ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ: ವಿಶೇಷ ಪೋಸ್ಟ್ ಹಂಚಿಕೊಂಡ ಕೊಹ್ಲಿ

Published 18 ಆಗಸ್ಟ್ 2023, 12:45 IST
Last Updated 18 ಆಗಸ್ಟ್ 2023, 12:45 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದ 'ಸೂಪರ್‌ಸ್ಟಾರ್‌' ವಿರಾಟ್‌ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು ಇಂದಿಗೆ (ಆಗಸ್ಟ್‌ 18) ಬರೋಬ್ಬರಿ 15 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಹಂಚಿಕೊಂಡಿರುವ ಅವರು, 'ಸದಾ ಕೃತಜ್ಞನಾಗಿರುವೆ' ಎಂದು ಬರೆದುಕೊಂಡಿದ್ದಾರೆ.

ವಿರಾಟ್‌, 2008ರ ಆಗಸ್ಟ್‌ 18ರಂದು ಭಾರತ ತಂಡದ ಪರ ತಮ್ಮ ಮೊದಲ ಏಕದಿನ ಪಂದ್ಯ ಆಡಿದ್ದರು. ಶ್ರೀಲಂಕಾ ತಂಡದ ವಿರುದ್ಧದ ಆ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 12 ರನ್‌. ಆದರೆ ಆ ನಂತರ ಕೊಹ್ಲಿ ಬೆಳೆದ ರೀತಿ ಅಮೋಘವಾದದ್ದು. ಕ್ರಿಕೆಟ್‌ನ ಮೂರೂ ಮಾದರಿಯಲ್ಲೂ ಯಶಸ್ಸು ಕಂಡಿರುವ ಅವರು, ಟೀಂ ಇಂಡಿಯಾ ಪಾಲಿಗೆ 'ರನ್‌ ಯಂತ್ರ' ಎನಿಸಿದ್ದಾರೆ.

ಭಾರತದ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಕೊಹ್ಲಿಯೇ ಪರಿಹಾರ: ರವಿಶಾಸ್ತ್ರಿ

ಭಾರತ ತಂಡದ ಪರ ಇದುವರೆಗೆ (ಮೂರೂ ಮಾದರಿಯಲ್ಲಿ) 501 ಪಂದ್ಯಗಳ 559 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ 25,582 ರನ್‌ ಗಳಿಸಿದ್ದಾರೆ. ಇದರೊಂದಿಗೆ ಸಾರ್ವಕಾಲಿಕ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಭಾರತದವರೇ ಆದ ಸಚಿನ್‌ ತೆಂಡೂಲ್ಕರ್‌ (34,357), ಶ್ರೀಲಂಕಾದ ಕುಮಾರ ಸಂಗಕ್ಕಾರ (28,016), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (27,483) ಮತ್ತು ಶ್ರೀಲಂಕಾದ ಮಹೇಲ ಜಯವರ್ಧನೆ (25,957) ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ.

ಅಷ್ಟೇ ಅಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್‌ (100) ಬಳಿಕ ಅತಿಹೆಚ್ಚು ಶತಕ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಕೊಹ್ಲಿ ಬ್ಯಾಟ್‌ನಿಂದ ಇದುವರೆಗೆ 76 ಅಂತರರಾಷ್ಟ್ರೀಯ ಶತಕಗಳು ಸಿಡಿದಿವೆ. ಸಕ್ರಿಯ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ಆಟಗಾರನಿಗೂ ಕೊಹ್ಲಿಗೂ ಬರೋಬ್ಬರಿ 31 ಶತಕಗಳ ಅಂತರವಿದೆ.

ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಮತ್ತು ಇಂಗ್ಲೆಂಡ್‌ನ ಜೋ ರೂಟ್‌ ಎರಡನೇ ಸ್ಥಾನದಲ್ಲಿದ್ದು, ತಲಾ 45 ಶತಕ ಗಳಿಸಿದ್ದಾರೆ. ಇದಕ್ಕಿಂತ ಹೆಚ್ಚು ಶತಕಗಳನ್ನು ಕೊಹ್ಲಿ ಕೇವಲ ಏಕದಿನ ಮಾದರಿಯಲ್ಲೇ ಸಿಡಿಸಿದ್ದಾರೆ.

ಕೊಹ್ಲಿಯ ಸಾಧನೆ
ಏಕದಿನ ಕ್ರಿಕೆಟ್‌ನಲ್ಲಿ 275 ಪಂದ್ಯಗಳಲ್ಲಿ ಭಾರತ ಪರ ಕಣಕ್ಕಿಳಿದಿರುವ ಅವರು 265 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿ 12,898 ರನ್‌ ಕಲೆಹಾಕಿದ್ದಾರೆ. ಅವರ ಬ್ಯಾಟ್‌ನಿಂದ 46 ಶತಕಗಳು ಸಿಡಿದಿವೆ. 183 ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಆಡುವರೇ ಕೊಹ್ಲಿ?: ಸಂಜಯ್ ಬಂಗಾರ್ ಹೇಳಿದ್ದೇನು?

111 ಟೆಸ್ಟ್‌ ಆಡಿರುವ ಕೊಹ್ಲಿ, 187 ಇನಿಂಗ್ಸ್‌ಗಳಲ್ಲಿ 8,676 ರನ್ ಗಳಿಸಿದ್ದಾರೆ. ಅವರ 7 ದ್ವಿಶತಕ ಮತ್ತು ತಲಾ 29 ಶತಕ, ಅರ್ಧಶತಕ ಅವರ ಬ್ಯಾಟ್‌ನಿಂದ ಬಂದಿವೆ. 254 ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ.

ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯ ಕೊಹ್ಲಿಯದ್ದು. ಈ ಮಾದರಿಯಲ್ಲಿ 115 ಪಂದ್ಯಗಳ 107 ಇನಿಂಗ್ಸ್‌ಗಳಲ್ಲಿ ಆಡಿರುವ ಅವರು 4,008 ರನ್ ಗಳಿಸಿದ್ದಾರೆ. 1 ಶತಕ ಮತ್ತು 37 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.

ರಾಯಲ್‌ ಚಾಲೆಂಜ್‌ ಬೆಂಗಳೂರು ತಂಡದ ಪರ ಐಪಿಎಲ್‌ನಲ್ಲೂ ಅಬ್ಬರಿಸಿರುವ ಕೊಹ್ಲಿ, ಈ ಲೀಗ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿದ್ದಾರೆ. ಅವರು 237 ಪಂದ್ಯಗಳ 229 ಇನಿಂಗ್ಸ್‌ಗಳಿಂದ 7,263 ರನ್‌ ಗಳಿಸಿದ್ದಾರೆ. 7 ಶತಕ ಮತ್ತು 50 ಅರ್ಧಶತಕಗಳನ್ನು ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT