ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾಕ್ಕೆ ಮುಖಭಂಗ; ಟಾಪ್ 10ರ ವಿರುದ್ಧ ಅಮೆರಿಕಕ್ಕೆ ಐತಿಹಾಸಿಕ ಸರಣಿ ಗೆಲುವು

Published 24 ಮೇ 2024, 2:06 IST
Last Updated 24 ಮೇ 2024, 2:06 IST
ಅಕ್ಷರ ಗಾತ್ರ

ಹೂಸ್ಟನ್: ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲೂ ಅಮೆರಿಕ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಐಸಿಸಿ ಅಗ್ರ 10ರ ಕ್ರಮಾಂಕದ ತಂಡದ ವಿರುದ್ಧ ಅಮೆರಿಕ ಗಳಿಸಿದ ಐತಿಹಾಸಿಕ ಸರಣಿ ಗೆಲುವು ಇದಾಗಿದೆ. 9ನೇ ರ‍್ಯಾಂಕಿಂಗ್‌‌ನಲ್ಲಿರುವ ಬಾಂಗ್ಲಾದೇಶಕ್ಕೆ ಆಘಾತ ನೀಡಿರುವ 19ನೇ ರ‍್ಯಾಂಕ್‌ನ ಅಮೆರಿಕ, ಸತತ ಎರಡನೇ ಗೆಲುವು ಗಳಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ಆರು ವಿಕೆಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮೊನಂಕ್ ಪಟೇಲ್ (42), ಆ್ಯರೋನ್ ಜಾನ್ಸ್ (35) ಹಾಗೂ ಸ್ಟೀವನ್ ಟೇಲರ್ (31) ಉಪಯುಕ್ತ ಕಾಣಿಕೆ ನೀಡಿದರು. ಬಾಂಗ್ಲಾ ಪರ ಶೋರಿಫುಲ್ ಇಸ್ಲಾಂ, ಮುಸ್ತಾಫಿಜುರ್ ರೆಹ್ಮಾನ್ ಹಾಗೂ ರಿಷಾದ್ ಹೊಸೈನ್ ತಲಾ ಎರಡು ವಿಕೆಟ್ ಗಳಿಸಿದರು.

ಬಳಿಕ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಒಂದು ಹಂತದಲ್ಲಿ 10.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕೊನೆಯ ಹಂತದಲ್ಲಿ ದಿಢೀರ್ ಪತನ ಕಂಡು 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ನಜ್ಮುಲ್ ಹೊಸೈನ್ ಶಾಂಟೊ 36, ಶಕೀಬ್ ಅಲ್ ಹಸನ್ 30 ಹಾಗೂ ತೌಹಿದ್ ಹೃದೊಯ್ 25 ರನ್ ಗಳಿಸಿದರು. ಮೂರು ವಿಕೆಟ್ ಗಳಿಸಿದ ಅಲಿ ಖಾನ್ ಅಮೆರಿಕದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸೌರಭ್ ನೇತ್ರವಾಲ್ಕರ್ ಹಾಗೂ ಶಾಡ್ಲಿ ವ್ಯಾನ್ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.

ಸರಣಿಯ ಮೊದಲ ಪಂದ್ಯದಲ್ಲಿ ಅಮೆರಿಕ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು. ಸರಣಿಯ ಕೊನೆಯ ಪಂದ್ಯ ಮೇ 25, ಶನಿವಾರದಂದು ನಡೆಯಲಿದೆ.

ಈ ಬಾರಿಯ ಐಸಿಸಿ ಟ್ವೆಂಟಿ-20 ವಿಶ್ವಕಪ್ ವೆಸ್ಟ್‌ಇಂಡೀಸ್ ಹಾಗೂ ಅಮೆರಿಕ ಆತಿಥ್ಯದಲ್ಲಿ ನಡೆಯಲಿದೆ. ಇದರೊಂದಿಗೆ ಅತಿಥೇಯ ತಂಡವು ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT