ಬುಧವಾರ, ಅಕ್ಟೋಬರ್ 27, 2021
21 °C

ಡೆಲ್ಲಿ ವಿರುದ್ಧದ ಜಯ ಯಾವುದೇ ‌ಸಂದರ್ಭದಲ್ಲಿ ಗೆಲ್ಲುವ ವಿಶ್ವಾಸ ನೀಡಿದೆ: ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಸಿಕ್ಕ ಗೆಲುವು, ಯಾವುದೇ ಸಂದರ್ಭದಲ್ಲಿಯೂ ಜಯದ ಹಳಿಗೆ ಮರಳುವ ವಿಶ್ವಾಸವನ್ನು ತಂದುಕೊಟ್ಟಿದೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಪಡೆ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆಯಿತು. ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು 164 ರನ್ ಕಲೆಹಾಕಿತ್ತು.

ಈ ಸವಾಲಿನ ಗುರಿ ಬೆನ್ನತ್ತಿದ ಕೊಹ್ಲಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕನೊಟ್ಟಿಗೆ ಇನಿಂಗ್ಸ್‌ ಆರಂಭಿಸಿದ ಕನ್ನಡಿಗ ಪಡಿಕ್ಕಲ್‌ ಖಾತೆ ತೆರೆಯದೆ ಪೆವಿಲಿಯನ್‌ ಸೇರಿಕೊಂಡರು. ಕೊಹ್ಲಿ ಕೂಡ ಕೇವಲ 4 ರನ್‌ ಗಳಿಸಿ ವಿಕೆಟ್‌ ಕೈ ಚೆಲ್ಲಿದರು. ಇವರಿಬ್ಬರೂ ಔಟಾದಾಗ ತಂಡದ ಮೊತ್ತ ಕೇವಲ 6 ರನ್.

ಈ ವೇಳೆ ಜೊತೆಯಾದ ಶ್ರೀಕರ್‌ ಭರತ್‌ ಮತ್ತು ಅನುಭವಿ ಎಬಿ ಡಿ ವಿಲಿಯರ್ಸ್‌ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 49 ರನ್‌ ಸೇರಿಸಿ ಅಲ್ಪ ಚೇತರಿಕೆ ನೀಡಿದರು. ವಿಲಿಯರ್ಸ್‌ ವಿಕೆಟ್‌ ಪತನದ ಬಳಿಕ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಪಂದ್ಯದ ಗತಿ ಬದಲಿಸುವ ಆಟವಾಡಿದರು.

ಭರತ್-ಮ್ಯಾಕ್ಸ್‌ವೆಲ್‌‌ ಶತಕದ ಜೊತೆಯಾಟ
ತಂಡ ಗೆಲ್ಲಲು ಇನ್ನು 63 ಎಸೆತಗಳಲ್ಲಿ ನೂರು ರನ್‌ ಬೇಕಿದ್ದಾಗ ಜೊತೆಯಾದ ಮ್ಯಾಕ್ಸ್‌ವೆಲ್‌‌ ಮತ್ತು ಭರತ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದಾಗ್ಯೂ ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿತ್ತು.

ಆವೇಶ್‌ ಖಾನ್ ಎಸೆತದ ಅಂತಿಮ ಓವರ್‌ನ ಮೊದಲ ಐದು ಎಸೆತಗಳಲ್ಲಿ ಈ ಜೋಡಿ 10 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೊನೇ ಎಸೆತದಲ್ಲಿ 5 ರನ್‌ ಗಳಿಸಬೇಕಾದ ಸವಾಲು ಎದುರಾಯಿತು. ಆದರೆ, ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಭರತ್ ಆರ್‌ಸಿಬಿಗೆ ಏಳು ವಿಕೆಟ್‌ಗಳ ಗೆಲುವು ದಕ್ಕಿಸಿಕೊಟ್ಟರು.

52 ಎಸೆತಗಳನ್ನು ಎದುರಿಸಿದ ಭರತ್‌ 4 ಸಿಕ್ಸರ್‌ ಮತ್ತು 3 ಬೌಂಡರಿ ಸಹಿತ 78 ರನ್‌ ಗಳಿಸಿದರೆ, ಮ್ಯಾಕ್ಸ್‌ವೆಲ್‌ 33 ಎಸೆತಗಳಿಂದ 8 ಬೌಂಡರಿ ಬಾರಿಸಿ 51 ರನ್‌ ಸಿಡಿಸಿ ಅಜೇಯವಾಗಿ ಉಳಿದರು. ನಾಲ್ಕನೇ ವಿಕೆಟ್‌ಗೆ ಜೊತೆಯಾಟದಲ್ಲಿ ಇವರಿಬ್ಬರ ಬ್ಯಾಟ್‌ಗಳಿಂದ ಅಜೇಯ 111 ರನ್‌ ಹರಿದುಬಂದವು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ʼನಂಬಲಸಾಧ್ಯವಾದ ಪಂದ್ಯ. ನಮಗೆ ಕಳೆದುಕೊಳ್ಳುವಂತಹದ್ದೇನೂ ಇರಲಿಲ್ಲ. ಆದರೆ, ಇದು ಐಪಿಎಲ್‌ನಲ್ಲಿ ಯಾವಾಗಲೂ ನಡೆಯುವಂತಹ ಸ್ಪರ್ಧಾತ್ಮಕ ಪಂದ್ಯವೇ ಆಗಿದೆ. ಪಂದ್ಯವನ್ನು ಯಾವುದೇ ಪರಿಸ್ಥಿತಿಯಲ್ಲೂ ಹಿಡಿತಕ್ಕೆ ಪಡೆಯುವ ವಿಶ್ವಾಸವನ್ನು ಮೂಡಿಸಿದೆʼ ಎಂದು ಹೇಳಿದ್ದಾರೆ.


ಶ್ರೀಕರ್‌ ಭರತ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌

ವಿಕೆಟ್‌ಗಳನ್ನು ಕಳೆದುಕೊಂಡಾಗಲೂ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿರುವ ತಂಡವನ್ನು ಮಣಿಸುವುದು ಉತ್ತಮ ಭಾವನೆ ಮೂಡಿಸುತ್ತದೆ. ಆರಂಭದಲ್ಲಿ ವಿಲಿಯರ್ಸ್‌ ಬ್ಯಾಟಿಂಗ್‌ ಮಾಡಿದ ರೀತಿ ಮತ್ತು ಕೊನೆಯಲ್ಲಿ ಭರತ್‌ ಹಾಗೂ ಮ್ಯಾಕ್ಸ್‌ವೆಲ್‌ ಆಡಿದ ರೀತಿ ನಂಬಲಸಾಧ್ಯವಾದುದುʼ‌ ಎಂದು ಹೇಳಿಕೊಂಡಿದ್ದಾರೆ.

ಭರತ್‌ ಅವರ ಅದ್ಭುತ ಪ್ರದರ್ಶನದೊಂದಿಗೆ ತಂಡದ ಮೂರನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದೂ ತಿಳಿಸಿದ್ದಾರೆ.

ಫೈನಲ್‌ ದಾರಿ
ಡೆಲ್ಲಿ ತಂಡ ಐಪಿಎಲ್‌-2021ರ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್‌ಕಿಂಗ್ಸ್‌ ಎರಡನೇ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ನಾಲ್ಕನೇ ಸ್ಥಾನಗಳಲ್ಲಿವೆ.

ಅಕ್ಟೋಬರ್ 10 ರಂದು (ಭಾನುವಾರ) ದುಬೈಯಲ್ಲಿ ನಡೆಲಿರುವ ಮೊದಲ ಕ್ವಾಲಿಫೈಯರ್‌‌ನಲ್ಲಿ ಡೆಲ್ಲಿ ಮತ್ತು ಚೆನ್ನೈ ಸೆಣಸಾಟ ನಡೆಸಲಿವೆ. 

ಅಕ್ಟೋಬರ್ 11ರಂದು (ಸೋಮವಾರ) ಶಾರ್ಜಾದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವು ಕೋಲ್ಕತ್ತ ವಿರುದ್ಧ ಕಣಕ್ಕಿಳಿಯಲಿದೆ.

ಮೊದಲ ಕ್ವಾಲಿಫೈಯರ್‌‌ ಗೆಲ್ಲುವ ತಂಡ ಫೈನಲ್‌ ತಲುಪಿದರೆ, ಸೋಲುವ ತಂಡ ಎಲಿಮಿನೇಟರ್ ಪಂದ್ಯದ ವಿಜಯಿಯೊಂದಿಗೆ ಫೈನಲ್‌ ಟಿಕೆಟ್‌ಗಾಗಿ ಅಕ್ಟೋಬರ್ 13ರಂದು (ಬುಧವಾರ) ಶಾರ್ಜಾದಲ್ಲಿ ಪೈಪೋಟಿ ನಡೆಸಲಿದೆ.

ಫೈನಲ್‌ ಪಂದ್ಯ ಅಕ್ಟೋಬರ್‌ 15 ರಂದು (ಶುಕ್ರವಾರ) ದುಬೈನಲ್ಲಿ ನಡೆಯಲಿದೆ.

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು