ಸೋಮವಾರ, ಆಗಸ್ಟ್ 15, 2022
28 °C
ಇಂಗ್ಲೆಂಡ್‌ ತಂಡದ ಉಪ ನಾಯಕ ಬೆನ್‌ ಸ್ಟೋಕ್ಸ್‌ ಹೇಳಿಕೆ

ಏಕಾಂಗಿಯಾಗಿರುವ ಜೋಫ್ರಾ ಬೆನ್ನಿಗೆ ನಿಲ್ಲುತ್ತೇವೆ: ಬೆನ್‌ ಸ್ಟೋಕ್ಸ್‌ ಹೇಳಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್‌: ‘ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರು ಈಗ ಏಕಾಂಗಿಯಾಗಿದ್ದಾರೆ. ಈ ಹಂತದಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳುತ್ತೇವೆ’ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಉಪ ನಾಯಕ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.

25 ವರ್ಷ ವಯಸ್ಸಿನ ಜೋಫ್ರಾ ಅವರು ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಬ್ರೈಟನ್‌ನಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು. ಆ ಮೂಲಕ ಜೀವ ಸುರಕ್ಷಾ (ಬಯೊ ಸೆಕ್ಯುರ್‌) ವಾತಾವರಣ ನಿಯಮ ಉಲ್ಲಂಘಿಸಿದ್ದರು.

ಹೀಗಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ) ಜೋಫ್ರಾ ಅವರನ್ನು ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗಿಟ್ಟಿತ್ತು. ಜೊತೆಗೆ ಹೋಟೆಲ್‌ ಕೊಠಡಿಯೊಳಗೇ ಐದು ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿರಬೇಕು. ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ವರದಿಯ ಫಲಿತಾಂಶವು ‘ನೆಗೆಟಿವ್‌’ ಆಗಿದ್ದರೆ ಮಾತ್ರ ತಂಡದಲ್ಲಿ ಅವಕಾಶ ನೀಡುವುದಾಗಿಯೂ ಹೇಳಿತ್ತು.

‘ಈಗ ಜೋಫ್ರಾಗೆ ನಮ್ಮೆಲ್ಲರ ಅಗತ್ಯವಿದೆ. ತಮ್ಮದೇ ತಪ್ಪಿನಿಂದ ಅವರೀಗ ಎಲ್ಲರಿಂದ ಟೀಕೆ ಎದುರಿಸುತ್ತಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲಲೇಬೇಕು. ಐದು ದಿನಗಳ ಕಾಲ ಯಾರ ಸಂಪರ್ಕವೂ ಇಲ್ಲದೆ ಹೋಟೆಲ್‌ ಕೊಠಡಿಯಲ್ಲಿ ಇರುವುದು ತುಂಬಾ ಕಷ್ಟ. ಅವರಿಗೆ ಒಂಟಿತನ ಕಾಡಲು ನಾವ್ಯಾರೂ ಅವಕಾಶ ಕೊಡುವುದಿಲ್ಲ’ ಎಂದು ಸ್ಟೋಕ್ಸ್‌ ನುಡಿದಿದ್ದಾರೆ.

‘ಸಂತಸದ ಸಮಯದಲ್ಲಿ ಜೊತೆಗಿರುವುದು ಮುಖ್ಯವಲ್ಲ. ಒಬ್ಬ ವ್ಯಕ್ತಿ ಸಂಕಷ್ಟದಲ್ಲಿದ್ದಾಗ, ಆತನಿಗೆ ನಮ್ಮ ನೆರವಿನ ಅಗತ್ಯವಿದ್ದಾಗ ನಾವು ಹೇಗೆ ವರ್ತಿಸುತ್ತೇವೆ, ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ತುಂಬಾ ಮುಖ್ಯ’ ಎಂದಿದ್ದಾರೆ.

ಸ್ಟೋಕ್ಸ್‌ ಅವರು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ (176ರನ್‌) ದಾಖಲಿಸಿ ಮಿಂಚಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು