟ್ರೇಲಿಯಾದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವು ಅಕ್ಟೋಬರ್‌ 23ರಂದು ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 31 ರನ್‌ ಗಳಿಸುವಷ್ಟರಲ್ಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್‌ ಗತಿ ಹೆಚ್ಚಿಸಿದರು. ಕೊನೆಯವರೆಗೂ ಹೋರಾಡಿ ಗೆಲುವು ತಂದುಕೊಟ್ಟರು.

ಕೇವಲ 53 ಎಸೆತಗಳನ್ನು ಎದುರಿಸಿದ ಕೊಹ್ಲಿ, 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್‌ ಬಾರಿಸಿ ಮಿಂಚಿದ್ದರು. ಅಂದಹಾಗೆ, ಮೊದಲ 50 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರ 32 ರನ್‌ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದ್ದರು. ಅವರ ಆಟದ ಬಲದಿಂದಾಗಿ ಭಾರತಕ್ಕೆ 4 ವಿಕೆಟ್‌ ಅಂತರದ ಜಯ ಒಲಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT