ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಮಿಫೈನಲ್ | ಅವಕಾಶಕ್ಕಾಗಿ ಪಂತ್–ಕಾರ್ತಿಕ್ ಪೈಪೋಟಿ: ರವಿಶಾಸ್ತ್ರಿ ಹೇಳಿದ್ದೇನು?

Last Updated 7 ನವೆಂಬರ್ 2022, 14:59 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಈ ಬಾರಿಯ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿಭಾರತ ತಂಡವು ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ. ಸೂಪರ್‌ 12ರ ಹಂತದ ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತ ಪರ ವಿಕೆಟ್‌ಕೀಪರ್‌ ಬ್ಯಾಟರ್‌ ಆಗಿ ಕಣಕ್ಕಿಳಿದಿದ್ದ ದಿನೇಶ್‌ ಕಾರ್ತಿಕ್‌ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೀಗಾಗಿ ಐದನೇ ಪಂದ್ಯದಲ್ಲಿ ಅವರ ಬದಲು ರಿಷಭ್‌ ಪಂತ್‌ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಗಿಟ್ಟಿಸಿದ್ದರು. ಆದರೆ ಅವರೂ ನಿರಾಸೆ ಮೂಡಿಸಿದ್ದರು.

ಮೂರು ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದದಿನೇಶ್‌, ಕ್ರಮವಾಗಿ 1, 6 ಮತ್ತು 7 ರನ್‌ ಗಳಿಸಿ ಔಟಾಗಿದ್ದರು. ಇತ್ತ ಆಡಿದ ಒಂದು ಪಂದ್ಯದಲ್ಲಿ ಪಂತ್‌ ಗಳಿಸಿದ್ದು ಮೂರು ರನ್‌ ಮಾತ್ರ.ಹೀಗಾಗಿ, ನವೆಂಬರ್‌ 10ರಂದು ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಈ ಇಬ್ಬರಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಭಾರತ ಕ್ರಿಕೆಟ್‌ ತಂಡದ ಮಾಜಿ ಕೋಚ್‌ರವಿಶಾಸ್ತ್ರಿ,ಈ ಕುರಿತು ಕ್ರೀಡಾವಾಹಿನಿ 'ಸ್ಟಾರ್‌ಸ್ಪೋರ್ಟ್ಸ್‌' ಜೊತೆ ಮಾತನಾಡಿದ್ದಾರೆ. ರಿಷಭ್‌ ಪಂತ್‌ಗೆ ಅವಕಾಶ ನೀಡಬೇಕು. ಅಡಿಲೇಡ್‌ನಲ್ಲಿ ನಡೆಯುವ ಪಂದ್ಯದಲ್ಲಿ ರಿಷಭ್‌ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ದಿನೇಶ್‌ ಕಾರ್ತಿಕ್‌ ತಂಡಕ್ಕಾಗಿ ಆಡುವ ಉತ್ತಮ ಆಟಗಾರ. ಆದರೆ, ಇಂಗ್ಲೆಂಡ್‌ ಅಥವಾ ನ್ಯೂಜಿಲೆಂಡ್‌ ವಿರುದ್ಧ ಆಡುವಾಗ ಬಲವಾಗಿ ಚೆಂಡನ್ನು ಬಾರಿಸಬಲ್ಲ ಎಡಗೈ ಬ್ಯಾಟರ್‌ ಇರಬೇಕಾಗುತ್ತದೆ' ಎಂದು ಶಾಸ್ತ್ರಿ ಹೇಳಿದ್ದಾರೆ.

'ಪಂತ್‌ ಇಂಗ್ಲೆಂಡ್‌ ವಿರುದ್ಧ ಚೆನ್ನಾಗಿ ಆಡಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಏಕದಿನ ಪಂದ್ಯ ಗೆದ್ದುಕೊಟ್ಟಿದ್ದರು. ಹಾಗಾಗಿ ನಾನು ಪಂತ್‌ ಅವರನ್ನು ಬೆಂಬಲಿಸುತ್ತೇನೆ. ಅವರು ತಂಡದ ಪ್ರಮುಖ ಆಟಗಾರನಾಗಿದ್ದು, ಸೆಮಿಫೈನಲ್‌ ಗೆದ್ದುಕೊಡಬಲ್ಲರು' ಎಂದು ವಿವರಿಸಿದ್ದಾರೆ.

ಮುಂದುವರಿದು, 'ನೀವು ಅಡಿಲೇಡ್‌ನಲ್ಲಿ ಆಡುತ್ತಿದ್ದೀರಿ. ನಾಲ್ಕೂ ಮೂಲೆಗಳಲ್ಲಿ ಬೌಂಡರಿ ಗೆರೆ ಚಿಕ್ಕದಾಗಿರುತ್ತದೆ. ಅಷ್ಟಲ್ಲದೆ, ಇಂಗ್ಲೆಂಡ್‌ ಬೌಲಿಂಗ್ ದಾಳಿಯನ್ನು ಛಿದ್ರ ಮಾಡಲು ಎಡಗೈ ಬ್ಯಾಟರ್‌ ತಂಡದಲ್ಲಿ ಇರಬೇಕು. ನೀವು ಸಾಕಷ್ಟು ಬಲಗೈ ಬ್ಯಾಟರ್‌ಗಳನ್ನು ಹೊಂದಿದ್ದರೆ, ಏಕತಾನತೆ ಮೂಡುತ್ತದೆ. ಇಂಗ್ಲೆಂಡ್‌ ತಂಡ ಎಡಗೈ ಮತ್ತು ಬಲಗೈ ಆಟಗಾರರನ್ನೊಳಗೊಂಡ ಉತ್ತಮ ಬೌಲಿಂಗ್‌ ಪಡೆಯನ್ನು ಹೊಂದಿದೆ. ಹೀಗಾಗಿ ಮೂರು, ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ, ಕೊನೆಯ ಓವರ್‌ಗಳಲ್ಲಿ ರನ್‌ ಗಳಿಸಿಕೊಡಬಲ್ಲ ಈ ಅಪಾಯಕಾರಿ ಎಡಗೈ ಬ್ಯಾಟರ್‌ನ (ಪಂತ್‌) ಅವಶ್ಯಕತೆ ತಂಡಕ್ಕಿದೆ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT