ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟ್ವೆಂಟಿ–20 ಚಾಲೆಂಜ್‌ ಫೈನಲ್‌: ಸೂಪರ್‌ನೋವಾಸ್‌ ಮುಡಿಗೆ ಕಿರೀಟ

ಹರ್ಮನ್‌ಪ್ರೀತ್ ಕೌರ್‌ ಅರ್ಧಶತಕ
Last Updated 11 ಮೇ 2019, 19:33 IST
ಅಕ್ಷರ ಗಾತ್ರ

ಜೈಪುರ: ನಾಟಕೀಯ ತಿರುವು ಪಡೆದು ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಹೋರಾಟದಲ್ಲಿ ಸೂಪರ್‌ನೋವಾಸ್‌ ತಂಡ ಗೆಲುವಿನ ಸಿಹಿ ಸವಿಯಿತು. ಮಹಿಳಾ ಟ್ವೆಂಟಿ–20 ಚಾಲೆಂಜ್‌ನ ಕಿರೀಟವನ್ನೂ ಮುಡಿಗೇರಿಸಿಕೊಂಡು ಸಂಭ್ರಮಿಸಿತು.

ಫೈನಲ್‌ ಪೈಪೋಟಿಯಲ್ಲಿ ಹರ್ಮನ್‌ಪ್ರೀತ್ ಕೌರ್‌ ಸಾರಥ್ಯದ ಸೂಪರ್‌ನೋವಾಸ್‌ 4 ವಿಕೆಟ್‌ಗಳಿಂದ ವೆಲೋಸಿಟಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಮಿಥಾಲಿ ರಾಜ್‌ ಮುಂದಾಳ್ವದ ವೆಲೋಸಿಟಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 121ರನ್‌ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಸೂಪರ್‌ನೋವಾಸ್‌ 6 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ನಾಯಕಿ ಹರ್ಮನ್‌ಪ್ರೀತ್‌ (51; 37ಎ, 4ಬೌಂ, 3ಸಿ) ಮತ್ತು ರಾಧಾ ಯಾದವ್‌ (ಔಟಾಗದೆ 10; 4ಎ, 1ಬೌಂ) ಅವರ ಆಟ ಅಭಿಮಾನಿಗಳ ಮನ ಗೆದ್ದಿತು.

ಗುರಿ ಬೆನ್ನಟ್ಟಿದ ಸೂಪರ್‌ನೋವಾಸ್‌ 64ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿತ್ತು. ಗೆಲುವಿಗೆ 36 ಎಸೆತಗಳಲ್ಲಿ 58ರನ್‌ ಗಳಿಸುವ ಸವಾಲು ಎದುರಿಗಿತ್ತು. ಹೀಗಾಗಿ ಆರಂಭದಲ್ಲಿ ಸಂಯಮದಿಂದ ಆಡುತ್ತಿದ್ದ ಹರ್ಮನ್‌ ಘರ್ಜಿಸಲು ಶುರುಮಾಡಿದರು. ಏಕ್ತಾ ಬಿಷ್ಠ್‌ ಹಾಕಿದ 15ನೇ ಓವರ್‌ನಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿದ ಅವರು ಜಹನಾರ ಎಸೆದ ಮರು ಓವರ್‌ನಲ್ಲಿ ಎರಡು ಬೌಂಡರಿ ಗಳಿಸಿದರು. ದೇವಿಕಾ ವೈದ್ಯ ಅವರ 18ನೇ ಓವರ್‌ನಲ್ಲಿ ಎರಡು ಭರ್ಜರಿ ಸಿಕ್ಸರ್‌ ಸಹಿತ 15ರನ್‌ ಕಲೆಹಾಕಿ ಅರ್ಧಶತಕದ ಸಂಭ್ರಮ ಆಚರಿಸಿದರು.

ಕೊನೆಯ ಓವರ್‌ನಲ್ಲಿ ಸೂಪರ್‌ನೋವಾಸ್‌ ಗೆಲುವಿಗೆ ಏಳು ರನ್‌ಗಳು ಬೇಕಿದ್ದವು. ಸ್ಪಿನ್ನರ್‌ ಅಮೆಲಿಯಾ ಕೆರ್‌ ಹಾಕಿದ ಮೊದಲ ಎಸೆತದಲ್ಲಿ ರನ್‌ ಗಳಿಸಲು ವಿಫಲರಾದ ಹರ್ಮನ್‌, ಮರು ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ಹೋಗಿ ಕೈಸುಟ್ಟುಕೊಂಡರು. ಕವರ್ಸ್‌ನತ್ತ ಅವರು ಬಾರಿಸಿದ ಚೆಂಡನ್ನು ಹೇಲಿ ಮ್ಯಾಥ್ಯೂಸ್‌ ಮುಂದಕ್ಕೆ ಬಾಗಿ ಆಕರ್ಷಕ ರೀತಿಯಲ್ಲಿ ಹಿಡಿತಕ್ಕೆ ಪಡೆದರು. ಹರ್ಮನ್‌ ಔಟಾದಾಗ ವೆಲೋಸಿಟಿ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆದಿತ್ತು.

ಎಂಟನೇ ಕ್ರಮಾಂಕದ ಆಟಗಾರ್ತಿ ರಾಧಾ ಯಾದವ್‌, ಸೂಪರ್‌ನೋವಾಸ್‌ ಪಾಲಿಗೆ ಆಪತ್ಬಾಂಧವರಾದರು. ಕೆರ್‌ ಹಾಕಿದ ಮೂರು, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ತಲಾ ಎರಡು ರನ್‌ ಬಾರಿಸಿದ ಅವರು ಗೆಲುವು ಹರ್ಮನ್‌ಪ್ರೀತ್ ಪಡೆಯ ಪರ ವಾಲುವಂತೆ ಮಾಡಿದರು. ಅಂತಿಮ ಎಸೆತವನ್ನು ರಾಧಾ ಬೌಂಡರಿ ಗೆರೆ ದಾಟಿಸುತ್ತಿದ್ದಂತೆ ಸೂಪರ್‌ನೋವಾಸ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ವೆಲೋಸಿಟಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡ ಖಾತೆ ತೆರೆಯುವ ಮೊದಲೇ ಹೇಲಿ ಮ್ಯಾಥ್ಯೂಸ್ (0) ಪೆವಿಲಿಯನ್ ಸೇರಿದರು.

ಇದರ ಬೆನ್ನಲ್ಲೇ ಸ್ಫೋಟಕ ಬ್ಯಾಟ್ಸ್‌ವುಮನ್ ಡೇನಿಯಲ್‌ ವ್ಯಾಟ್‌ (0) ಅವರನ್ನು ಅನುಜಾ ಪಾಟೀಲ್ ಔಟ್ ಮಾಡಿದರು. ಮಿಥಾಲಿ (12; 22ಎ, 2ಬೌಂ) ಮತ್ತು ವೇದಾ ಕೃಷ್ಣಮೂರ್ತಿ (8) ಅವರ ವೈಫಲ್ಯ ಮುಂದುವರಿಯಿತು.

71 ರನ್‌ಗಳ ಜೊತೆಯಾಟ: 37 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಸುಷ್ಮಾ ವರ್ಮಾ (ಅಜೇಯ 40; 32ಎ, 1ಸಿ, 3ಬೌಂ) ಮತ್ತು ಅಮೆಲಿಯಾ ಕೆರ್‌ (36; 38ಎ, 4ಬೌಂ) ಅಮೋಘ ಆಟವಾಡಿದರು. ಈ ಜೋಡಿ 65 ಎಸೆತಗಳಲ್ಲಿ 71 ರನ್ ಗಳಿಸಿತು. ಹೀಗಾಗಿ ತಂಡ ಮೂರಂಕಿಯ ಮೊತ್ತ ದಾಟಿತು.

ಸಂಕ್ಷಿಪ್ತ ಸ್ಕೋರ್‌
ವೆಲೋಸಿಟಿ:
20 ಓವರ್‌ಗಳಲ್ಲಿ 6 ವಿಕೆಟ್‌ಗೆ 121
ಶಫಾಲಿ ವರ್ಮಾ 11, ಮಿಥಾಲಿ ರಾಜ್‌ 12, ಸುಷ್ಮಾ ವರ್ಮಾ ಔಟಾಗದೆ 40, ಅಮೆಲಿಯಾ ಕೆರ್‌ 36; ಲೀ ತಹುಹು 21ಕ್ಕೆ2, ಅನುಜಾ ಪಾಟೀಲ್‌ 19ಕ್ಕೆ1, ಸೋಫಿ ಡಿವೈನ್‌ 19ಕ್ಕೆ1, ಪೂನಂ ಯಾದವ್‌ 18ಕ್ಕೆ1

ಸೂಪರ್‌ನೋವಾಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 125
(ಪ್ರಿಯಾ ಪೂನಿಯಾ 29, ಜೆಮಿಮಾ ರಾಡ್ರಿಗಸ್‌ 22, ಹರ್ಮನ್‌ಪ್ರೀತ್‌ ಕೌರ್‌ 51, ರಾಧಾ ಯಾದವ್‌ ಔಟಾಗದೆ 10; ಜಹನಾರ ಆಲಮ್‌ 21ಕ್ಕೆ2, ಅಮೆಲಿಯಾ ಕೆರ್‌ 29ಕ್ಕೆ2, ದೇವಿಕಾ ವೈದ್ಯ 21ಕ್ಕೆ1

ಫಲಿತಾಂಶ: ಸೂಪರ್‌ನೋವಾಸ್‌ಗೆ 4 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ
ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT