ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಬಂದಿಳಿದ ವೆಸ್ಟ್‌ ಇಂಡೀಸ್‌ ತಂಡ: ಬಯೋ ಸೆಕ್ಯೂರ್‌ನಲ್ಲಿ ಪಂದ್ಯ!

ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿರುವ ಹೋಲ್ಡರ್‌ ಪಡೆ
Last Updated 9 ಜೂನ್ 2020, 7:40 IST
ಅಕ್ಷರ ಗಾತ್ರ

ಸೇಂಟ್‌ ಜಾನ್‌, ಆ್ಯಂಟೀಗಾ: ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ವೆಸ್ಟ್‌ ಇಂಡೀಸ್‌ ತಂಡ ಸೋಮವಾರ ಇಲ್ಲಿಂದ ಇಂಗ್ಲೆಂಡ್‌ಗೆ ತೆರಳಿತು. ತಂಡದ ಎಲ್ಲ ಆಟಗಾರರನ್ನು ಕೋವಿಡ್‌–19 ತಪಾಸಣೆಗೆ ಒಳಪಡಿಸಲಾಗಿದ್ದು, ಸೋಂಕು ಇಲ್ಲದಿರುವುದು ದೃಢಪಟ್ಟಿದೆ.

ಸೋಮವಾರ ವೆಸ್ಟ್‌ ಇಂಡೀಸ್‌ನ ವಿವಿಧ ದ್ವೀಪಗಳಲ್ಲಿರುವ ಆಟಗಾರರು ಎರಡು ವಿಮಾನಗಳ ಮೂಲಕ ಆ್ಯಂಟೀಗಾ ತಲುಪಿದ್ದರು. ಮಂಗಳವಾರ ಬೆಳಿಗ್ಗೆ ತಂಡವು ಚಾರ್ಟರ್‌ ವಿಮಾನದ ಮೂಲಕ ಮ್ಯಾಂಚೆಸ್ಟರ್ ತಲುಪಿದೆ. ತಂಡದ ಎಲ್ಲ ಆಟಗಾರರು ಕ್ವಾರಂಟೈನ್‌ಗೆ ಒಳಪಡಲಿದ್ದು, ಮತ್ತೊಮ್ಮೆ ಕೋವಿಡ್‌–19 ಪರೀಕ್ಷೆಗೆ ಒಳಪಡಲಿದ್ದಾರೆ.

ಏಳು ವಾರಗಳ ಇಂಗ್ಲೆಂಡ್‌ನಲ್ಲಿರುವ ತಂಡವು, ಜೀವ ಸುರಕ್ಷಾ (ಬಯೋ ಸೆಕ್ಯೂರ್‌) ವಾತಾವರಣದಲ್ಲಿ ಪಂದ್ಯಗಳನ್ನು ಆಡಲಿದೆ.

ಮೀಸಲು ಆಟಗಾರರ ತಂಡವು ಇವರ ಜತೆ ಪ್ರಯಾಣ ಮತ್ತು ತರಬೇತಿ ನಡೆಸಲಿದ್ದು, ಸಿದ್ಧತೆ ನಡೆಸಲು ನೆರವಾಗಲಿದೆ. ಯಾರಾದರೂ ಗಾಯಾಳಾದಲ್ಲಿ ಈ ಆಟಗಾರರು ತಂಡ ಸೇರಲಿದ್ದಾರೆ.

ಪ್ರೇಕ್ಷಕರ ನಿರ್ಬಂಧವಿರುವ ಕಾರಣ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್‌ ಜುಲೈ 8ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಉಳಿದ ಎರಡೂ ಪಂದ್ಯಗಳು ಓಲ್ಡ್‌ ಟ್ರಾಫರ್ಡ್‌ನಲ್ಲಿ ಕ್ರಮವಾಗಿ ಜುಲೈ 16 ರಿಂದ 20 ಹಾಗೂ 24ರಿಂದ 28ರವರೆಗೆ ನಡೆಯಲಿವೆ.

ಈ ಸರಣಿ ಮೇ–ಜೂನ್‌ ಅವಧಿಯಲ್ಲಿ ನಿಗದಿಯಾಗಿತ್ತು. ಕೊರೊನಾ ಸೋಂಕು ಭೀತಿಯ ಕಾರಣ ಮುಂದೂಡಲಾಗಿತ್ತು.

‘ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳುತ್ತಿರುವುದು ಕೊರೊನಾ ನಂತರದ ಕ್ರೀಡೆ ಮತ್ತು ಕ್ರಿಕೆಟ್‌ ಪುನರಾರಂಭದ ದೃಷ್ಟಿಯಿಂದ ಮಹತ್ವದ ಹೆಜ್ಜೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡ: ಜೇಸನ್ ಹೋಲ್ಡರ್,ಜರ್ಮೇನ್‌ ಬ್ಲ್ಯಾಕ್‌ವುಡ್‌, ಕ್ರುಮಾ ಬೊನ್ನರ್‌, ಕ್ರೆಗ್ ಬ್ರಾಥ್‌ವೆಟ್, ಶ್ರಮ್ರಾ ಬ್ರೂಕ್ಸ್‌, ಜಾನ್‌ ಕ್ಯಾಂಪ್‌ಬೆಲ್‌, ರಾಸ್ಟನ್‌ ಚೇಸ್‌, ರಖೀಮ್‌ ಕಾರ್ನ್‌ವಾಲ್‌, ಶೇನ್‌ ಡೌರಿಚ್‌, ಕೇಮಾರ್‌ ಹೋಲ್ಡರ್‌, ಶಾಯಿ ಹೋಪ್‌, ಅಲ್ಜಾರಿ ಜೋಸೆಫ್‌, ರೇಮಂಡ್‌ ರೀಫರ್‌ ಮತ್ತು ಕೆಮರ್ ಕೆಮರ್ ರೋಚ್

ಮೀಸಲು ಆಟಗಾರರು: ಸುನಿಲ್ ಆ್ಯಂಬ್ರಿಸ್, ಜೋಶುವಾ ಡ ಸಿಲ್ವಾ, ಶಾನನ್ ಗ್ಯಾಬ್ರಿಯೆಲ್, ಕಿಯಾನ್ ಹಾರ್ಡಿಂಗ್‌, ಕೈಲ್ ಮೈಯರ್ಸ್‌, ಪ್ರೆಸ್ಟಾನ್ ಮೆಕ್‌ಸ್ವೀನ್‌, ಮಾರ್ಕಿನೊ ಮೈಂಡ್ಲಿ, ಶೇನ್ ಮೊಸಿಲಿ, ಆ್ಯಂಡರ್ಸನ್ ಫಿಲಿಪ್, ಒಶೇನ್ ಥಾಮಸ್, ಜೊಮೆಲ್ ವಾರಿಕನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT