ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಂಕ್ ಬಳಗಕ್ಕೆ ಕೈಗೂಡದ ಕನಸು

ರಣಜಿ: ಸೌರಾಷ್ಟ್ರ–ಸೆಮಿ ಸವಾಲು ಮೀರದ ಕರ್ನಾಟಕ; ಗೌತಮ್, ಕೌಶಿಕ್ ಅಮೋಘ ಬೌಲಿಂಗ್
Last Updated 12 ಫೆಬ್ರುವರಿ 2023, 20:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡವು ಈ ಬಾರಿಯ ರಣಜಿ ಋತುವಿನಲ್ಲಿಯೂ ಫೈನಲ್ ಪ್ರವೇಶಿಸುವ ಕರ್ನಾಟಕದ ಕನಸು ಕಮರಿತು. ಮತ್ತೊಮ್ಮೆ ಸೌರಾಷ್ಟ್ರ ಮತ್ತು ನಾಕೌಟ್ ತಂಡದ ಸವಾಲು ಜಯಿಸುವಲ್ಲಿ ವಿಫಲವಾಯಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾದ ನಾಲ್ಕರ ಘಟ್ಟದ ಪಂದ್ಯದಲ್ಲಿ ಸೌರಾಷ್ಟ್ರಕ್ಕೆ 115 ರನ್‌ಗಳ ಸಾಧಾರಣ ಗುರಿ ನೀಡಿದ ಕರ್ನಾಟಕ ದಿಟ್ಟ ಹೋರಾಟ ನಡೆಸಿತು. ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (38ಕ್ಕೆ3) ಹಾಗೂ ಮಧ್ಯಮವೇಗಿ ವಾಸುಕಿ ಕೌಶಿಕ್ (32ಕ್ಕೆ3) ಅವರ ಸವಾಲು ಮೀರಿ ನಿಂತ ಸೌರಾಷ್ಟ್ರವು 4 ವಿಕೆಟ್‌ಗಳಿಂದ ಗೆದ್ದಿತು. 34.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 117 ರನ್ ಗಳಿಸಿ ವಿಜಯೋತ್ಸವ ಆಚರಿಸಿತು. ನಾಯಕ ಅರ್ಪಿತ್ ವಾಸವಡ ಸೌರಾಷ್ಟ್ರವು ಫೈನಲ್ ಪ್ರವೇಶಿಸಲು ಕಾರಣರಾದರು.

ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುತ್ತಿರುವುದು ಇದು ಐದನೇ ಸಲ. ಬಂಗಾಳದ ಎದುರು ಪ್ರಶಸ್ತಿಗಾಗಿ ಸೆಣಸಲಿದೆ. ಸೌರಾಷ್ಟ್ರವು ಈ ಹಿಂದೆ ಮೂರು ಸಲ ರನ್ನರ್ ಅಪ್ ಹಾಗೂ ಒಮ್ಮೆ ಚಾಂಪಿಯನ್ ಆಗಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ನಿಕಿನ್ ಜೋಸ್ (109; 161ಎ, 4X9) ಬಲದಿಂದ ಕರ್ನಾಟಕವು 58.2 ಓವರ್‌ಗಳಲ್ಲಿ 234 ರನ್‌ ಗಳಿಸಿತು. ಆದರೆ ಸೌರಾಷ್ಟ್ರಕ್ಕೆ 175ರಿಂದ 200ರವರೆಗೂ ಗುರಿ ನೀಡಿ, ಆಲೌಟ್ ಮಾಡುವ ಆತಿಥೇಯರ ಯೋಜನೆ ಕೈಗೂಡಲಿಲ್ಲ. ಆದರೂ ಸುಲಭವಾಗಿ ಶರಣಾಗಲಿಲ್ಲ.

ಪಿಚ್‌ನಲ್ಲಿ ಚೆಂಡನ್ನು ಬುಗುರಿಯಂತೆ ತಿರುಗಿಸಿದ ಆಫ್‌ಸ್ಪಿನ್ನರ್ ಗೌತಮ್, ಬ್ಯಾಟರ್‌ಗಳಿಗೆ ನಡುಕ ಮೂಡಿಸಿದರು. ಇನ್ನೊಂದು ಬದಿಯಿಂದ ಕೌಶಿಕ್ ಕೂಡ ಲೈನ್ ಮತ್ತು ಲೆಂಗ್ತ್‌ ಕಾಪಾಡಿಕೊಂಡು ಹಾಕಿದ ಸ್ಲೋವರ್, ಕಟರ್‌ಗಳಿಗೆ ವಿಕೆಟ್‌ಗಳು ಉದುರಿದವು. ಇದರಿಂದಾಗಿ ಸೌರಾಷ್ಟ್ರವು 42 ರನ್‌ಗಳಿಗೇ ಐದು ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು.

ಪ್ರವಾಸಿ ತಂಡವು ‘ಬಿರುಸಿನ ಹೊಡೆತಗಾರ’ ಚೇತನ್‌ ಸಕಾರಿಯಾಗೆ ಕ್ರಮಾಂಕದಲ್ಲಿ ಬಡ್ತಿ ಕೊಟ್ಟು ಕ್ರೀಸ್‌ಗೆ ಕಳಿಸಿದ್ದು ಫಲ ನೀಡಿತು. ಅವರು ಗಳಿಸಿದ ಒಟ್ಟು ಮೂರು ಸಿಕ್ಸರ್‌ಗಳು ಪಂದ್ಯದ ದಿಕ್ಕನ್ನು ಬದಲಿಸಿದವು. ಇನ್ನೊಂದು ಬದಿಯಲ್ಲಿ ಬೌಂಡರಿ ಹೊಡೆದು ಖಾತೆ ತೆರೆದ ನಾಯಕ ಅರ್ಪಿತ್ ಅವರು ಸಕಾರಿಯಾ ಜೊತೆಗೆ ಆರನೇ ವಿಕೆಟ್‌ಗೆ 63 ರನ್‌ ಸೇರಿಸಿದರು.

ಈ ಜೊತೆಯಾಟ ಬೆಳೆಯಲು ಕರ್ನಾಟಕ ತಂಡದ ಫೀಲ್ಡರ್‌ಗಳು ಮೂರು ಕ್ಯಾಚ್‌ಗಳನ್ನು ಮಣ್ಣುಪಾಲು ಮಾಡಿದ್ದು ಕಾರಣವಾಯಿತು. ಅನುಭವಿಗಳಾದ ಪಾಂಡೆ, ಸಮರ್ಥ್ ಹಾಗೂ ನಿಕಿನ್ ಕೈಗಳಿಂದ ಕ್ಯಾಚ್‌ ಕೈಜಾರಿದವು. ಮೊದಲ ಇನಿಂಗ್ಸ್‌ನಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ್ದ ಆತಿಥೇಯ ಬಳಗವು 120 ರನ್‌ಗಳ ಹಿನ್ನಡೆ ಅನುಭವಿಸಿತ್ತು.

21ನೇ ಓವರ್‌ ಬೌಲಿಂಗ್ ಮಾಡಿದ ವೈಶಾಖ ವಿಜಯಕುಮಾರ್ ಅವರ ಲೈನ್‌ ಮತ್ತು ಲೆಂಗ್ತ್ ತಪ್ಪಿದ ಮೂರು ಎಸೆತಗಳನ್ನು ಅರ್ಪಿತ್ ಬೌಂಡರಿಗೆರೆ ದಾಟಿಸಿದರು. ಒಳ್ಳೆಯ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಿದ ಈ ಜೋಡಿ ಇನಿಂಗ್ಸ್‌ಗೆ ಬಲ ತುಂಬಿತು. ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕೂಡ ಒಂದೇ ಓವರ್‌ನಲ್ಲಿ ಎರಡು ಬೌಂಡರಿ ಕೊಟ್ಟರು. ಇನ್ನೊಂದೆಡೆ ಗೌತಮ್, ಕೌಶಿಕ್ ಹಾಗೂ ವಿದ್ವತ್ ರನ್‌ ನಿಯಂತ್ರಿಸಲು ಪ್ರಯತ್ನಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ 133 ಓವರ್‌ಗಳಲ್ಲಿ 407. ಸೌರಾಷ್ಟ್ರ: 174.4 ಓವರ್‌ಗಳಲ್ಲಿ 527. ಎರಡನೇ ಇನಿಂಗ್ಸ್: ಕರ್ನಾಟಕ: 58.2 ಓವರ್‌ಗಳಲ್ಲಿ 234 (ನಿಕಿನ್ ಜೋಸ್ 109, ಕೃಷ್ಣಪ್ಪ ಗೌತಮ್ 23, ವೈಶಾಖ ವಿಜಯಕುಮಾರ್ 20, ಚೇತನ್ ಸಕಾರಿಯಾ 45ಕ್ಕೆ4, ಧರ್ಮೇಂದ್ರಸಿಂಹ ಜಡೇಜ 79ಕ್ಕೆ4, ಪಾರ್ಥ್ ಭುತ್ 57ಕ್ಕೆ2) ಸೌರಾಷ್ಟ್ರ: 34.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 117 (ಅರ್ಪಿತ್ ವಾಸವಡ ಅಜೇಯ 47, ಚೇತನ್ ಸಕಾರಿಯಾ 24,ಕೆ. ಗೌತಮ್ 38ಕ್ಕೆ3, ವಾಸುಕಿ ಕೌಶಿಕ್ 32ಕ್ಕೆ3) ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ ನಾಲ್ಕು ವಿಕೆಟ್‌ಗಳ ಜಯ ಹಾಗೂ ಫೈನಲ್‌ಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT