ಸೋಮವಾರ, ಆಗಸ್ಟ್ 15, 2022
21 °C
ಮೊದಲ ಟೆಸ್ಟ್‌: ವೆಸ್ಟ್ ಇಂಡೀಸ್‌ ವಿರುದ್ಧ ನ್ಯೂಜಿಲೆಂಡ್‌ ತಂಡದ ಬೃಹತ್‌ ಮೊತ್ತ

NZ vs WI 1st Test: ವಿಲಿಯಮ್ಸನ್‌ ದ್ವಿಶತಕದ ಸೊಬಗು

ಎಪಿ Updated:

ಅಕ್ಷರ ಗಾತ್ರ : | |

Prajavani

ಹ್ಯಾಮಿಲ್ಟನ್‌: ಸುಂದರ ಹಾಗೂ ತಾಳ್ಮೆಯ ಇನಿಂಗ್ಸ್ ಕಟ್ಟಿದ ಕೇನ್‌ ವಿಲಿಯಮ್ಸನ್‌ ಶುಕ್ರವಾರ ಮೂರನೇ ದ್ವಿಶತಕದ (251, 412 ಎಸೆತ, 34 ಬೌಂಡರಿ, 2 ಸಿಕ್ಸರ್‌) ಒಡೆಯರಾದರು. ಮೊದಲ ಟೆಸ್ಟ್‌ನ ಎರಡನೇ ದಿನದ ಸಂಪೂರ್ಣ ಶ್ರೇಯವನ್ನು ನ್ಯೂಜಿಲೆಂಡ್ ತಂಡದ ನಾಯಕ ತಮ್ಮದಾಗಿಸಿಕೊಂಡರು. ಕೇನ್ ಅವರು ಟೆಸ್ಟ್‌ನಲ್ಲಿ ಗಳಿಸಿದ ಶ್ರೇಷ್ಠವೂ ಮೊತ್ತವೂ ಇದಾಗಿದೆ.

ಅವರ ಆಟದ ನೆರವಿನಿಂದ ಆತಿಥೇಯ ತಂಡವು ಪ್ರವಾಸಿ ವೆಸ್ಟ್ ಇಂಡೀಸ್‌ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 519 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್‌, ದಿನದಾಟ ಕೊನೆಗೊಂಡಾಗ 26 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 49 ರನ್‌ ಗಳಿಸಿತ್ತು. ಕ್ರೆಗ್‌ ಬ್ರಾತ್‌ವೇಟ್‌ (20) ಹಾಗೂ ಜಾನ್‌ ಕ್ಯಾಂಪ್‌ಬೆಲ್‌ (22) ಕ್ರೀಸ್‌ನಲ್ಲಿದ್ದರು.

ಗುರುವಾರ ಮೊದಲ ದಿನದಾಟ ಕೊನೆಗೊಂಡಾಗ ನ್ಯೂಜಿಲೆಂಡ್ ತಂಡವು 2 ವಿಕೆಟ್‌ಗೆ 243 ರನ್‌ ಗಳಿಸಿತ್ತು. ವಿಲಿಯಮ್ಸನ್‌ 97 ರನ್‌ ಗಳಿಸಿದ್ದರು. ಚೆಂದದ ಆಟ ಮುಂದುವರಿಸಿದ ಕೇನ್‌, ಕೇಮರ್ ರೋಚ್‌ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಶತಕ ಪೂರ್ಣಗೊಳಿಸಿದರು. ದ್ವಿಶತಕವನ್ನು ರೋಚ್‌ ಎಸೆತದಲ್ಲೇ ಪೂರ್ಣಗೊಳಿಸಿದ್ದು ವಿಶೇಷ. ಇದೇ ಮೊದಲ ಬಾರಿಗೆ ಸಿಕ್ಸರ್ ಮೂಲಕ 250 ರನ್‌ಗಳ ಗಡಿ ತಲುಪಿದರು. ಬಳಿಕ ಅಲ್ಜರಿ ಜೋಸೆಫ್‌ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನದಲ್ಲಿ ಕೇನ್ ಅವರು ರಾಸ್ಟನ್‌ ಚೇಸ್‌ಗೆ ಕ್ಯಾಚಿತ್ತರು. ಅಲ್ಲಿಗೆ ಅವರ ಮ್ಯಾರಥಾನ್ ಇನಿಂಗ್ಸ್ ಕೊನೆಗೊಂಡಿತು.

ನ್ಯೂಜಿಲೆಂಡ್ ತಂಡದ ರಾಸ್‌ ಟೇಲರ್‌ (38), ಹೆನ್ರಿ ನಿಕೊಲ್ಸ್ (7) ಹಾಗೂ ಟಾಮ್‌ ಬ್ಲಂಡೆಲ್‌ (14) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೈಲ್‌ ಜೆಮಿಸನ್‌ ಅವರು ಅರ್ಧಶತಕ (ಔಟಾಗದೆ 51) ಗಳಿಸಿದ ಬಳಿಕ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲಾಯಿತು.

ವಿಂಡೀಸ್‌ ಪ‍ರ ರೋಚ್‌ ಹಾಗೂ ಶಾನನ್ ಗೇಬ್ರಿಯಲ್‌ ತಲಾ ಮೂರು ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌(ಗುರುವಾರದ ಅಂತ್ಯಕ್ಕೆ 78 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 243): 145 ಓವರ್‌ಗಳಲ್ಲಿ 7 ವಿಕೆಟ್‌ಗೆ 519 ಡಿಕ್ಲೇರ್‌(ಕೇನ್‌ ವಿಲಿಯಮ್ಸನ್‌ 251, ರಾಸ್‌ ಟೇಲರ್‌ 38, ಟಾಮ್ ಬ್ಲಂಡೆಲ್‌ 14, ಕೈಲ್‌ ಜೆಮಿಸನ್‌ ಔಟಾಗದೆ 51). ವೆಸ್ಟ್ ಇಂಡೀಸ್‌: 26 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 49 (ಕ್ರೆಗ್ ಬ್ರಾತ್‌ವೇಟ್‌ ಔಟಾಗದೆ 20, ಜಾನ್‌ ಕ್ಯಾಂಪ್‌ಬೆಲ್ ಔಟಾಗದೆ 22).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು