ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ಗೆ ಮಣಿದ ಆರ್‌ಸಿಬಿ

ಡಬ್ಲ್ಯುಪಿಎಲ್‌: ಮರೈಝಾನ್, ಯೊನಾಸನ್‌ ಆಲ್‌ರೌಂಡ್ ಆಟ
Published 29 ಫೆಬ್ರುವರಿ 2024, 17:58 IST
Last Updated 29 ಫೆಬ್ರುವರಿ 2024, 17:58 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಯಿತು. ಮರೈಝಾನ್ ಕಾಪ್ (32, 35ಕ್ಕೆ2) ಮತ್ತು ಜೆಸ್‌ ಯೊನಾಸನ್ (ಅಜೇಯ 36, 21ಕ್ಕೆ3) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 25 ರನ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 5 ವಿಕೆಟ್‌ಗೆ 194 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಇದು ಎರಡನೇ ಆವೃತ್ತಿಯ ಗರಿಷ್ಠ ಮೊತ್ತ. ಈ ಸವಾಲಿನ ಎದುರು ಬೆಂಗಳೂರು ತಂಡ 8.3 ಓವರುಗಳಲ್ಲಿ 77 ರನ್‌ ಗಳಿಸಿ ಉತ್ತಮ ಆರಂಭ ಪಡೆಯಿತು. ಸ್ಮೃತಿ ಮಂದಾನ (74, 43ಎ, 4x10, 6x3) ಮತ್ತು ಸೋಫಿ ಡಿವೈನ್‌ (23, 17 ಎಸೆತ) ಬಿರುಸಿನ ಆಟವಾಡಿ ಮೊದಲ ವಿಕೆಟ್‌ಗೆ 8.3 ಓವರುಗಳಲ್ಲಿ 77 ರನ್‌ ಸೇರಿಸಿದರು.

ಸ್ಮೃತಿ ಮಂದಾನ ನಿರ್ಗಮನದ ನಂತರ ಬೆಂಗಳೂರು ತಂಡ ಒತ್ತಡಕ್ಕೆ ಒಳಗಾಯಿತು. ಆಗ ತಂಡದ ಮೊತ್ತ 112. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ನಿರಂತರವಾಗಿ ಒತ್ತಡ ಹೇರಿದಂತೆ ಪಂದ್ಯ ಕೈಜಾರತೊಡಗಿತು. ನಂತರ ಸಬ್ಬಿನೇನಿ ಮೇಘನಾ (36, 31 ಎಸೆತ) ಬಿಟ್ಟರೆ ಯಾರೂ 20ರ ಗಡಿದಾಟಲಿಲ್ಲ. ತಂಡವು 9 ವಿಕೆಟ್‌ಗೆ 169 ರನ್‌ ಗಳಿಸಿ ಓವರ್‌ಗಳನ್ನು ಮುಗಿಸಿತು.

ಇದಕ್ಕೆ ಮೊದಲು ಡೆಲ್ಲಿ ತಂಡದ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭ ಆಟಗಾರ್ತಿ ಶೆಫಾಲಿ ವರ್ಮಾ (50, 31ಎ, 4x3, 6x4), ಅಲೈಸ್‌ ಕ್ಯಾಪ್ಸಿ (46, 33ಎ, 4x4, 6x2) ಅವರು ಉತ್ತಮ ಆರಂಭ ನೀಡಿದರೆ, ಕೊನೆಯಲ್ಲಿ ಮರಿಝಾನ್ ಕಾಪ್ (32, 16ಎ, 4x4, 6x2) ಮತ್ತು ಜೆಸ್‌ ಯೊನಾಸನ್‌ (ಅಜೇಯ 36, 16ಎ, 4x4, 6x2) ಅವರು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು 200ರ ಸನಿಹ ತಲುಪಿಸಿದರು.

ಮೊದಲ ಓವರ್‌ನಲ್ಲೇ, ರೇಣುಕಾ ಸಿಂಗ್ ಬೌಲಿಂಗ್‌ನಲ್ಲಿ ಜೀವದಾನ ಕವರ್ಸ್‌ನಲ್ಲಿ ಶ್ರೇಯಾಂಕಾ ಪಾಟೀಲ ಅವರಿಂದ ಜೀವದಾನ ಪಡೆದಿದ್ದ ಶೆಫಾಲಿ ವರ್ಮಾ ಅದನ್ನು ಸಮರ್ಥವಾಗಿ ಬಳಸಿಕೊಂಡರು. ನಾಯಕಿ ಮೆಗ್‌ ಲ್ಯಾನಿಂಗ್‌ (11) ದೊಡ್ಡ ಹೊಡೆತಕ್ಕೆ ಹೋಗಿ ಡೀಪ್‌ ಮಿಡ್‌ವಿಕೆಟ್‌ನಲ್ಲಿ ಕ್ಯಾಚಿತ್ತರು. ನಂತರ ಶೆಫಾಲಿ ಮತ್ತು ಅಲೈಸ್‌ ಕ್ಯಾಪ್ಸಿ ಆಟ ಮೇಳೈಸಿತು. ಮೊದಲು ಎಚ್ಚರಿಕೆ ವಹಿಸಿದರೂ, ನಂತರ ಬೌಂಡರಿ, ಸಿಕ್ಸರ್‌ಗಳು ಬರತೊಡಗಿದವು.

ಇವರಿಬ್ಬರ ನಡುವೆ ಎರಡನೇ ವಿಕೆಟ್‌ಗೆ 42 ಎಸೆತಗಳಲ್ಲಿ 82 ರನ್‌ಗಳು ಹರಿದುಬಂದವು. ಸ್ಪಿನ್ನರ್‌ ಶ್ರೇಯಾಂಕಾ ಪಾಟೀಲ ಮೊದಲ ಓವರ್‌ನಲ್ಲೇ ಶೆಫಾಲಿ ಎರಡು ಸಿಕ್ಸರ್‌ಗಳನ್ನು ಎತ್ತಿದ ಅವರು ಮೂರನೆಯದಕ್ಕೆ ಯತ್ನಿಸಿ ಲಾಂಗ್‌ಆನ್‌ನಲ್ಲಿದ್ದ ಜಾರ್ಜಿಯಾ ವಾರ್ಹ್ಯಾಮ್ ಅವರಿಗೆ ಕ್ಯಾಚಿತ್ತರು. ಮರೈಝಾನ್‌ ಕಾಪ್ ಮತ್ತು ಜೆಸ್‌ ಯೊನಾಸನ್‌ ತಂಡದ ಮೊತ್ತವನ್ನು ಸಿಕ್ಸರ್‌, ಬೌಂಡರಿಗಳ ಮೂಲಕ ಹೆಚ್ಚಿಸುತ್ತಾ ಹೋದರು. ಸ್ಪಿನ್ನರ್ ಆಶಾ ಶೋಭನಾ ಅವರ ಎರಡನೇ ಓವರ್‌ನಲ್ಲಿ (ಇನಿಂಗ್ಸ್‌ನ 18ನೇ ಓವರ್‌) ಜೊನಾಸೆನ್‌ ಒಂದು ಸಿಕ್ಸರ್‌, ಮೂರು ಬೌಂಡರಿಗಳಿದ್ದ 19 ರನ್‌ಗಳನ್ನು ಸೂರೆ ಮಾಡಿದರು.

ಸ್ಕೋರುಗಳು:
ಡೆಲ್ಲಿ ಕ್ಯಾಪಿಟಲ್ಸ್‌: 20 ಓವರುಗಳಲ್ಲಿ 5 ವಿಕೆಟ್‌ಗೆ 194 (ಶೆಫಾಲಿ ವರ್ಮಾ 50, ಅಲೈಸ್‌ ಕ್ಯಾಪ್ಸಿ 46, ಮರಿಝಾನ್ ಕಾಪ್‌ 32, ಜೆಸ್‌ ಯೊನಾಸನ್ ಔಟಾಗದೇ 36; ಸೋಫಿ ಡಿವೈನ್‌ 23ಕ್ಕೆ2, ನಾದಿನ್ ಡಿ ಕ್ಲಾರ್ಕ್ 35ಕ್ಕೆ2) ವಿರುದ್ಧ ರಾಯಲ್ಸ್ ಚಾಲೆಂಜರ್ಸ್‌ ಬೆಂಗಳೂರು: 20 ಓವರುಗಳಲ್ಲಿ 9 ವಿಕೆಟ್‌ಗೆ 169 (ಸ್ಮೃತಿ ಮಂದಾನ 74, ಸೋಫಿ ಡಿವೈನ್ 23, ಸಬ್ಬಿನೇನಿ ಮೇಘನಾ 36; ಮರಿಝಾನ್ ಕಾಪ್ 35ಕ್ಕೆ2 ಜೆಸ್‌ ಯೊನಾಸನ್ 21ಕ್ಕೆ3, ಅರುಂಧತಿ ರೆಡ್ಡಿ 38ಕ್ಕೆ2). ಪಂದ್ಯದ ಆಟಗಾರ್ತಿ: ಮರೈಝಾನ್ ಕಾಪ್‌.

ಶನಿವಾರದ ಪಂದ್ಯ: ಯುಪಿ ವಾರಿಯರ್ಸ್‌– ಗುಜರಾತ್‌ ಜೈಂಟ್ಸ್‌ (ರಾತ್ರಿ 7.30)

ನೇರಪ್ರಸಾರ: ಸ್ಪೋರ್ಟ್ಸ್ 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT