ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲು–ಬೆಳಕಿನ ಟೆಸ್ಟ್‌: ವಿರಾಟ್ ಆಟಕ್ಕೆ ಕಂಟಕವಾದ ರನ್‌ಔಟ್

ಅಜಿಂಕ್ಯ ರಹಾನೆ–ಕೊಹ್ಲಿ 4ನೇ ವಿಕೆಟ್‌ಗೆ 88 ರನ್‌ ಜೊತೆಯಾಟ
Last Updated 17 ಡಿಸೆಂಬರ್ 2020, 18:57 IST
ಅಕ್ಷರ ಗಾತ್ರ

ಅಡಿಲೇಡ್: ನಾಯಕ ವಿರಾಟ್ ಕೊಹ್ಲಿ 2020ರಲ್ಲಿ ತಮ್ಮ ಮೊದಲ ಶತಕ ದಾಖಲಿಸುತ್ತಾರೆಂಬ ನಿರೀಕ್ಷೆ ಮತ್ತೊಮ್ಮೆ ಈಡೇರಲಿಲ್ಲ.

ಗುರುವಾರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ ಆಸ್ಟ್ರೇಲಿಯಾ ಎದುರಿನ ಹೊನಲು–ಬೆಳಕಿನ ಟೆಸ್ಟ್‌ನಲ್ಲಿ ವಿರಾಟ್ ತಾಳ್ಮೆಯ ಆಟ ಮತ್ತು ಆತ್ಮವಿಶ್ವಾಸಭರಿತ ಬ್ಯಾಟಿಂಗ್ ನೋಡಿದವರೆಲ್ಲರಿಗೂ ಶತಕದ ವಿಶ್ವಾಸ ಮೂಡಿತ್ತು. ಆದರೆ 74 ರನ್ ಗಳಿಸಿದ್ದ ಅವರು ಅಜಿಂಕ್ಯ ರಹಾನೆ ’ಲೋಪ‘ದಿಂದ ರನ್‌ಔಟ್ ಆದಾಗ ನಿರೀಕ್ಷೆ ಕಳಚಿಬಿತ್ತು. ಅದರೊಂದಿಗೆ ಚೆಂದದ ಜೊತೆಯಾಟವೂ ಮುರಿದು ಬಿತ್ತು. ವಿರಾಟ್ 2019ರಲ್ಲಿ ಕೋಲ್ಕ ತ್ತದಲ್ಲಿ ಬಾಂಗ್ಲಾ ಎದುರಿನ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದು ಕೊನೆಯದು.

ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಆಡುತ್ತಿರುವ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೆಟ್ಟ ಆರಂಭದಿಂದ ಕುಸಿದಿದ್ದ ತಂಡಕ್ಕೆ ವಿರಾಟ್ (74; 180ಎಸೆತ) ಮತ್ತು ಅಜಿಂಕ್ಯ ರಹಾನೆ (42; 92ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 88 ರನ್ ಸೇರಿಸಿ ಆಸರೆಯಾದರು. ಇದರಿಂದಾಗಿ ತಂಡವು ದಿನದಾಟದ ಕೊನೆಗೆ 89 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 233 ರನ್ ಸೇರಿಸಿತು. ವೃದ್ಧಿಮಾನ್ ಸಹಾ (ಬ್ಯಾಟಿಂಗ್ 9) ಮತ್ತು ಆರ್. ಅಶ್ವಿನ್ (ಬ್ಯಾಟಿಂಗ್ 15) ಕ್ರೀಸ್‌ನಲ್ಲಿದ್ದಾರೆ.

77ನೇ ಓವರ್‌ನಲ್ಲಿ ವಿರಾಟ್ ರನೌಟ್ ಆಗದಿದ್ದರೆ ತಂಡದ ಖಾತೆಗೆ ಮತ್ತಷ್ಟು ರನ್‌ಗಳು ಸೇರುವ ಸಾಧ್ಯತೆ ಇತ್ತು. ಓವರ್‌ನ ಕೊನೆಯ ಎಸೆತವನ್ನು ಡ್ರೈವ್ ಮಾಡಿದ ಅಜಿಂಕ್ಯ ರಹಾನೆ ಒಂದು ರನ್‌ ಓಡಲು ಕರೆಕೊಟ್ಟರು. ವಿರಾಟ್ ಬಹುತೇಕ ಅರ್ಧ ಪಿಚ್‌ವರೆಗೂ ಓಡಿದ್ದಾಗ, ಅಜಿಂಕ್ಯ ನಿರ್ಧಾರ ಬದಲಿಸಿ ಹಿಂದೆ ಸರಿದರು. ಫೀಲ್ಡರ್ ಹ್ಯಾಜಲ್‌ವುಡ್ ಮತ್ತು ನೇಥನ್ ಲಯನ್ ಈ ಅವಕಾಶವನ್ನು ಕೈಬಿಡಲಿಲ್ಲ.

ತಂಡವು 32 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್‌ಗೆ ಬಂದಿದ್ದ ವಿರಾಟ್ ಚೆಂಡಿನ ಲಯದೊಂದಿಗೆ ಹೊಂದಿಕೊಳ್ಳಲು ಬಹಳಷ್ಟು ಸಮಯ ತೆಗೆದುಕೊಂಡರು. ಕೊಹ್ಲಿ ಮತ್ತು ಪೂಜಾರ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 68 ರನ್ ಸೇರಿಸಿದರು. ತಮ್ಮ ಅರ್ಧಶತಕಕ್ಕೆ ಆರು ರನ್‌ಗಳಿಂದ ದೂರವಿದ್ದ ಪೂಜಾರ ಲಯನ್ ಬೌಲಿಂಗ್‌ನಲ್ಲಿ ಔಟಾದರು. ಆಗ ನಾಯಕನ ಜೊತೆಗೂಡಿದ ಉಪನಾಯಕ ರಹಾನೆ ತಾಳ್ಮೆಯಿಂದ ಆಡಿದರು. ವಿರಾಟ್ ತಾವಾಡಿದ 123ನೇ ಎಸೆತದಲ್ಲಿ ಅರ್ಧಶತಕದ ಗಡಿ ದಾಟಿದರು. ಅವರಿಗಿಂತಲೂ ಅಜಿಂಕ್ಯ ತುಸು ವೇಗವಾಗಿ ಆಡಿದರು. ಇನಿಂಗ್ಸ್‌ನ ಏಕೈಕ ಸಿಕ್ಸರ್‌ ಅನ್ನೂ ಅವರು ದಾಖಲಿಸಿದರು. ಈ ಜೊತೆಯಾಟ ಮುರಿಯಲು ಬೌಲರ್‌ಗಳು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದವು. ‌

ಆದರೆ ಅಜಿಂಕ್ಯ ಗೊಂದಲದಿಂದಾಗಿ ವಿರಾಟ್ ಔಟಾಗಿ ಅಸಮಾಧಾನದಿಂದ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. ಮೂರು ಓವರ್‌ಗಳ ನಂತರ ಹೊಸ ಚೆಂಡಿನ ವೇಗ ಗುರುತಿಸದ ಅಜಿಂಕ್ಯ ಎಲ್‌ಬಿಡಬ್ಲ್ಯು ಆದರು. ಕ್ರೀಸ್‌ಗೆ ಬಂದ ಹನುಮವಿಹಾರಿ ಕೂಡ ಹೆಚ್ಚು ಹೊತ್ತು ಆಡಲಿಲ್ಲ.

ಯುಡಿಆರ್‌ಎಸ್‌ನಲ್ಲಿ ಎಡವಿದ ಆತಿಥೇಯರು
ಅಂಪೈರ್ ಮರುಪರಿಶೀಲನಾ ತೀರ್ಪು (ಯುಡಿಆರ್‌ಎಸ್) ಪಡೆಯುವಲ್ಲಿ ಆಸ್ಟ್ರೇಲಿಯಾ ತಂಡವು ಎಡವಿತು. ಇದರಿಂದಾಗಿ ಭಾರತದ ವಿರಾಟ್ ಕೊಹ್ಲಿ 16 ರನ್ ಗಳಿಸಿದ್ದ ಸಂದರ್ಭದಲ್ಲಿ ಔಟಾಗುವುದರಿಂದ ಪಾರಾದರು

ನೇಥನ್ ಬೌಲಿಂಗ್‌ನಲ್ಲಿ ಅವರ ಕೈಗವಸಿನಂಚಿಗೆ ನವಿರಾಗಿ ಸವರಿಕೊಂಡು ಹೋಗಿದ್ದ ಚೆಂಡು ವಿಕೆಟ್‌ಕೀಪರ್ ಟಿಮ್ ಪೇನ್ ಕೈಸೇರಿತ್ತು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಮರುಪರಿಶೀಲನೆಗೆ ಮನವಿ ಸಲ್ಲಿಸುವ ಅವಕಾಶವನ್ನು ನಾಯಕ ಪೇನ್ ಬಳಸಿಕೊಳ್ಳಲಿಲ್ಲ. ಆದರೆ ನಂತರ ಟಿವಿಯಲ್ಲಿ ತೋರಿಸಿದ ರೀಪ್ಲೆಯಲ್ಲಿ ಮತ್ತು ಹಾಕ್‌ ಕೀ ಐನಲ್ಲಿ ಚೆಂಡು ಗ್ಲೌಸ್ ಸವರಿಹೋಗಿದ್ದು ಕಾಣಿಸಿತ್ತು.

ನಾಯಕನ ಕ್ಷಮೆ ಕೋರಿದ ಅಜಿಂಕ್ಯ
ತಮ್ಮ ತಪ್ಪು ನಿರ್ಧಾರದಿಂದಾಗಿ ರನ್‌ಔಟ್ ಆದ ವಿರಾಟ್‌ ಕೊಹ್ಲಿ ಅವರಲ್ಲಿ ಅಜಿಂಕ್ಯ ರಹಾನೆ ಕ್ಷಮೆ ಕೇಳಿದರು. ರನ್‌ಔಟ್ ಸಂಬಂಧಿಸಿದಂತೆ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಅಜಿಂಕ್ಯ ರಹಾನೆ ಅವರನ್ನು ಬಹಳಷ್ಟು ಕ್ರಿಕೆಟ್‌ ಅಭಿಮಾನಿಗಳು ಟೀಕಿಸಿದ್ದಾರೆ.77ನೇ ಓವರ್‌ನಲ್ಲಿ ರನ್‌ಔಟ್ ಆದ ವಿರಾಟ್ ಕೊಹ್ಲಿ ಅಸಮಾಧಾನದಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕುವಾಗಲೇ ಅಜಿಂಕ್ಯ ‘ಸಾರಿ’ ಎಂದಿದ್ದರು. ತಮ್ಮ ತಪ್ಪಿನ ಅರಿವಾಗಿ ಬೇಸರವನ್ನೂ ವ್ಯಕ್ತಪಡಿಸಿದ್ದರು.

ಅಡಿಲೇಡ್‌ನಲ್ಲಿ 500 ರನ್

ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಒಟ್ಟು 500 ರನ್‌ಗಳನ್ನು ಗಳಿಸಿದ ಸಾಧನೆ ಮಾಡಿದರು. ಅವರು ಇಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಶತಕಗಳು ಇವೆ.

ತಮ್ಮ ತವರು ನವದೆಹಲಿಯಲ್ಲಿ ವಿರಾಟ್ ಮೂರು ಪಂದ್ಯಗಳಿಂದ 467 ರನ್‌ಗಳನ್ನು ಗಳಿಸಿದ್ದಾರೆ.

ಭಾರತ: ಮೊದಲ ಇನಿಂಗ್ಸ್- 6ಕ್ಕೆ 233 (89 ಓವರ್‌ಗಳಲ್ಲಿ)

ಪೃಥ್ವಿ ಶಾ ಬಿ ಮಿಚೆಲ್ ಸ್ಟಾರ್ಕ್ 00

ಮಯಂಕ್ ಅಗರವಾಲ್ ಬಿ ಪ್ಯಾಟ್ ಕಮಿನ್ಸ್ 17

ಚೇತೇಶ್ವರ್ ಪೂಜಾರ ಸಿ ಮಾರ್ನಸ್ ಲಾಬುಷೇನ್ ಬಿ ನೇಥನ್ ಲಯನ್ 43

ವಿರಾಟ್ ಕೊಹ್ಲಿ ರನ್‌ಔಟ್ (ಹ್ಯಾಜಲ್‌ವುಡ್/ಲಯನ್) 74

ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಮಿಚೆಲ್ ಸ್ಟಾರ್ಕ್ 42

ಹನುಮವಿಹಾರಿ ಎಲ್‌ಬಿಡಬ್ಲ್ಯು ಬಿ ಹ್ಯಾಜಲ್‌ವುಡ್ 16

ವೃದ್ಧಿಮಾನ್ ಸಹಾ ಔಟಾಗದೆ 09

ಆರ್. ಅಶ್ವಿನ್ ಔಟಾಗದೆ 15

ಇತರೆ: 17 (ಬೈ 2, ಲೆಗ್‌ಬೈ 7, ನೋಬಾಲ್ 7, ವೈಡ್ 1)

ವಿಕೆಟ್ ಪತನ: 1–0 (ಶಾ; 0.2), 2–32 (ಮಯಂಕ್; 18.1), 3–100 (ಪೂಜಾರ; 49.4), 4–188(ಕೊಹ್ಲಿ; 76.6), 5–196 (ರಹಾನೆ; 80.4), 6–206 (ಹನುಮವಿಹಾರಿ; 83.2)

ಬೌಲಿಂಗ್

ಮಿಚೆಲ್ ಸ್ಟಾರ್ಕ್ 19–4–49–2, ಜೋಷ್ ಹ್ಯಾಜಲ್‌ವುಡ್ 20–6–47–1, ಪ್ಯಾಟ್ ಕಮಿನ್ಸ್ 19–7–42–1, ಕ್ಯಾಮರೂನ್ ಗ್ರೀನ್ 9–2–15–0, ನೇಥನ್ ಲಯನ್ 21–2–68–1, ಮಾರ್ನಸ್ ಲಾಬುಷೇನ್ 1–0–3–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT