ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಅವರಿಗೆ ಸಾಟಿಯಾಗಲು ಎಂದೆಂದೂ ಸಾಧ್ಯವಿಲ್ಲ: ಧ್ರುವ್ ಜುರೇಲ್

Published 15 ಮಾರ್ಚ್ 2024, 13:46 IST
Last Updated 15 ಮಾರ್ಚ್ 2024, 13:46 IST
ಅಕ್ಷರ ಗಾತ್ರ

ನವದೆಹಲಿ: ಧ್ರುವ್‌ ಜುರೇಲ್‌ ಅವರನ್ನು ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ ವಿಕೆಟ್‌ ಕೀಪರ್–ಬ್ಯಾಟರ್‌ ಜುರೇಲ್ ಇದನ್ನು ಒಪ್ಪುವುದಿಲ್ಲ. ಧೋನಿ ಅವರೊಂದಿಗೆ ಯಾರನ್ನೂ ತುಲನೆ ಮಾಡಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ತಮ್ಮದೇ ಛಾಪು ಮೂಡಿಸುವತ್ತ ಗಮನಹರಿಸುವುದಾಗಿ ಅವರು ಶುಕ್ರವಾರ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಇತ್ತೀಚಿನ ಟೆಸ್ಟ್ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಜುರೇಲ್, ವಿಕೆಟ್‌ ಹಿಂದುಗಡೆ ಚುರುಕಾಗಿದ್ದರು. ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡಿದ್ದರು. ಡಿಆರ್‌ಎಸ್‌ ಸಂದರ್ಭದಲ್ಲೂ ನಾಯಕ ರೋಹಿತ್ ಶರ್ಮ ಅವರಿಗೆ ಸೂಕ್ಷ್ಮವಾಗಿ ಸಲಹೆ ನೀಡುತ್ತಿದ್ದರು.

ಅವರ ಈ ಉತ್ತಮ ಸಾಧನೆಯಿಂದ ವೀಕ್ಷಕ ವಿವರಣೆಗಾರ ಹಾಗೂ ದಿಗ್ಗಜ ಆಟಗಾರ ಸುನಿಲ್ ಗಾವಸ್ಕರ್ ಅವರು ಜುರೇಲ್ ಅವರನ್ನು ಧೋನಿಗೆ ಹೋಲಿಸಿದ್ದರು. ಆದರೆ, 23 ವರ್ಷದ ಜುರೇಲ್ ಈ ಹೋಲಿಕೆಯನ್ನು ನಯವಾಗಿ ನಿರಾಕರಿಸಿದರು.

‘ಧೋನಿ ಸರ್‌ ಜೊತೆ ನನ್ನನ್ನು ಹೋಲಿಸಿದ್ದಕ್ಕೆ ಕೃತಜ್ಞತೆಗಳು ಗಾವಸ್ಕರ್ ಸರ್‌. ಧೋನಿ ಸರ್ ಏನು ಮಾಡಿದ್ದಾರೆ ಅದನ್ನು ಬೇರೊಬ್ಬರು ಪುನರಾವರ್ತಿಸಲು ಆಗದು ಎಂದು ವೈಯಕ್ತಿಕವಾಗಿ ಹೇಳಬಯಸುವೆ’ ಎಂದು ಅವರು ಇಂಡಿಯಾ ಟುಡೇ ಕಾಂಕ್ಲೇವ್‌ನಲ್ಲಿ ತಿಳಿಸಿದ್ದಾರೆ.

‘ಧೋನಿ ಅವರಿಗೆ ಸಾಟಿಯಾಗಲು ಎಂದೆಂದೂ ಸಾಧ್ಯವಿಲ್ಲ. ನಾನು ಜುರೇಲ್‌ ಆಗಿಯೇ ಇರಬಯಸುತ್ತೇನೆ. ನಾನೇನು ಮಾಡುವೆನೊ, ಜುರೇಲ್‌ ಆಗಿಯೇ ಮಾಡುವೆ. ಧೋನಿ ಸರ್‌ ದಂತಕತೆ. ಅವರು ಹಾಗೆಯೇ ಇರುತ್ತಾರೆ’ ಎಂದು ಯುವ ವಿಕೆಟ್‌ ಕೀಪರ್‌ ಬಣ್ಣಿಸಿದರು.

‘ಟೆಸ್ಟ್ ಮಾದರಿ ಕ್ರಿಕೆಟ್‌ನ ಪರಿಶುದ್ಧ ರೂಪ’ ಎಂದು ಹೇಳಿದ ಜುರೇಲ್, ಟೆಸ್ಟ್‌ ಕ್ಯಾಪ್‌ ಪಡೆದಿದ್ದು ನನ್ನ ಕನಸು ನನಸಾದಂತೆನಿಸಿತು ಎಂದರು.

‘ಟೆಸ್ಟ್ ಆಡಬೇಕೆಂಬುದು ನನ್ನ ಆಸೆಯಾಗಿತ್ತು. ನಾನು 19 ವರ್ಷದೊಳಗಿನವರ ಕ್ರಿಕೆಟ್‌ ಆಡುತ್ತಿದ್ದಾಗ ನನ್ನ ಗುರಿಯಿದ್ದುದು 200 ಟೆಸ್ಟ್‌ಗಳನ್ನಾಡಬೇಕೆಂಬುದು. ಆಮೇಲೆ ಅದು ಸಾಧ್ಯವಿಲ್ಲ’ ಎಂಬುದು ನಂತರ ಮನವರಿಕೆಯಾಯಿತು.

ದೇಶಕ್ಕೆ ಕೀರ್ತಿ ತಂದ ಮಗನಿಗೆ ತಂದೆಯೇ ಸೆಲ್ಯೂಟ್‌ ಹೊಡೆದ ಭಾವನಾತ್ಮಕ ಕ್ಷಣಕ್ಕೂ ಕಾಂಕ್ಲೇವ್ ವೇದಿಕೆಯಾಯಿತು. ಕಾರ್ಗಿಲ್‌ ಯುದ್ಧದ  ಯೋಧರಾಗಿದ್ದ ಅವರ ತಂದೆ ನೆಮ್ ಚಂದ್‌ ಅತಿಥಿಗಳ ಸಾಲಿನಲ್ಲಿ ಕುಳಿತಿದ್ದರು.

‘ನನ್ನ ತಂದೆ ಸೇನೆಯಲ್ಲಿದ್ದರು. ಅವರೂ ನಾನು ಸೇನೆಗೆ ಸೇರಿ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ) ಪರೀಕ್ಷೆ ಉತ್ತೀರ್ಣರಾಗಬೇಕೆಂದು ಬಯಸಿದ್ದರು. ತಂದೆ ಡಯಟ್ ಮತ್ತು ತರಬೇತಿ ವಿಷಯದಲ್ಲಿ ಶಿಸ್ತಿನ ವ್ಯಕ್ತಿ’ ಎಂದರು.

ನಾನು ಕ್ರಿಕೆಟ್‌ ಆಡುವುದನ್ನು ತಂದೆ ಬಯಸಿರಲಿಲ್ಲ. ನಾನು ಆಡುವುದನ್ನೂ ತಂದೆಗೆ ಹೇಳಿರಲಿಲ್ಲ. ನಂತರ ತಾಯಿಯ ನೆರವು ಪಡೆದೆ. ತಂದೆ ಬ್ಯಾಟ್‌ ಕೊಡಿಸಲು ಒಪ್ಪಿದರು. ಕಿಟ್‌ಗೆ 5000–6000 ಬೇಕಿದ್ದಾಗ ತಾಯಿ ಚಿನ್ನದ ಸರ ಮಾರಿ ಕೊಡಲು ಮುಂದಾಗಿದ್ದರು’ ಎಂದು ಜುರೇಲ್ ತಮ್ಮ ಕ್ರಿಕೆಟ್‌ ಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT