ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ | ಗೆಲುವಿಗೆ 347 ರನ್ ಸಾಕಾಗುತ್ತದೆ ಎಂದುಕೊಂಡಿದ್ದೆ: ವಿರಾಟ್ ಕೊಹ್ಲಿ

Last Updated 5 ಫೆಬ್ರುವರಿ 2020, 12:36 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್:ಭಾರತ ನೀಡಿದ್ದ ಬೃಹತ್‌ ಗುರಿ ಎದುರು ದಿಟ್ಟ ಆಟವಾಡಿದ ನ್ಯೂಜಿಲೆಂಡ್‌ ತಂಡ ಇನ್ನೂ 11 ಎಸೆತಗಳನ್ನು ಬಾಕಿ ಇರುವಂತೆಯೇ ಗೆದ್ದು ಬೀಗಿತು. ಪಂದ್ಯದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ,‘ಇದು ನ್ಯೂಜಿಲೆಂಡ್‌ ತಂಡದಿಂದ ಬಂದ ಅಮೋಘ ಪ್ರದರ್ಶನ. ನಾವು ನೀಡಿದ್ದ ಗುರಿ ಪಂದ್ಯ ಗೆಲ್ಲಲು ಸಾಕಾಗುತ್ತದೆ ಎಂದು ಭಾವಿಸಿದ್ದೆವು’ ಎಂದು ಹೇಳಿಕೊಂಡಿದ್ದಾರೆ.

‘ಆ (ಕಿವೀಸ್) ತಂಡದಲ್ಲಿರುವ ರಾಸ್‌ ಟೇಲರ್‌ ಅನುಭವಿ. ಆದರೆ, ಟಾಮ್‌ ಲಾಥಮ್‌ ಆಡಿದ ಇನಿಂಗ್ಸ್‌ ಪಂದ್ಯವನ್ನು ನಮ್ಮಿಂದ ದೂರ ಕೊಂಡೊಯ್ಯಿತು. ಟೇಲರ್‌ ಮತ್ತು ಟಾಮ್‌ ಇಬ್ಬರಿಗೂ ಜಯದ ಶ್ರೇಯ ಸಲ್ಲಬೇಕು’ ಎಂದು ಹೇಳಿದ್ದಾರೆ.

‘ನಾವು ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ, ಉತ್ತಮವಾಗಿ ಆಡಿದ್ದೇವೆ. ಕೆಲವೊಂದನ್ನು ನಾವು ಸುಧಾರಿಸಿಕೊಳ್ಳಬೇಕಿದೆ. ಈ ಸೋಲಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಎದುರಾಳಿಗಳು ಈ ದಿನ ನಮಗಿಂತ ಚೆನ್ನಾಗಿ ಆಡಿದರು. ಅವರು ಗೆಲುವಿಗೆ ಅರ್ಹರು’ ಎಂದಿದ್ದಾರೆ.

ಇಂದು ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ ಜಯ ಸಾಧಿಸಿತು.ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 347 ರನ್ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿವೀಸ್‌ ಪಡೆ 48.1ನೇ ಓವರ್‌ನಲ್ಲಿ ಗುರಿ ಮುಟ್ಟಿತು. ಭಾರತ ಪರ ಶ್ರೇಯಸ್‌ ಅಯ್ಯರ್‌ (103) ಹಾಗೂ ನ್ಯೂಜಿಲೆಂಡ್‌ ಪರ ರಾಸ್‌ ಟೇಲರ್‌ (107) ಶತಕ ಬಾರಿಸಿದರು.

ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್‌ನಲ್ಲಿ ಮತ್ತು ಮೂರನೇ ಪಂದ್ಯ ಮೌಂಟ್‌ ಮಾಂಗನೂಯಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT