ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ: ಮುಂಬೈ ಇಂಡಿಯನ್ಸ್‌ಗೆ ಎರಡನೇ ಜಯ

ನಾಗೇಶ್ ಶೆಣೈ
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಅಮೇಲಿಯಾ ಕೆರ್ (17ಕ್ಕೆ4 ಮತ್ತು 31) ಅವರ ಆಲ್‌ರೌಂಡ್‌ ಆಟ ಮತ್ತು ಶಬ್ನಿಮ್ ಇಸ್ಮಾಯಿಲ್ (18ಕ್ಕೆ3) ಅಮೋಘ ಬೌಲಿಂಗ್ ನೆರವಿ ನಿಂದ ಮುಂಬೈ ಇಂಡಿಯನ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯದಲ್ಲಿ ಭಾನುವಾರ ಗುಜರಾತ್‌ ಜೈಂಟ್ಸ್‌ ತಂಡವನ್ನು ಐದು ವಿಕೆಟ್‌ಗಳಿಂದ ಹೆಚ್ಚಿನ ಪ್ರಯಾಸವಿಲ್ಲದೇ ಸೋಲಿಸಿತು.

ಡೀಪ್‌ ಮಿಡ್‌ವಿಕೆಟ್‌ ಆಚೆ ಸಿಕ್ಸರ್‌ ಎತ್ತಿ ಪಂದ್ಯವನ್ನು ಮುಗಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅಜೇಯ 46 ರನ್ (41ಎ, 4x5, 6x1) ಗಳಿಸಿ ಗೆಲುವಿನಲ್ಲಿ ತಮ್ಮ ಪಾಲೂ ನೀಡಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲೀಗ್‌ನ ಮೊದಲ ಎರಡು ಪಂದ್ಯಗಳು ರೋಚಕವಾಗಿದ್ದರೆ, ಈ ಪಂದ್ಯದಲ್ಲಿ ಅಂಥ ಕುತೂಹಲ ಕಾಣಲಿಲ್ಲ. ಹನ್ನೆರಡು ಸಾವಿರದಷ್ಟಿದ್ದ ಪ್ರೇಕ್ಷಕರಿಗೆ ಬಹುಪಾಲು ನಿರಾಸೆಯಾಯಿತು. ಮೊದಲು ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಗುಜರಾತ್‌ ಜೈಂಟ್ಸ್‌ 9 ವಿಕೆಟ್‌ಗೆ 126 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಮುಂಬೈ ತಂಡ ಇನ್ನೂ 11 ಎಸೆತಗಳು ಉಳಿದಿರುವಂತೆ 5 ವಿಕೆಟ್‌ಗೆ 129 ರನ್ ಹೊಡೆದು ಎರಡನೇ ಗೆಲುವನ್ನು ದಾಖಲಿಸಿತು.

ಮುಂಬೈ ಕೂಡ ಮೂರು ವಿಕೆಟ್‌ ಗಳನ್ನು 49 ರನ್ನಿಗೆ ಕಳೆದುಕೊಂಡರೂ, ಹರ್ಮನ್‌ಪ್ರೀತ್ ಸೊಗಸಾದ ಆಟವಾಡಿ, ಅಮೇಲಿಯಾ ಜೊತೆ ನಾಲ್ಕನೇ ವಿಕೆಟ್‌ಗೆ 50 ಎಸೆತಗಳಲ್ಲಿ 66 ರನ್ ಸೇರಿಸಿ ತಂಡದ ಹಾದಿಯನ್ನು ಸುಗಮಗೊಳಿಸಿದರು. ಗುರಿಯೂ ದೊಡ್ಡದಿರದ ಕಾರಣ ಆತಂಕವೇನೂ ಎದುರಾಗಲಿಲ್ಲ.

ಇದಕ್ಕೆ ಮೊದಲು ಶಬ್ನಿಮ್ ಮತ್ತು ಲೆಗ್‌ ಸ್ಪಿನ್ನರ್ ಅಮೇಲಿಯಾ ಅವರು ಗುಜರಾತ್ ಜೈಂಟ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು.

ಶಬ್ನಿಮ್ ಈ ಪಂದ್ಯದ ನಾಲ್ಕನೇ ಎಸೆತದಲ್ಲಿ ವೇದಾ ಕೃಷ್ಣಮೂರ್ತಿ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರೆ, ಮೂರನೇ ಓವರ್‌ನಲ್ಲಿ ಹರ್ಲಿನ್‌ ದೇವೊಲ್ (8) ಅವರನ್ನೂ ಇದೇ ರೀತಿ ಮರಳಿಸಿದರು.

ಎಡಗೈ ಬ್ಯಾಟರ್‌ ಫೋಬಿ ಲಿಚ್‌ಫೀಲ್ಡ್ಸ್‌, ದಯಾಳನ್ ಹೇಮಲತಾ, ಆ್ಯಶ್ಲೆ ಗಾರ್ಡನರ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಬ್ನಿಮ್ ತಮ್ಮ ಎರಡನೇ ಸ್ಪೆಲ್‌ನಲ್ಲಿ ಬೆತ್‌ ಮೂನಿ (24, 22 ಎ, 2x4) ವಿಕೆಟ್‌ ಪಡೆದಾಗ ಜೈಂಟ್ಸ್‌ ತಂಡದ ಅರ್ಧದಷ್ಟು ವಿಕೆಟ್‌ಗಳು 58 ರನ್‌ಗಳಿಗೆ ಉರುಳಿದ್ದವು.

ದಕ್ಷಿಣ ಆಫ್ರಿಕಾದ ವೇಗಿ ಶಬ್ನಿಮ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ ಬೌಲಿಂಗ್ ಮೊನಚು ಕಡಿಮೆಯಾಗಿರಲಿಲ್ಲ.

ಇನ್ನೊಂದೆಡೆ ಬೌಂಡರಿಗಳು ಬತ್ತಿ ಹೋದವು. 6 ಓವರ್‌ಗಳ ಪವರ್‌ಪ್ಲೇ ಬಳಿಕ 3 ವಿಕೆಟ್‌ಗೆ 43 ರನ್‌ ಗಳಿಸಿದ್ದ ಜೈಂಟ್ಸ್‌ ನಂತರದ ಬೌಂಡರಿ ಗಳಿಸಲು 44 ಎಸೆತ ತೆಗೆದುಕೊಂಡಿತು.

ಆಲ್‌ರೌಂಡರ್‌ ಕ್ಯಾಥ್ರಿನ್ ಬ್ರೈಸ್‌ (ಔಟಾಗದೇ 25, 4x1, 6x1) ಮತ್ತು ತನುಜಾ ಕನ್ವರ್ ಎಂಟನೇ ವಿಕೆಟ್‌ಗೆ 36 ಎಸೆತಗಳಲ್ಲಿ 48 ರನ್ ಸೇರಿಸಿ ತಂಡದ ಮೊತ್ತಕ್ಕೆ ಗೌರವದ ಲೇಪನ ನೀಡಿದರು. ಗುಜರಾತ್‌ನ ಕೊನೆಯ ನಾಲ್ಕು ವಿಕೆಟ್‌ಗಳು ಅಮೇಲಿಯಾ ಪಾಲಾದವು.

ಸಂಕ್ಷಿಪ್ತ ಸ್ಕೋರು:

ಗುಜರಾತ್ ಜೈಂಟ್ಸ್‌: 20 ಓವರುಗಳಲ್ಲಿ 9 ವಿಕೆಟ್‌ಗೆ 126 (ಬೆತ್‌ ಮೂನಿ 24, ಕ್ಯಾಥ್ರಿನ್ ಬ್ರೈಸ್‌ ಔಟಾಗದೇ 25, ತನುಜಾ ಕನ್ವರ್ 28; ಶಬ್ನಿಮ್ ಇಸ್ಮಾಯಿಲ್ 18ಕ್ಕೆ3, ಅಮೇಲಿಯಾ ಕೆರ್ 17ಕ್ಕೆ4); ಮುಂಬೈ ಇಂಡಿಯನ್ಸ್‌: 18.1 ಓವರುಗಳಲ್ಲಿ 5 ವಿಕೆಟ್‌ಗೆ 129    (ನತಾಲಿ ಶಿವರ್ ಬ್ರಂಟ್‌ 22, ಹರ್ಮನ್‌ಪ್ರೀತ್ ಕೌರ್ ಔಟಾಗದೇ 46, ಅಮೇಲಿಯಾ ಕೆರ್‌ 31; ತನುಜಾ ಕನ್ವರ್‌ 21ಕ್ಕೆ2). ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಅಮೇಲಿಯಾ ಕೆರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT