ಮಂಗಳವಾರ, ಮೇ 11, 2021
26 °C

IND vs ENG: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್‌ ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ನಿಂದ 2019ರ ನವೆಂಬರ್‌ನಿಂದ ಒಂದೇ ಒಂದು ಶತಕ ಸಿಡಿದಿಲ್ಲ. ಆದರೆ, ದಾಖಲೆಗಳನ್ನು ಮುರಿಯುವ, ಹೊಸ ದಾಖಲೆಗಳನ್ನು ಬರೆಯುವ ಅವರ ಓಟಕ್ಕೇನೂ ತಡೆ ಬಿದ್ದಿಲ್ಲ. ಇತ್ತೀಚೆಗಷ್ಟೇ ತವರಿನ ಅಂಗಳದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ವೇಗವಾಗಿ 10 ಸಾವಿರ ರನ್‌ ಪೂರೈಸಿದ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿ ಇದೀಗ ಇನ್ನೊಂದು ದಾಖಲೆಯ ಹೊಸ್ತಿಲಲ್ಲಿ ನಿಂತಿದ್ದಾರೆ.

ಇಂದು ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಇನ್ನು 41 ರನ್‌ ಗಳಿಸಿದರೆ, ಅವರು ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಲಿದ್ದಾರೆ. ಈವರೆಗೆ 93 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಕೊಹ್ಲಿ ಒಟ್ಟು 5,376 ರನ್‌ ಗಳಿಸಿದ್ದಾರೆ.

234 ಏಕದಿನ ಪಂದ್ಯಗಳಲ್ಲಿ 8,497 ರನ್‌ ಗಳಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಎರಡನೇ ಸ್ಥಾನದಲ್ಲಿದ್ದು, 200 ಪಂದ್ಯಗಳಿಂದ 6,641 ರನ್‌ ಗಳಿಸಿದ್ದಾರೆ.

ನ್ಯೂಜಿಲೆಂಡ್‌ನ ಸ್ಟೀಫನ್‌ ಫ್ಲೆಮಿಂಗ್‌ (6,295) ಮತ್ತು ಶ್ರೀಲಂಕಾದ ಅರ್ಜುನ್‌ ರಣತುಂಗಾ (5,608) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಇದ್ದಾರೆ.

150 ಪಂದ್ಯಗಳಿಂದ 5,416 ರನ್‌ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಅವರು ಸದ್ಯ ಐದನೇ ಸ್ಥಾನದಲ್ಲಿದ್ದಾರೆ.

ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಕೊಹ್ಲಿ ಉಳಿದೆಲ್ಲರಿಗಿಂತ ಉತ್ತಮ ರನ್‌ ಗಳಿಕೆ ಸರಾಸರಿ ಹೊಂದಿದ್ದಾರೆ. ಏಕದಿನ ಮಾದರಿಯಲ್ಲಿ ನಾಯಕನಾಗಿ ಶೇ. 70ರ ಸರಾಸರಿಯಲ್ಲಿ ರನ್‌ ಗಳಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ಅವರದ್ದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು