ವಿಂಡೀಸ್‌: ಹೊಸ ಹಾದಿಯ ಹುಡುಕಾಟ

ಶನಿವಾರ, ಮಾರ್ಚ್ 23, 2019
24 °C

ವಿಂಡೀಸ್‌: ಹೊಸ ಹಾದಿಯ ಹುಡುಕಾಟ

Published:
Updated:
Prajavani

ಫೆಬ್ರುವರಿ 27. ಗ್ರೆನೆಡಾದ ಸೇಂಟ್‌ ಜಾರ್ಜ್ಸ್‌ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತುಂಬಿದ್ದ ಕ್ರೀಡಾ ಪ್ರೇಮಿಗಳ ಸಂಭ್ರಮ ಗಗನಕ್ಕೆ ಮುಟ್ಟಿತ್ತು. ಇಂಗ್ಲೆಂಡ್‌ ಬೌಲರ್‌ಗಳ ಎಸೆತಗಳನ್ನು ಎತ್ತಿ ಬೌಂಡರಿ ಸಿಕ್ಸರ್‌ಗಳಿಗೆ ಅಟ್ಟಿದ ಕ್ರಿಸ್‌ ಗೇಲ್‌ ಪ್ರೇಕ್ಷಕರನ್ನು ಕುಳಿತಲ್ಲೇ ಕುಣಿಸಿದ್ದರು.

ಇತ್ತೀಚೆಗೆ ವಿವಿಧ ಕಾರಣಗಳಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿರುವ ಕ್ರಿಸ್‌ ಗೇಲ್‌ ಸ್ಫೋಟಕ ಬ್ಯಾಟಿಂಗ್ ಮಾಡಿದರೆ ಖುಷಿಪಡದೇ ಇರಲು ಹೇಗೆ ಸಾಧ್ಯ...?

ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ 97 ಎಸೆತಗಳಲ್ಲಿ 162 ರನ್‌ ಗಳಿಸಿದ್ದ ಗೇಲ್‌ 14 ಸಿಕ್ಸರ್‌ ಮತ್ತು 11 ಬೌಂಡರಿ ಸಿಡಿಸಿದಾಗ ಕ್ರಿಕೆಟ್ ಪ್ರಿಯರು ಮಾತ್ರವಲ್ಲ, ವೆಸ್ಟ್ ಇಂಡೀಸ್ ಕ್ರಿಕೆಟ್ ಕೂಡ ಸಂಭ್ರಮಿಸಿತು. ಯಾಕೆಂದರೆ, ತಂಡದ ಮುಂದೆ ಮೇ 30ರಿಂದ ನಡೆಯಲಿರುವ ವಿಶ್ವಕಪ್‌ ಟೂರ್ನಿಯ ಸವಾಲು ಇದೆ.

ಕ್ರಿಸ್ ಗೇಲ್ ಅವರಂತೆಯೇ ವೆಸ್ಟ್ ಇಂಡೀಸ್ ಕೂಡ ತನ್ನ ನೈಜ ಸಾಮರ್ಥ್ಯವನ್ನು ಆಗೊಮ್ಮೆ ಈಗೊಮ್ಮೆ ಸಾಬೀತು ಮಾಡುತ್ತದೆ. ಈ ಏರಿಳಿತವೇ ತಂಡದ ಆಡಳಿತದ ಆತಂಕಕ್ಕೆ ಕಾರಣ.

19ನೇ ಶತಮಾನದ ಕೊನೆಯ ದಶಕದಲ್ಲೇ ವಿಶ್ವ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೆಸ್ಟ್ ಇಂಡೀಸ್‌ ತಂಡ ಕ್ರಿಕೆಟ್‌ ಇತಿಹಾಸದ ಆರಂಭಿಕ ದೈತ್ಯ ಶಕ್ತಿಗಳಲ್ಲಿ ಒಂದು.

ಮೊದಲ ಎರಡು ವಿಶ್ವಕಪ್‌ ಟೂರ್ನಿಗಳನ್ನು ಗೆದ್ದು ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ವೆಸ್ಟ್ ಇಂಡೀಸ್‌ ಮೂರನೇ ವಿಶ್ವಕಪ್‌ನಲ್ಲೂ ಪ್ರಶಸ್ತಿಯ ಸನಿಹ ತಲುಪಿತ್ತು. ಆದರೆ ಅಂದು ಭಾರತದ ಕಪಿಲ್‌ದೇವ್‌ ಪಡೆ ಕೆರಿಬಿಯನ್ ನಾಡಿನವರ ಕನಸನ್ನು ನುಚ್ಚುನೂರು ಮಾಡಿತ್ತು. ಅಲ್ಲಿಂದ ಇಲ್ಲಿಯ ವರೆಗೆ ವೆಸ್ಟ್ ಇಂಡೀಸ್ ತಂಡದ ಹಾದಿಯಲ್ಲಿ ಹೂಗಳೂ ಅರಳಿವೆ; ಕಲ್ಲು–ಮುಳ್ಳುಗಳೂ ಅಡ್ಡಬಂದಿವೆ.

ಟೆಸ್ಟ್‌ಗೆ ಪದಾರ್ಪಣೆ ಮಾಡಿ 45 ವರ್ಷಗಳ ನಂತರ ವೆಸ್ಟ್ ಇಂಡೀಸ್‌ ಮೊದಲ ಏಕದಿನ ಪಂದ್ಯ ಆಡಿದ್ದು. ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿ ಖುಷಿಪಟ್ಟಿರುವ ತಂಡ ಒಂಬತ್ತನೇ ಸ್ಥಾನದ ಕಹಿಯನ್ನೂ ಅರಗಿಸಿಕೊಂಡಿದೆ. ಏಳು ಬಾರಿ 350ಕ್ಕೂ ಹೆಚ್ಚು (ಅತ್ಯಧಿಕ 48 ಓವರ್‌ಗಳಲ್ಲಿ 389) ರನ್ ದಾಖಲಿಸಿರುವ ತಂಡ 54 ರನ್‌ಗಳಿಗೆ ಆಲೌಟಾದ ಹೀನಾಯ ಸ್ಥಿತಿಯನ್ನೂ ಅನುಭವಿಸಿದೆ.

ವಿಶ್ವಕಪ್‌ನತ್ತ ನೋಟ

ಕೇತ್ ಬಾಯ್ಸ್‌, ಮಾರಿಸ್ ಫಾಸ್ಟರ್‌, ರಾಯ್ ಫೆಡೆರಿಕ್ಸ್ ಮುಂತಾದವರಿಂದ ಆರಂಭಗೊಂಡ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡಕ್ಕೆ ಕ್ಲೈವ್ ಲಾಯ್ಡ್‌, ಗ್ಯಾರಿ ಸೋಬರ್ಸ್‌, ವಿವಿಯನ್ ರಿಚರ್ಡ್ಸ್‌, ಗಾರ್ಡನ್ ಗ್ರೀನಿಜ್‌, ಮೈಕೆಲ್ ಹೋಲ್ಡಿಂಗ್‌, ಜೊಯೆಲ್‌ ಗಾರ್ನರ್‌, ಡೆರಿಕ್‌ ಮರೆ ಮುಂತಾದವರ ಪ್ರವೇಶ ಆದ ನಂತರ ಹೆಸರು ಬಂದಿತು. ನಂತರ ಕೆಲ ಕಾಲ ಸದ್ದಿಲ್ಲದೇ ಸಾಗಿದ ತಂಡ 90ರ ದಶಕದ ಕೊನೆಯಲ್ಲಿ ಡೇವಿಡ್ ವಿಲಿಯಮ್ಸ್‌, ಕರ್ಟ್ಲಿ ಆ್ಯಂಬ್ರೋಸ್‌, ಇಯಾನ್ ಬಿಷಪ್‌, ಬ್ರಯಾನ್ ಲಾರಾ ಮುಂತಾದವರಿಂದ ಹೆಸರು ಗಳಿಸಿತು. ಶಿವನಾರಾಯಣ್ ಚಂದ್ರಪಾಲ್‌ ಮತ್ತು ರಾಮ್‌ನರೇಶ್ ಸರವನ್‌ ‘ಯುಗ’ದ ನಂತರ ತಂಡ ಮತ್ತೊಮ್ಮೆ ಕುಸಿತದ ಹಾದಿ ಹಿಡಿಯಿತು.

ಆದರೆ ಹೊಸ ತಲೆಮಾರಿನ ಡ್ವೇನ್ ಸ್ಮಿತ್, ಡ್ವೇನ್ ಬ್ರಾವೊ, ದಿನೇಶ್ ರಾಮ್ದಿನ್‌, ಲೆಂಡ್ಲ್‌ ಸಿಮೋನ್ಸ್‌, ಕೀರನ್ ಪೊಲಾರ್ಡ್‌, ಡರೆನ್ ಬ್ರಾವೊ, ಆ್ಯಂಡ್ರೆ ರಸೆಲ್‌, ಜೇಸನ್ ಹೋಲ್ಡರ್‌ ಮೊದಲಾದವರು ಯಾವುದೇ ಕ್ಷಣದಲ್ಲಿ ಪುಟಿದೇಳಬಲ್ಲ ತಂಡ ಎಂಬ ಹೆಸರನ್ನು ತಂದುಕೊಟ್ಟರು. ಈ ನಡುವೆ ಕ್ರಿಸ್ ಗೇಲ್ ವಿಶ್ವ ಕ್ರಿಕೆಟ್‌ನ ಬಲಿಷ್ಠ ಬ್ಯಾಟಿಂಗ್ ಶಕ್ತಿಯಾಗಿ ಬೆಳೆದದ್ದು ಇತಿಹಾಸ.

ಇಂಥ ಸಾಮರ್ಥ್ಯ ಈಗ ವಿಶ್ವಕಪ್‌ ಮೇಲೆ ಕಣ್ಣಿಡಲು ತಂಡಕ್ಕೆ ಪ್ರೇರಣೆಯಾಗಿದೆ. ಆದರೆ ಜೇಸನ್ ಹೋಲ್ಡರ್ ಬಳಗದ ಹಾದಿ ಸುಗಮವಾಗಿಲ್ಲ. ತಂಡದಲ್ಲಿ ಹೋಲ್ಡರ್‌, ಗೇಲ್‌, ದೇವೇಂದ್ರ ಬಿಷೂ, ರಸೆಲ್ ಅವರನ್ನು ಬಿಟ್ಟರೆ ಹೊಸಬರೇ ಹೆಚ್ಚು ಇದ್ದಾರೆ.

2015ರ ವಿಶ್ವಕಪ್‌ ನಂತರ ತಂಡ ಮಹತ್ವದ ಸಾಧನೆಯನ್ನೇನೂ ಮಾಡಲಿಲ್ಲ. 2016ರಲ್ಲಿ ಆಡಿದ 14 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ತಂಡ ಗೆದ್ದಿದೆ. ಈ ಪೈಕಿ ತವರಿನ ಆಚೆ ಗೆದ್ದದ್ದು ಒಂದು ಪಂದ್ಯ ಮಾತ್ರ. ನಂತರದ ವರ್ಷ ತಂಡ 22 ಪಂದ್ಯಗಳನ್ನು ಆಡಿತ್ತು. ಗೆದ್ದದ್ದು ಮೂರು ಪಂದ್ಯ ಮಾತ್ರ. ಆಗಲೂ ತವರಿನಿಂದ ಹೊರಗೆ ಗೆದ್ದದ್ದು ಒಂದೇ ಪಂದ್ಯ.

ಕಳೆದ ವರ್ಷ ತಂಡ ಉತ್ತಮ ಸಾಧನೆ ಮಾಡಿದೆ. ಆಡಿದ 18 ಪಂದ್ಯಗಳ ಪೈಕಿ ಎಂಟರಲ್ಲಿ ಜಯ ಸಾಧಿಸಿದೆ. ಈ ಪೈಕಿ ಏಳು ಪಂದ್ಯಗಳನ್ನು ವಿದೇಶಿ ನೆಲದಲ್ಲಿ ಗೆದ್ದಿರುವುದು ವಿಶೇಷ. ಆದರೆ ಭಾರತದ ಎದುರಿನ ಜಯ ಬಿಟ್ಟರೆ ಉಳಿದೆಲ್ಲ ಗೆಲುವು ಕೂಡ ಯುಎಇ, ಐರ್ಲೆಂಡ್‌, ಪಪುವಾ ನ್ಯೂಗಿನಿ, ಬಾಂಗ್ಲಾದೇಶ ಮುಂತಾದ ತಂಡಗಳ ಎದುರಾಗಿತ್ತು!

ಈ ವರ್ಷ ವಿಶ್ವಕಪ್‌ಗೂ ಮೊದಲು ವೆಸ್ಟ್ ಇಂಡೀಸ್‌ ತವರಿನಲ್ಲಿ ಇಂಗ್ಲೆಂಡ್ ಎದುರು ಐದು ಪಂದ್ಯಗಳ ಸರಣಿಯನ್ನು ಆಡಿದೆ. ಒಂದು ಪಂದ್ಯ ರದ್ದಾಗಿದ್ದು ಎರಡು ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿವೆ. ಈ ಸರಣಿಯ ಅನುಭವ ವಿಶ್ವಕಪ್‌ಗೆ ಸಾಕೇ ಎಂಬ ಪ್ರಶ್ನೆಗೆ ಮೇ–ಜೂನ್‌ ತಿಂಗಳಲ್ಲಿ ಉತ್ತರ ಸಿಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !