ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ನಮೀಬಿಯಾ ವಿರುದ್ಧ ಕಿವೀಸ್‌ಗೆ 52 ರನ್ ಗೆಲುವು

Last Updated 5 ನವೆಂಬರ್ 2021, 13:30 IST
ಅಕ್ಷರ ಗಾತ್ರ

ಶಾರ್ಜಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ಶಾರ್ಜಾದಲ್ಲಿ ನಡೆದ ಸೂಪರ್-12 ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ 52 ರನ್ ಅಂತರದ ಗೆಲುವು ದಾಖಲಿಸಿದೆ.

ಇದರೊಂದಿಗೆ ಸೆಮಿಫೈನಲ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಕಿವೀಸ್, ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವಿನೊಂದಿಗೆ ಒಟ್ಟು ಆರು ಅಂಕ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ.

ಇನ್ನೊಂದೆಡೆ ಭಾರತದ ಸೆಮಿಫೈನಲ್ ಹಾದಿ ಕಠಿಣವೆನಿಸಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅಫ್ಗಾನಿಸ್ತಾನದಗೆಲುವಿಗಾಗಿ ನಿರೀಕ್ಷಿಸಬೇಕಿದೆ. ಅಲ್ಲದೆ ತನ್ನ ಅಂತಿಮ ಎರಡು ಪಂದ್ಯಗಳಲ್ಲಿ ಬೃಹತ್ ಗೆಲುವು ದಾಖಲಿಸುವ ಒತ್ತಡಕ್ಕೆ ಸಿಲುಕಿದೆ.

ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ನಾಲ್ಕು ವಿಕೆಟ್ ನಷ್ಟಕ್ಕೆ 163 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ನಮೀಬಿಯಾ ಏಳು ವಿಕೆಟ್ ನಷ್ಟಕ್ಕೆ 117 ರನ್ ಗಳಿಸಲಷ್ಟೇ ಸಮರ್ಥವಾಯಿತು.

ಯಾವ ಹಂತದಲ್ಲೂ ನಮೀಬಿಯಾ ಬ್ಯಾಟರ್‌ಗಳು ಕಿವೀಸ್‌ಗೆ ಸವಾಲಾಗಲೇ ಇಲ್ಲ. ಸ್ಟೀಫನ್‌ ಬಾರ್ಡ್‌ (21), ಮೈಕೆಲ್ ವಾನ್‌ ಲಿಂಗೆನ್‌ (25), ಜೇನ್‌ ಗ್ರೀನ್‌ (23) ರನ್ ಗಳಿಸಿದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಈ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಹಿನ್ನಡೆಯನ್ನು ಅನುಭವಿಸಿತ್ತು. 16 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತ್ತು. ಮಾರ್ಟಿನ್ ಗಪ್ಟಿಲ್ (18), ಡೆರಿಲ್ ಮಿಚೆಲ್ (19), ನಾಯಕ ಕೇನ್ ವಿಲಿಯಮ್ಸನ್ (28) ಹಾಗೂ ವಿಕೆಟ್ ಕೀಪರ್ ಡೆವೊನ್ ಕಾನ್ವೆ (17) ಪೆವಿಲಿಯನ್ ಸೇರಿಕೊಂಡಿದ್ದರು.

ಈ ಹಂತದಲ್ಲಿ ಜೊತೆಗೂಡಿದ ಗ್ಲೆನ್ ಫಿಲಿಪ್ಸ್ ಹಾಗೂ ಜೇಮ್ಸ್ ನೀಶಮ್ ಮುರಿಯದ ಐದನೇ ವಿಕೆಟ್‌ಗೆ 76 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು.

ಅಲ್ಲದೆ ಅಂತಿಮ ನಾಲ್ಕು ಓವರ್‌ಗಳಲ್ಲಿ 67 ರನ್ ಸೊರೆಗೈದರು. 21 ಎಸೆತಗಳನ್ನು ಎದುರಿಸಿದ ಫಿಲಿಪ್ಸ್ 39* ರನ್ (3 ಸಿಕ್ಸರ್, 1 ಬೌಂಡರಿ) ಹಾಗೂ 23 ಎಸೆತಗಳನ್ನು ಎದುರಿಸಿದ ನೀಶಮ್ 35* ರನ್ ಗಳಿಸಿ (2 ಸಿಕ್ಸರ್, 1 ಬೌಂಡರಿ) ಔಟಾಗದೆ ಉಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT