ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲಲಿಲ್ಲ ಮಳೆ, ನಡೆಯಲಿಲ್ಲ ಆಟ– ಕೊಚ್ಚಿ ಹೋದ ಕ್ರಿಕೆಟ್‌!

ವಿಶ್ವಕಪ್‌ ಕ್ರಿಕೆಟ್‌
Last Updated 13 ಜೂನ್ 2019, 14:20 IST
ಅಕ್ಷರ ಗಾತ್ರ

ನಾಟಿಂಗಂ: ಮಳೆಯಿಂದಾಗಿ ಗುರುವಾರ ಭಾರತ–ನ್ಯೂಜಿಲೆಂಡ್‌ ನಡುವಿನ ಪಂದ್ಯ ರದ್ದಾಗಿದೆ. ಉಭಯ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗಿದೆ.

'ಉಯ್ಯೋ ಉಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ..'ಎಂಬ ಕೂಗು ಇಂದಿಗೂ ನಮ್ಮ ನಾಡಿನಲ್ಲಿ ಕೇಳುತ್ತಲೇ ಇದೆ. ಆದರೆ, ವಿಶ್ವದಾದ್ಯಂತ ಇರುವ ಕ್ರಿಕೆಟ್‌ ಪ್ರಿಯರು 'ಗೋ ಗೋ ರೇನ್‌ ಅವೇ...'ಇಂಗ್ಲೆಂಡ್‌ನಲ್ಲಿ ಮಳೆಯ ಸುಳಿವೂ ಸುಳಿಯದಿರಲಿ ಎಂದು ಬೇಡುತ್ತಿದ್ದಾರೆ. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಿರುವ ಐಸಿಸಿ ಸಂಸ್ಥೆಗೆಸಾಮಾಜಿಕ ಮಾಧ್ಯಮಗಳಲ್ಲಿಟ್ರೋಲ್‌ಗಳ ಮೂಲಕ ಕಾಲೆಳೆದು ಶಪಿಸುತ್ತಿದ್ದಾರೆ. ಈವರೆಗೆ ಟೂರ್ನಿಯ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ.

ಮಳೆ ನಿಂತು ಹೋದ ಮೇಲೂ ಪಂದ್ಯ ಶುರುವಾಗಲು ಸಾಧ್ಯವೇ ಇರದ ಪರಿಸ್ಥಿತಿ ಇಂಗ್ಲೆಂಡ್‌ನ ಅಂಗಳಗಳಲ್ಲಿದೆ. ಮೈದಾನದ ಪೂರ್ಣ ಭಾಗವನ್ನು ಬೃಹತ್‌ ಕವರ್‌ಗಳಿಂದ ಇಲ್ಲಿ ಮುಚ್ಚಲಾಗುವುದಿಲ್ಲ. ಪಿಚ್‌ ಹಾಗೂ ಸ್ಕ್ವೇರ್‌ ಭಾಗಕ್ಕಷ್ಟೇ ಮಳೆಯ ಸುರಿಯುವಿಕೆಯಿಂದ ರಕ್ಷಿಸಿಕೊಳ್ಳುವ ಅವಕಾಶ. ಮೈದಾನದ ಉಳಿದ ಭಾಗದಲ್ಲಿರುವ ತೇವಾಂಶ ಹೀರಲು ಉರಿಯುವ ಬಿಸಿಲು ಬೀಳುವುದಿಲ್ಲ, ಜೋರು ಗಾಳಿಯೂ ಇಲ್ಲ. ಹಾಗಾಗಿ, ಮೈದಾನದ ತೇವ ಬೇಗ ಹೀರುವುದಿಲ್ಲ...ಆಟ ನಡೆಯುವುದೂ ಇಲ್ಲ.

ಜೂನ್‌ನಿಂದ ಆಗಸ್ಟ್‌ ವರೆಗೂ ಇಲ್ಲಿ ಬೇಸಿಗೆ ಕಾಲ. ಸೂರ್ಯನ ಹೊಳಪಿಗೆ ಮಳೆಯ ಕಾರ್ಮೋಡ ಆಗಾಗ್ಗೆ ಮರೆ ಮಾಡುವುದು ಇಲ್ಲಿ ಸಹಜ. ಬದಲಾಗುತ್ತಲೇ ಇರುವ ಇಲ್ಲಿನ ವಾತಾವರಣದ ಬಗೆಗಿನ ಅರಿವು ಐಸಿಸಿಗೆ ಇರಲಿಲ್ಲವೇ, ಮಹೇಂದ್ರ ಸಿಂಗ್‌ ಧೋನಿ ಧರಿಸುವ ಗ್ಲೌಸ್‌ ಬಗ್ಗೆ ಕ್ಷಿಪ್ರ ಆದೇಶ ಪ್ರಕಟಿಸುವ ಐಸಿಸಿಗೆ ಪಂದ್ಯ ಆಯೋಜನೆಯಲ್ಲಿ ಎಡವಿರುವುದು ಏಕೆ? ಎಂದು ಕ್ರಿಕೆಟ್‌ ಪ್ರಿಯರು ಪ್ರಶ್ನಿಸುತ್ತಿದ್ದಾರೆ.

ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಲೋಗೊಗೆ ಕೊಡೆಯ ಚಿತ್ರವನ್ನು ಸೇರಿಸಿ ಕ್ರಿಕೆಟ್‌ ಅಭಿಮಾನಿಗಳನ್ನು ಮಳೆಯಲ್ಲಿ ತೋಯಿಸುತ್ತಿರುವುದಾಗಿ ಸಾರುತ್ತಿದ್ದಾರೆ. ಮಳೆ, ಮೈದಾನದ ತೇವಾಂಶ ಆಟದ ಮೇಲೆ ಬಹುವಾಗಿ ಪರಿಣಾಮ ಬೀರುತ್ತದೆ. ಎಲ್ಲ ತಿಳಿದಿದ್ದರೂ ಮಳೆಯ ನಾಡನ್ನು ಟೂರ್ನಿಗೆ ಆಯ್ಕೆ ಮಾಡಿರುವುದು ಏಕೆ? ಕ್ರಿಕೆಟ್‌ ಆಸಕ್ತರ ಸಮಯ ಮತ್ತು ಹಣ ವ್ಯರ್ಥ ಮಾಡುತ್ತಿರುವಿರಿ ಎಂದು ಟ್ವಿಟರ್‌ನಲ್ಲಿ ಹಲವರು ಕಿಡಿ ಕಾರುತ್ತಿದ್ದಾರೆ.

ಮಳೆ ಬಂದು ಪಂದ್ಯ ಅರ್ಧಕ್ಕೆ ನಿಂತರೆ ಅಥವಾ ಆಟ ಆರಂಭವೇ ಆಗದಿದ್ದರೂ ಪಂದ್ಯ ನಿಗದಿಯಾಗಿದ್ದ ತಂಡಗಳಿಗೆ ಅಂಕ ಹಂಚಿಕೆ ಮಾಡಲಾಗುತ್ತದೆ. ಒಂದೊಂದು ಅಂಕ ಹಂಚುವ ಬದಲು ವಿಶ್ವಕಪ್‌ ಟ್ರೋಫಿಯನ್ನೇ ಸಮವಾಗಿ ಚೂರು ಚೂರು ಮಾಡಿ ಎಲ್ಲ ತಂಡಗಳಿಗೂ ಹಂಚಿಬಿಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ರದ್ದಾಗಿ ಹಂಚಿಕೆಯಾದ ಅಂಕಗಳಿಂದಾಗಿಯೇ ಶ್ರೀಲಂಕಾ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.ನಾಲ್ಕು ಪಂದ್ಯಗಳ ಪೈಕಿ ಶ್ರೀಲಂಕಾ ಒಂದರಲ್ಲಿ ಸೋತು, ಒಂದು ಪಂದ್ಯದಲ್ಲಷ್ಟೇ ಗೆಲುವು ಪಡೆದಿದ್ದರೂ ನಾಲ್ಕು ಅಂಕಗಳನ್ನು ಹೊಂದಿದೆ.

ಒಂದೂ ‍ಪಂದ್ಯದಲ್ಲಿ ಜಯ ಕಾಣದ ದಕ್ಷಿಣ ಆಫ್ರಿಕಾ ತಂಡವು ಅಫ್ಗಾನಿಸ್ತಾನಕ್ಕಿಂತ ಮೇಲಿನ ಸ್ಥಾನ ಪಡೆಯಲು ಮಳೆಯೇ ಮೂಲವಾಗಿದೆ.ಬಾಂಗ್ಲಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್‌ ತಲಾ ಒಂದು ಅಂಕಗಳನ್ನು ತಮ್ಮ ಖಾತೆಗೆ ಪಡೆದಿವೆ.

ಭಾರತ–ನ್ಯೂಜಿಲೆಂಡ್‌ ನಡುವಿನ ಪಂದ್ಯ ಸೇರಿ ಟೂರ್ನಿಯ ನಾಲ್ಕು ಪಂದ್ಯಗಳು ಮಳೆಗೆ ಬಲಿಯಾಗಿವೆ. ತೀವ್ರ ಪೈಪೋಟಿ ನಿರೀಕ್ಷಿಸಲಾಗಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಂಗಳದಲ್ಲಿ ಬಿಡಿಸಿಕೊಳ್ಳಲೇ ಇಲ್ಲ. ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್ ಪಂದ್ಯಗಳು ಮುಂದುವರಿಯಲಿಲ್ಲ. ಬಾಂಗ್ಲಾದೇಶ–ಶ್ರೀಲಂಕಾ ಪಂದ್ಯ ಸಹ ನಿಲ್ಲದ ಮಳೆಯ ಕಾರಣದಿಂದಾಗಿ ರದ್ದಾಯಿತು. ಕ್ರಿಕೆಟ್ ಅಭಿಮಾನಿಗಳ ಪಾಲಿನ ಹೈವೋಲ್ಟೇಜ್‌ ಮ್ಯಾಚ್‌; ಭಾರತ–ಪಾಕಿಸ್ತಾನ ಪಂದ್ಯ ಜೂನ್‌ 16(ಭಾನುವಾರ) ನಿಗದಿಯಾಗಿದ್ದು, ಹವಾಮಾನ ಮುನ್ಸೂಚನೆಗಳ ಪ್ರಕಾರ ಅವತ್ತೂ ಸಹ ಮಳೆಯಾಗಲಿದೆ!

ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲವು ಪಡೆದು, ಒಂದು ಮಳೆಯ ಪಾಯಿಂಟ್‌ ಪಡೆದಿರುವ ಭಾರತ ಒಟ್ಟು 5 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜುಲೈ 6ರವರೆಗೂ ರೌಂಡ್‌ ರಾಬಿನ್‌ ಸುತ್ತಿನ ಪಂದ್ಯಗಳು ನಿಗದಿಯಾಗಿದೆ. ಆವರೆಗೂ ಇನ್ನೆಷ್ಟು ಪಂದ್ಯಗಳು ಮಳೆಗೆ ಬಲಿಯಾಗಲಿವೆ?ನಿಜ ಸಾಮರ್ಥ್ಯದ ಪ್ರದರ್ಶನವೇ ಆಗದೇ ಅಂಕಗಳಿಂದಲೇ ಮುಗಿಸಿಬಿಡುವ ದೊಡ್ಡ ಪರೀಕ್ಷೆಯಾಗಿದೆಯೇ ವಿಶ್ವಕಪ್‌ ಕ್ರಿಕೆಟ್‌?ಹಂಚಿಕೆಯಾಗುವ ಅಂಕಗಳಿಂದ ಪಟ್ಟಿಯಲ್ಲಿ ಉಂಟಾಗುವ ವ್ಯತ್ಯಾಸ ತಂಡಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಪಂದ್ಯಗಳನ್ನು ಆಡದೆಯೇ ಹಂಚಿಕೆಯಾದ ಮಳೆಯ ಅಂಕಗಳಿಂದಲೇ ಸೆಮಿಫೈನಲ್‌ ಪ್ರವೇಶಿಸುವ ಲಾಭ ಯಾರಿಗೆ?..., ಹೀಗೆ ಮುಗಿಯದಷ್ಟು ಪ್ರಶ್ನೆಗಳು ಐಸಿಸಿ ಮುಂದಿವೆ.

ವೆಸ್ಟ್ ಇಂಡೀಸ್‌–ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ, ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಮಳೆಯನ್ನು ಮರಳಿ ಹೋಗುವಂತೆ ಕೋರಿ ಟ್ವೀಟಿಸಿದ್ದರು. ‘ಮಳೆಯೇ ಮತ್ತೊಮ್ಮೆ ಬರುವಿಯಂತೆ ನೀನು ಹೊರಡು, ವೆಸ್ಟ್ ಇಂಡೀಸ್‌–ದಕ್ಷಿಣ ಆಫ್ರಿಕಾ ಆಟ ಆಡಬೇಕಿದೆ; ಮಳೆಯೇ ಹೊರಡು...’ ಎಂಬ ಸಾಲುಗಳಿಂದ ಮಳೆ ಮತ್ತು ಕ್ರಿಕೆಟ್‌ ಕಾತುರತೆಯನ್ನು ಸಾರಿದ್ದರು.

ಕ್ರೀಡಾಭಿಮಾನಿಗಳ ಟ್ವೀಟ್‌ಗಳು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT