ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಶರ್ಮಾ ನಾಯಕತ್ವದ ಕಾಲ?: ನಾಯಕತ್ವ ಬದಲಾವಣೆ ಕುರಿತ ಚರ್ಚೆಗೆ ಚಾಲನೆ

ವಿಶ್ವಕಪ್ ಸೆಮಿಫೈನಲ್ ಸೋಲು
Last Updated 13 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಗದಿಯ ಓವರ್‌ಗಳ ಕ್ರಿಕೆಟ್‌ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡಲು ಇದು ಸೂಕ್ತ ಕಾಲ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅವರು ಭಾರತವನ್ನು ಮುನ್ನಡೆಸುವುದನ್ನು ನೋಡುವುದು ನನ್ನ ಇಚ್ಛೆ’ – ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್ ಅವರು ಮಾಡಿರುವ ಈ ಟ್ವೀಟ್ ಈಗ ಭಾರತ ಕ್ರಿಕೆಟ್ ತಂಡದ ನಾಯಕತ್ವದ ಬದಲಾವಣೆಯ ಚರ್ಚೆಗೆ ಚಾಲನೆ ನೀಡಿದೆ.

ಈಚೆಗೆ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಸೋತಿತ್ತು. ಆದರೆ, ಟೂರ್ನಿಯಲ್ಲಿ ಐದು ಶತಕಗಳನ್ನು ಹೊಡೆದಿದ್ದ ರೋಹಿತ್ ಶರ್ಮಾ ವಿಶ್ವದಾಖಲೆ ಬರೆದಿದ್ದರು. ರೌಂಡ್ ರಾಬಿನ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಅಗ್ರಸ್ಥಾನ ಪಡೆದಿತ್ತು.

ಭಾರತ ತಂಡವನ್ನು ಪ್ರತಿನಿಧಿಸಿರುವ ವಾಸೀಂ ಜಾಫರ್ ದೇಶಿ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಮುಂಬೈ ತಂಡಕ್ಕೆ ಆಡುತ್ತಿದ್ದರು. ಕಳೆದ ಮೂರು ಋತುಗಳಿಂದ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಅವರ ಟ್ವೀಟ್‌ಗೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ‘ರೋಹಿತ್ ಶರ್ಮಾಗೆ ಏಕದಿನ ಮತ್ತು ಟ್ವೆಂಟಿ–20 ಮಾದರಿಗಳ ತಂಡಕ್ಕೆ ನಾಯಕತ್ವ ನೀಡುವುದು ಸೂಕ್ತ’ ಎಂದಿದ್ದಾರೆ.

‘ವಿರಾಟ್‌ ಅವರಿಗೆ ಹೋಲಿಸಿದರೆ ರೋಹಿತ್ ಹೆಚ್ಚು ಶಾಂತಸ್ವಭಾವಿ. ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ತಂತ್ರಗಾರಿಕೆಗಳನ್ನು ಹೆಣೆಯಬಲ್ಲರು. ಬ್ಯಾಟಿಂಗ್‌ನಲ್ಲಿಯೂ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಅತ್ಯುತ್ಸಾಹಿ. ಅಗ್ರೇಸಿವ್ ಇದ್ದಾರೆ. ಆದರೆ, ಅವರದ್ದು ಕೆಲವೊಮ್ಮೆ ಅತಿರೇಕದ ಪ್ರದರ್ಶನವೂ ಆಗಿರುತ್ತದೆ. ಐಪಿಎಲ್‌ನಲ್ಲಿ ರೋಹಿತ್ ಸಾಧನೆ ಅಮೋಘವಾಗಿದೆ. ಆಲ್‌ರೌಂಡರ್‌ಗಳನ್ನು ನಿಭಾಯಿಸುವ ರೀತಿಯನ್ನು ಅವರು ಬಲ್ಲರು. ಆದ್ದರಿಂದ ಅವರು ಭಾರತ ತಂಡದ ನಾಯಕತ್ವಕ್ಕೆ ಅರ್ಹರು’ ಎಂದು ಪ್ರಣಬ್‌ ಕುಮಾರ್ ಐಚ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.

‘ಕೊಹ್ಲಿ ಇವತ್ತು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಅದರಲ್ಲಿ ಬಗ್ಗೆ ಎರಡು ಮಾತಿಲ್ಲ. ಆದರೆ ಅವರು ಉತ್ತಮ ನಾಯಕನಲ್ಲ. ಐಪಿಎಲ್‌ನಲ್ಲಿ ಅವರ ನಾಯಕತ್ವದ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್‌ ಬೆಂಗಳೂರು) ತಂಡವು ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. 2017ರಲ್ಲಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ಎದುರು ಭಾರತ ಸೋತಿತ್ತು. ಆದ್ದರಿಂದ ನಿಗದಿಯ ಓವರ್‌ಗಳ ತಂಡದ ನಾಯಕತ್ವಕ್ಕೆ ರೋಹಿತ್ ಉತ್ತಮ ಆಯ್ಕೆ’ ಎಂದು ರೊಮನ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.

‘ಭಾರತ ತಂಡದ ಕೋಚ್‌ ಸ್ಥಾನದಿಂದ ರವಿಶಾಸ್ತ್ರೀ ಕೂಡ ನಿರ್ಗಮಿಸಬೇಕು. ಆ ಸ್ಥಾನಕ್ಕೆ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ನೇಮಕವಾಗಬೇಕು’ ಎಂದು ಅಕ್ಷಯ್ ಅಶೋಕ್ ಮಾರ್ಕಡ್ ಟ್ವೀಟ್ ಮಾಡಿದ್ದಾರೆ.

ಕೊಹ್ಲಿ ಅವರ ತಮ್ಮ ಬ್ಯಾಟಿಂಗ್‌ ಮೂಲಕ ಹಲವರನ್ನು ಪ್ರಭಾವಿಸಿದ್ದಾರೆ. ಅವರು ನಾಯಕರಾಗಿಯೇ ಮುಂದುವರಿಯಲಿ ಎಂದು ಇನ್ನೂ ಕೆಲವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT