ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳವಣಿಗೆಗೆ ನೆರವಾದ ಉಸೇನ್ ಬೋಲ್ಟ್‌ ಪೈಪೋಟಿ: ಜಸ್ಟಿನ್ ಗ್ಯಾಟ್ಲಿನ್

Last Updated 13 ಮೇ 2022, 7:23 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಜಮೈಕಾದ ಉಸೇನ್ ಬೋಲ್ಟ್‌ ಮತ್ತು ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಅವರ ’ವೈರತ್ವ’ ಜನಜನಿತ.

ಸ್ಪ್ರಿಂಟ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಲು ಇವರಿಬ್ಬರಲ್ಲಿ ಏರ್ಪಡುತ್ತಿದ್ದ ಪೈಪೋಟಿಯಿಂದಾಗಿ ಹಲವು ವಿಶ್ವದಾಖಲೆಗಳು ಮೂಡಿದವು. ಉಸೇನ್ ಬೋಲ್ಟ್‌ ವೇಗದ ಓಟದ ದಂತಕಥೆ ಆದರು. ಅವರಿಗೆ ನಿಕಟ ಪೈಪೋಟಿಯೊಡ್ಡಿದ ಗ್ಯಾಟ್ಲಿನ್ ಕೂಡ ತಾರೆಯಾದರು. ಪರಸ್ಪರರನ್ನು ಹಿಂದಿಕ್ಕಿ ಬೆಳೆಯುವ ಛಲದಲ್ಲಿ ಇಬ್ಬರೂ ಅಥ್ಲೆಟಿಕ್ ರಂಗದ ದಿಗ್ಗಜರಾದರು.

ಗುರುವಾರ ಶ್ರೀಕಂಠಿರವ ಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಸ್ಟಿನ್ ಗ್ಯಾಟ್ಲಿನ್ ಹೇಳಿದ ಮಾತುಗಳ ಸಾರ ಇದು. ಇದೇ 15ರಂದು ನಡೆಯಲಿರುವ ಟಿಸಿಎಸ್ ಟೆನ್‌ ಕೆ ಓಟದ ಪ್ರಚಾರ ರಾಯಭಾರಿಯಾಗಿರುವ ಅವರು ತಮ್ಮ ಸ್ಪರ್ಧೆಯ ದಿನಗಳಲ್ಲಿ ನೆನಪಿಸಕೊಂಡರು.

‘ನಾನು ಮತ್ತು ಉಸೇನ್ ಬೋಲ್ಟ್‌ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವ ಕಾಲಘಟ್ಟದಲ್ಲಿ ವೈರತ್ವ ಮೂಡಲು ನಮ್ಮೊಳಗಿನ ಅಹಂಭಾವ ಕಾರಣವಾಗಿತ್ತು. ಆದರೆ, ಒಬ್ಬರನ್ನೊಬ್ಬರು ಮೀರಿಸಲು ಶ್ರಮಪಟ್ಟಿದ್ದರಿಂದ ಇಬ್ಬರೂ ಬೆಳೆದೆವು ಎಂಬುದು ನಿವೃತ್ತಿಯ ನಂತರವೇ ಗೊತ್ತಾಯಿತು. ಒಬ್ಬರನ್ನೊಬ್ಬರು ಮೀರಿಸುವ ಭರದಲ್ಲಿ ಪರಸ್ಪರ ಬೆಳೆಯಲು ನೆರವಾದೆವು ಎಂಬುದನ್ನು ಉಸೇನ್ ಮತ್ತು ನಾನು ಈಗ ಮುಕ್ತವಾಗಿ ಒಪ್ಪುತ್ತೇವೆ’ ಎಂದರು.

‘ಓಟದ ಸ್ಪರ್ಧೆಗಾಗಿ ಕಣಕ್ಕಿಳಿದ ಯಾವುದೇ ಸಂದರ್ಭದಲ್ಲಿಯೂ ನಾನು ಅಧಿರನಾಗಲಿಲ್ಲ. ಏಕೆಂದರೆ, ಈ ರೇಸ್‌ಗಾಗಿ ನಾನು ಸಿದ್ಧನಾಗಿದ್ದೇನೆ ಎಂಬ ಆತ್ಮವಿಶ್ವಾಸ ಮತ್ತು ನಾನು ಹುಟ್ಟಿರುವುದೇ ಈ ರೇಸ್‌ಗಾಗಿ ಎಂಬ ಮನೋಭಾವ ಇರುತ್ತಿದ್ದುದೇ ಅದಕ್ಕೆ ಕಾರಣ. ನಾವು ಯಾವುದೇ ಕ್ರೀಡೆಯಲ್ಲಿ ಇರಲಿ. ಅದು ನಮಗಾಗಿಯೇ ಇರುವುದು. ನಾವು ಅದಕ್ಕಾಗಿಯೇ ಜನಿಸಿರುವುದು ಎಂಬುದನ್ನು ಅರಿತಾಗ ಯಶಸ್ಸು ಸಲೀಸು’ ಎಂದರು.

‘ನನ್ನ ಜೀವನದಲ್ಲಿ 10 ಕಿ.ಮೀ ಅಂತರದ ಓಟವನ್ನು ಓಡಿಲ್ಲ. ಆದರೆ ಇವತ್ತು ಈಓಟಕ್ಕೆ ರಾಯಭಾರಿಯಾಗಿರುವುದು ಸಂತಸವಾಗುತ್ತಿದೆ. ಬೆಂಗಳೂರಿನ ವಾತಾವರಣವು ಕ್ರೀಡೆಗೆ ಉತ್ತಮವಾಗಿದೆ. ಎಲ್ಲ ಓಟಗಾರರೂ ಯುವಜನರಿಗೆ ಪ್ರೇರಣೆಯಾಗಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT