ಶನಿವಾರ, ಜುಲೈ 24, 2021
21 °C

ವೆಸ್ಟ್ ಇಂಡೀಸ್‌ಗೆ ಸರಣಿ ಗೆಲುವಿನ ತವಕ; ಇಂಗ್ಲೆಂಡ್‌ಗೆ ರೂಟ್ ಮರಳಿದ ಪುಳಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಸೌತಾಂಪ್ಟನ್‌ನಲ್ಲಿ ನಡೆದ ಕೋವಿಡ್ ಕಾಲದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು ಮಣಿಸಿದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಮ್ಯಾಂಚೆಸ್ಟರ್‌ನತ್ತ ದೃಷ್ಟಿ ನೆಟ್ಟಿದೆ. ಓಲ್ಡ್ ಟ್ರಾಫರ್ಡ್‌ನಲ್ಲಿ ಗುರುವಾರ ಆರಂಭವಾಗಿರುವ ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಳ್ಳಲು ಜೇಸನ್ ಹೋಲ್ಡರ್ ಪಡೆ ಪ್ರಯತ್ನಿಸಲಿದೆ.

ಅತ್ತ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಮರಳಿದ್ದಾರೆ. ಸೇಡು ತೀರಿಸಿಕೊಳ್ಳುವ ಛಲದೊಂದಿಗೆ ತಂಡ ಕಣಕ್ಕೆ ಇಳಿಯಲಿದೆ. ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ ಕಾರಣ ಅವರೊಂದಿಗೆ ಇರಲು ಬಯಸಿದ್ದ ಜೋ ರೂಟ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬೆನ್‌ ಸ್ಟೋಕ್ಸ್‌ ನಾಯಕತ್ವ ವಹಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. ಕೇವಲ 200 ರನ್‌ಗಳ ಗುರಿ ಬೆನ್ನತ್ತಿದ್ದ ವಿಂಡೀಸ್‌ ಆರಂಭದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಜರ್ಮೈನ್ ಬ್ಲ್ಯಾಕ್‌ವುಡ್ ಅಮೋಘ ಬ್ಯಾಟಿಂಗ್ ಮೂಲಕ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು. ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ತಂಡ 32 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದ ಸಾಧನೆ ಮಾಡಲಿದೆ.

2017–18ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲ ಪಂದ್ಯ ಸೋತ ನಂತರ ಇಂಗ್ಲೆಂಡ್ ಒಟ್ಟು 10 ಸರಣಿಗಳ ಪೈಕಿ ಎಂಟರಲ್ಲಿ ಆರಂಭದ ಆಘಾತ ಅನುಭವಿಸಿದೆ. ಆದರೆ ನಂತರ ಪುಟಿದೇಳಲು ಸಾಧ್ಯವಾಗಿರುವುದು ತಂಡದ ಅಗ್ಗಳಿಕೆ. ಅದು ವೆಸ್ಟ್ ಇಂಡೀಸ್ ವಿರುದ್ಧವೂ ಮುಂದುವರಿಯುವುದೇ ಎಂಬುದಕ್ಕೆ ಎರಡನೇ ಪಂದ್ಯದಲ್ಲಿ ಉತ್ತರ ಸಿಗಲಿದೆ.

ಗುರುವಾರದಿಂದ ನಡೆಯಲಿರುವ ಪಂದ್ಯದಲ್ಲಿ ಜೋ ರೂಟ್‌ಗಾಗಿ ಜೋ ಡೆನ್ಲಿ ತಂಡದಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ. ಡೆನ್ಲಿ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿದ್ದಾರೆ. ಜಾಕ್ ಕ್ರೌವ್ಲಿ ಎರಡನೇ ಇನಿಂಗ್ಸ್‌ನಲ್ಲಿ 76 ರನ್ ಗಳಿಸಿರುವುದರಿಂದ ಅವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇಲ್ಲ. ಆದರೆ ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟು ಠೀಕೆಗೆ ಒಳಗಾಗಿರುವ ತಂಡದ ಆಡಳಿತ ಮುಂದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಲು ಮುಂದಾಗಲಿದೆಯೇ ಎಂಬುದು ಕುತೂಹಲದ ಪ್ರಶ್ನೆ. 

ಸೌತಾಂಪ್ಟನ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ ಶಾನನ್ ಗ್ಯಾಬ್ರಿಯೆಲ್ ಅವರನ್ನು ಕೊನೆಯ ಕ್ಷಣದಲ್ಲಿ ತಂಡಕ್ಕೆ ಸೇರಿಸಲಾಗಿತ್ತು. ಕಾಲುನೋವಿನಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ್ದರು. ನಾಯಕ ಜೇಸನ್ ಹೋಲ್ಡರ್ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ 42ಕ್ಕೆ6 ವಿಕೆಟ್ ಕಬಳಿಸಿದ್ದರು. ಗ್ಯಾಬ್ರಿಯೆಲ್ ಸೇರಿದಂತೆ ಹಲವು ಆಟಗಾರರ ಫಿಟ್‌ನೆಸ್‌ ಸಮಸ್ಯೆ ವೆಸ್ಟ್ ಇಂಡೀಸ್‌ ತಂಡವನ್ನು ಈಗ ಕಾಡುತ್ತಿದೆ.

ತಂಡಗಳು: ಇಂಗ್ಲೆಂಡ್‌: ಜೋ ರೂಟ್ (ನಾಯಕ), ಬೆನ್‌ ಸ್ಟೋಕ್ಸ್‌, ಜೇಮ್ಸ್ ಆ್ಯಂಡರ್ಸನ್, ಜೊಫ್ರಾ ಆರ್ಚರ್, ಡಾಮ್ ಬೆಸ್‌, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್‌, ಜೋಸ್ ಬಟ್ಲರ್, ಜಾಕ್ ಕ್ರೌವ್ಲಿ, ಜೋ ಡೆನ್ಲಿ, ಒಲಿ ಪಾಪ್, ಡಾಮ್ ಸಿಬ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್. ವೆಸ್ಟ್ ಇಂಡೀಸ್‌: ಜೇಸನ್ ಹೋಲ್ಡರ್ (ನಾಯಕ) ಜೆಮೈನ್ ಬ್ಲ್ಯಾಕ್‌ವುಡ್, ಕ್ರುಮಾ ಬ್ರಾನರ್‌, ಕ್ರೇಗ್ ಬ್ರಾಥ್‌ವೇಟ್, ಸಮಾರ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ರಖೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್ ಗ್ಯಾಬ್ರಿಯೆಲ್, ಕೆಮರ್ ಹೋಲ್ಡರ್, ಶಾಯ್ ಹೋಪ್, ಅಲ್ಜರ್ ಜೋಸೆಫ್, ರೇಮನ್ ರೀಫರ್, ಕೆಮರ್ ರೋಚ್. ಪಂದ್ಯ ಆರಂಭ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು