ಬುಧವಾರ, ಏಪ್ರಿಲ್ 21, 2021
25 °C
ವಿಶ್ವಕಪ್‌ ಕ್ರಿಕೆಟ್‌

ಮ್ಯಾಥ್ಯೂಸ್‌ ಶತಕ, ತಿರಿಮನ್ನೆ ಉತ್ತಮ ಆಟ; ಭಾರತಕ್ಕೆ 265 ರನ್‌ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಡಿಂಗ್ಲೆ, ಲೀಡ್ಸ್‌: ಈಗಾಗಲೇ ಸೆಮಿಫೈನಲ್‌ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಶನಿವಾರ ಶ್ರೀಲಂಕಾ ಎದುರು ಔಪಚಾರಿಕೆ ಪಂದ್ಯವಾಡುತ್ತಿದೆ. ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಬೂಮ್ರಾ ಬಹುಬೇಗ ಎರಡು ವಿಕೆಟ್‌ ಕಬಳಿಸುವ ಮೂಲಕ ಶ್ರೀಲಂಕಾಗೆ ಆಘಾತ ನೀಡಿದರು.

ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 264 ರನ್‌ ಗಳಿಸಿತು. ಸಂಕಷ್ಟದಲ್ಲಿದ್ದ ತಂಡಕ್ಕೆ ಲಾಹಿರು ತಿರಿಮನ್ನೆ(53) ಮತ್ತು ಏಂಜೆಲೊ ಮ್ಯಾಥ್ಯೂಸ್‌(113) ತಾಳ್ಮೆಯ ಜತೆಯಾಟ ನೆರವಾಯಿತು. 55 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ಮ್ಯಾಥ್ಯೂಸ್‌ ಮತ್ತು ತಿರಿಮನ್ನೆ ಪ್ರದರ್ಶನದಿಂದಾಗಿ ರನ್‌ ಗಳಿಕೆ ಉತ್ತಮ ಪಡಿಸಿಕೊಂಡಿತು. ಮ್ಯಾಥ್ಯೂಸ್‌ ಎರಡು ಸಿಕ್ಸರ್‌, 10 ಬೌಂಡರಿ ಒಳಗೊಂಡ ಶತಕ ಸಿಡಿಸಿದರು.  

ಕ್ಷಣಕ್ಷಣದ ಸ್ಕೋರ್: https://bit.ly/2FYevjH

ಅವಿಷ್ಕಾ ಫರ್ನಾಂಡೊ ಮತ್ತು ಕುಶಾಲ ಮೆಂಡಿಸ್‌ ಕಣದಲ್ಲಿದ್ದಾರೆ. ನಾಯಕ ದಿಮುತ್‌ ಕರುಣಾರತ್ನೆ(10) ಬಿರುಸಿನ ಆಟ ಶುರು ಮಾಡುವ ಮುನ್ನವೇ ಜಸ್‌ಪ್ರೀತ್‌ ಬೂಮ್ರಾ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 3 ಬೌಂಡರಿ ಬಾರಿಸಿ ಉತ್ತಮ ಆಟವಾಡುತ್ತಿದ್ದ ಕುಶಾಲ ಪೆರೆರಾ(18) ಸಹ ಬೂಮ್ರಾ ಮೋಡಿಗೆ ಸಿಲುಕಿದರು. ಏಕದಿನ ಪಂದ್ಯಗಳಲ್ಲಿ ಬಹಳ ಬೇಗ 100 ವಿಕೆಟ್‌ ಕಬಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಬೂಮ್ರಾ ಪಾತ್ರರಾದರು.

ಈ ಟೂರ್ನಿಯ ಮೊದಲ ಪಂದ್ಯ ಆಡುತ್ತಿರುವ ರವೀಂದ್ರ ಜಡೇಜಾ ತನ್ನ ಮೊದಲ ಓವರ್‌ನ 4ನೇ ಎಸೆತದಲ್ಲಿಯೇ ಕುಶಾಲ ಮೆಂಡಿಸ್‌(3) ವಿಕೆಟ್‌ ಪಡೆಯುವ ಮೂಲಕ ಭರ್ಜರಿ ಆರಂಭ ಮಾಡಿದರು. ಲಯ ಕಂಡುಕೊಂಡಿದ್ದ ಅವಿಷ್ಕಾ ಫರ್ನಾಂಡಿಸ್‌(21) ಹಾರ್ದಿಕ್ ಪಾಂಡ್ಯ ಹಾಕಿದ ನಿಧಾನದ ಗತಿಯ ಬೌನ್ಸರ್‌ನಲ್ಲಿ ಕ್ಯಾಚ್‌ ನೀಡಿ ಹೊರ ನಡೆದರು. ಅರ್ಧ ಶತಕ ಗಳಿಸಿದ್ದ ತಿರಿಮನ್ನೆ ಕುಲದೀಪ್‌ ಯಾದವ್‌ ಎಸೆತದಲ್ಲಿ ಆಟ ಮುಗಿಸಿದರು. 

ಉತ್ತಮ ಆಟ ಆಡಿದ ಮ್ಯಾಥ್ಯೂಸ್‌ 48ನೇ ಓವರ್‌ನಲ್ಲಿ ಬೂಮ್ರಾಗೆ ವಿಕೆಟ್‌ ನೀಡಿದರು. ಧನಂಜಯ ಡಿಸಿಲ್ವಾ(29) ತಾಳ್ಮೆಯ ಆಟದಿಂದ ತಂಡ 250ರ ಗಡಿ ದಾಟಿತು.

ಬೂಮ್ರಾ ಮೂರು ವಿಕೆಟ್‌, ಪಾಂಡ್ಯ, ಕುಲದೀಪ್‌ ಯಾದವ್‌, ಭುವನೇಶ್ವರ್‌ ಹಾಗೂ ಜಡೇಜಾ ತಲಾ 1 ವಿಕೆಟ್‌ ಪಡೆದರು. 

ಉಭಯ ತಂಡಗಳಿಗೆ ಇದು ವಿಶ್ವಕಪ್‌ ಟೂರ್ನಿಯ ಕೊನೆಯ ಪಂದ್ಯವಾಗಿದ್ದು, ಲಂಕಾ ಗೆಲುವಿನೊಂದಿಗೆ ಆಟ ಮುಗಿಸುವ ವಿಶ್ವಾಸದಲ್ಲಿದೆ. ಭಾರತ ಕೆಲವು ಪ್ರಯೋಗಗಳಿಗೆ ಮುಂದಾಗಿದೆ. ಭಾರತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಮತ್ತು ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ಗೆ ವಿಶ್ರಾಂತಿ ನೀಡಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ಗೆ ಅವಕಾಶ ನೀಡಲಾಗಿದೆ. 

ಇದನ್ನೂ ಓದಿ: ಸೆಮಿಫೈನಲ್‌ಗೆ ನ್ಯೂಜಿಲೆಂಡ್‌, ಪಾಕಿಸ್ತಾನದ ಕನಸು ಭಗ್ನ; ಭಾರತದ ಎದುರಾಳಿ ಯಾರು?

ಹಿಂದೆ ಶಿಖರ್‌ ಧವನ್‌ಗೆ ಪೆಟ್ಟಾದಾಗ, ಭುವನೇಶ್ವರ ಹಾಗೂ ರಾಹುಲ್‌ ಗಾಯಗೊಂಡಾಗ ಅವರ ಬದಲು ಫೀಲ್ಡಿಂಗ್‌ ನಡೆಸಿದ್ದ ಜಡೇಜಾ ಉತ್ತಮ ಕ್ಷೇತ್ರ ರಕ್ಷಣೆಯ ಮೂಲಕ ಗಮನ ಸೆಳೆದಿದ್ದರು. ಶ್ರೀಲಂಕಾ ಪರ ತಿಸಾರಾ ಪೆರೆರಾ ಮತ್ತೆ ತಂಡಕ್ಕೆ ಮರಳಿದ್ದಾರೆ. 

 ಶ್ರೀಲಂಕಾ ವಿರುದ್ಧ ಭಾರತ ಗೆಲುವು ಸಾಧಿಸಿ, ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಸೋತರೆ; ಭಾರತ 15 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಕೂಡ ಗೆಲುವು ಕಂಡರೆ, ಕಾಂಗರೂ ಪಡೆಯೇ ಮೊದಲ ಸ್ಥಾನದಲ್ಲಿ ಉಳಿಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು