ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಜೆರ್ಸಿ ಹೆಸರು ಬದಲಿಸಿಕೊಂಡ ಕೊಹ್ಲಿ-ಎಬಿಡಿ

ಐಪಿಎಲ್–2020
Last Updated 21 ಸೆಪ್ಟೆಂಬರ್ 2020, 12:39 IST
ಅಕ್ಷರ ಗಾತ್ರ

ದುಬೈ:ಕೊರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಸಲುವಾಗಿರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ಅವರು ತಮ್ಮ ಹೆಸರಿನ ಬದಲು ಕೊರೊನಾ ವಾರಿಯರ್ಸ್‌ ಹೆಸರುಗಳ ಹೆಸರಿರುವ ಜೆರ್ಸಿಗಳನ್ನು ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಕೋಹ್ಲಿ, ವಿಲಿಯರ್ಸ್‌ ಜೊತೆಗೆ ಆರ್‌ಸಿಬಿಯ ಇನ್ನೂ ಕೆಲವುಆಟಗಾರರು ಸಾಮಾಜಿಕ ತಾಣಗಳಲ್ಲಿನ ತಮ್ಮ ಖಾತೆಗಳ ಹೆಸರು ಮತ್ತು ಪ್ರೊಫೈಲ್‌ ಚಿತ್ರಗಳನ್ನು ಬದಲಿಸಿಕೊಂಡಿದ್ದಾರೆ. ಕೊಹ್ಲಿ ತಮ್ಮ ಟ್ವಿಟರ್‌ ಖಾತೆಯನ್ನು ‘ಸಿಮ್ರನ್‌ಜಿತ್‌ ಸಿಂಗ್’‌ ಎಂದು ಮತ್ತು ವಿಲಿಯರ್ಸ್‌ ‘ಪಾರಿತೋಷ್‌ ಪಂತ್‌’ ಎಂದು ಬದಲಿಸಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ‘ಪ್ರಾಜೆಕ್ಟ್‌ ಫೀಡಿಂಗ್‌ ಫ್ರಂ ಫಾರ್‌’ ಆರಂಭಿಸಿದ ಪಾರಿತೋಷ್‌ ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಚಾಲೆಂಜರ್ ಮನೋಭಾವವನ್ನು ಪ್ರಶಂಸಿಸುವ ಸಲುವಾಗಿ ಬೆನ್ನಿನ ಮೇಲೆ ಅವರ ಹೆಸರಿರುವ ಜೆರ್ಸಿಯನ್ನು ಧರಿಸಿಈ ಆವೃತ್ತಿಯಲ್ಲಿ ಆಡುತ್ತೇನೆ’ ಎಂದು ಡಿವಿಲಿಯರ್ಸ್‌ ಬರೆದುಕೊಂಡಿದ್ದಾರೆ.

‘ಸಿಮ್ರನ್‌ಜಿತ್‌ ಸಿಂಗ್‌ ಅವರು ಶ್ರವಣದೋಷಿ. ಆದರೆ, ಸಾಂಕ್ರಾಮಿಕ ಸಂದರ್ಭದಲ್ಲಿ ಇತರರಿಗೆ ನೆರವಾದ ಸಿಂಗ್‌ ಅವರನ್ನು ತಡೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ನೆರವಾಗಲು ಅವರು ದೇಣಿಗೆ ಸಂಗ್ರಹಿಸಿದ್ದರು. ಇದನ್ನು ಸಾಕಷ್ಟು ಶ್ರವಣ ದೋಷಿಗಳು ಒಪ್ಪಿ ನೆರವು ನೀಡಿದ್ದರು. ಈ ವ್ಯಕ್ತಿಗಳು ಯಾವುದೇ ಸಂಘಟನೆಗೆ ಸೇರಿದವರಲ್ಲ. ನಿಸ್ವಾರ್ಥವಾಗಿ ದೇಣಿಗೆ ನೀಡಿದ್ದಾರೆ. ಜನರಿಗೆ ನೆರವಾಗಲು ಸಿಂಗ್‌ ತಮ್ಮ ಸ್ನೇಹಿತರೊಡಗೂಡಿ ಸುಮಾರು ₹ 98 ಸಾವಿರವನ್ನು ಸಂಗ್ರಹಿಸಿದ್ದರು’ ಎಂದು ಆರ್‌ಸಿಬಿ ತಿಳಿಸಿದೆ.

ಕೊರೊನಾವೈರಸ್‌ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ನೆರವಾಗುತ್ತಿರುವವರನ್ನು ಗೌರವಿಸುವುದು ಆರ್‌ಸಿಬಿ ಅಭಿಯಾನದ ಭಾಗವಾಗಿದೆ. ಈ ಋತುವಿನುದ್ದಕ್ಕೂ ತಮ್ಮ ಆಟಗಾರರ ಜೆರ್ಸಿಗಳ ಮೇಲೆ ‘My Covid Heroes’ ಎಂಬ ಸಾಲುಗಳು ಇರಲಿವೆ ಎಂದು ಈ ಮೊದಲು ಆರ್‌ಸಿಬಿ ಹೇಳಿತ್ತು.

ಜೊತೆಗೆ ಆರ್ಸಿಬಿಯು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌)‌ ವಿರುದ್ಧದ ತನ್ನ ಆರಂಭಿಕ ಪಂದ್ಯಕ್ಕಾಗಿ ಆಟಗಾರರಿಗೆ ವಿಶೇಷ ಜೆರ್ಸಿಗಳನ್ನು ನೀಡಲು ಸಿದ್ಧತೆ ನಡೆಸಿದೆ. ಈ ಪಂದ್ಯದಲ್ಲಿ ಆಟಗಾರರು ಧರಿಸುವ ಜೆರ್ಸಿಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣದ ಮೂಲಕ ಗೀವ್‌ಇಂಡಿಯಾ ಫೌಂಡೇಷನ್‌ಗೆ ನೆರವಾಗುವ ಯೊಜನೆಯಲ್ಲಿದೆ.

ಆರ್‌ಸಿಬಿ ಮತ್ತು ಎಸ್‌ಆರ್‌ಎಚ್‌ ಪಂದ್ಯ ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30ಕ್ಕೆ ನಡೆಯಲಿದೆ.

ಕೊಹ್ಲಿ ನೇತೃತ್ವದ ಆರ್‌ಸಿಬಿಗೆ 2016ರಿಂದ ಈಚಗೆ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಜಯ ಗಳಿಸಲು ಸಾಧ್ಯವಾಗಿಲ್ಲ. ಕಳೆದ ಋತುವಿನಲ್ಲಿ ಕೊನೆಯ ಸ್ಥಾನಿಯಾಗಿದ್ದ ಆರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT