ಗುರುವಾರ , ಸೆಪ್ಟೆಂಬರ್ 23, 2021
21 °C

1 ಎಸೆತ 22 ರನ್‌, ಚೋಕರ್‌ ಪಟ್ಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಡಿದ ಮೊದಲ ವಿಶ್ವಕಪ್‌ನಲ್ಲೇ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಪ್ರವೇಶಿಸಿತು. ಆದರೆ, ಮಳೆಯಿಂದಾಗಿ ಈ ತಂಡದ ಅದೃಷ್ಟ ಕೈಕೊಟ್ಟಿತು. ಒಂದು ಎಸೆತದಲ್ಲಿ 22 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಅಲ್ಲಿಂದಲ್ಲೇ ಈ ತಂಡಕ್ಕೆ ಚೋಕರ್‌ ಪಟ್ಟ ಲಭಿಸಿತು. ವಿಶ್ವಕಪ್‌ ಟೂರ್ನಿಯಲ್ಲಿ ಪದೇಪದೇ ಅದೃಷ್ಟ ಕೈಕೊಡುತ್ತಿದೆ.

* ಅದು ಮಾರ್ಚ್ 22, 1992; ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 45 ಓವರ್‌ಗಳಲ್ಲಿ 6 ವಿಕೆಟ್‌ಗೆ252 ರನ್‌ ಗಳಿಸಿತು. ದಕ್ಷಿಣ ಆಫ್ರಿಕಾ ತಂಡದವರು 253 ರನ್‌ಗಳ ಗುರಿ ಬೆನ್ನಟ್ಟಿದಾಗ ಮಳೆ ಅಡ್ಡಿಯಾಯಿತು. ಆ ಸಂದರ್ಭದಲ್ಲಿ ಈ ತಂಡದ ಗೆಲುವಿಗೆ 13 ಎಸೆತಗಳಲ್ಲಿ 22ರನ್ ಬೇಕಿತ್ತು. ಮಳೆಯಿಂದಾಗಿ ಪಂದ್ಯಕ್ಕೆ 12 ನಿಮಿಷ ಅಡಚಣೆ ಉಂಟಾಯಿತು. ಹೀಗಾಗಿ, 2 ಓವರ್‌ಗಳು ನಷ್ಟವಾದವು. ಆಗ ಎಲ್ಲ ಅಚ್ಚರಿಯಿಂದ ಸ್ಕೋರ್‌ ಬೋರ್ಡ್‌ನತ್ತ ಕಣ್ಣು ನೆಟ್ಟಿದ್ದರು. ಆಗಲೇ ದಕ್ಷಿಣ ಆಫ್ರಿಕಾಕ್ಕೆ ದೊಡ್ಡ ಆಘಾತ ಎದುರಾಯಿತು. 1ಎಸೆತದಲ್ಲಿ 22 ರನ್‌ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಇಂಗ್ಲೆಂಡ್‌ ತಂಡದವರು ಮೂರನೇ ಬಾರಿ ಫೈನಲ್‌ ತಲುಪಿದರು.

* ದಕ್ಷಿಣ ಆಫ್ರಿಕಾ ತಂಡಕ್ಕೆ ‘ಚೋಕರ್‌’ ಪಟ್ಟ ಲಭಿಸಿತು. ಆದರೆ, ಪರಿಷ್ಕೃತ ಗುರಿ ಭಾರಿ ಟೀಕೆ ಹಾಗೂ ವಿವಾದಕ್ಕೆ ಗುರಿಯಾಯಿತು. ಬೋರ್ಡ್‌ನಲ್ಲಿ ಕಂಡ ‘1 ಎಸೆತ 22 ರನ್‌’ ಎಂಬ ದೃಶ್ಯ ಕ್ರೀಡಾಭಿಮಾನಿಗಳ ಸ್ಮೃತಿಪಟಲದಲ್ಲಿ ಮರೆಯಾ ಗದೇ ಈಗಲೂ ಉಳಿದುಕೊಂಡಿದೆ.

* ವ್ಯಾಪಕ ಟೀಕೆ ವ್ಯಕ್ತವಾದ ಕಾರಣ ಹಳೆಯ ನಿಯಮವನ್ನು ರದ್ದುಗೊಳಿಸಿ ಡಕ್ವರ್ಥ್‌ ಲೂಯಿಸ್‌ ನಿಯಮ ಜಾರಿಗೆ ತರಲಾಯಿತು. ಆಕಸ್ಮಾತ್‌ ಆಗಲೇ ಈ ನಿಯಮ ಜಾರಿಯಲ್ಲಿ ಇದ್ದಿದ್ದರೆ ಒಂದು ಎಸೆತದಲ್ಲಿ ಟೈಗೆ 4 ರನ್‌, ಗೆಲ್ಲಲು 5 ರನ್‌ ಬೇಕಾಗಿರುತಿತ್ತು.

* ಪಾಕಿಸ್ತಾನ ಪಾಲಿಗೆ ಮಾತ್ರ ಈ ವಿಶ್ವಕಪ್‌ ಅದೃಷ್ಟದ ಗಣಿ. ಏಕೆಂದರೆ ಲೀಗ್ ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ74 ರನ್‌ಗಳಿಗೆ ಆಲೌಟಾಗಿತ್ತು. ಆದರೆ, ಮಳೆಯ ಕಾರಣ ಆ ಪಂದ್ಯ ರದ್ದಾಯಿತು. ಆಕಸ್ಮಾತ್‌ ಆ ಪಂದ್ಯದಲ್ಲಿ ಸೋತಿದ್ದರೆಪಾಕ್‌ ಬಳಗದ ವಿಶ್ವಕಪ್‌ ಕನಸು ನುಚ್ಚುನೂರಾಗುತಿತ್ತು.

* ಲೀಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಸೆಮಿಫೈನಲ್‌ ತಲುಪಿದ್ದ ಇಮ್ರಾನ್ ಖಾನ್‌ ಪಡೆಗೆ ಎದುರಾಗಿದ್ದು ಆತಿಥೇಯ ನ್ಯೂಜಿಲೆಂಡ್‌. ಅಂದ ಹಾಗೆ, ಕಿವೀಸ್‌ ಪಡೆ ಎದುರು ಲೀಗ್‌ನಲ್ಲಿ ಪಾಕ್‌ ಗೆಲುವು ಸಾಧಿಸಿತ್ತು. ಆ ಗೆಲುವೇ ನಾಲ್ಕರ ಘಟ್ಟದ ಪಂದ್ಯಕ್ಕೂ ಸ್ಫೂರ್ತಿ ತುಂಬಿದಂತಿತ್ತು.

* ಮಾರ್ಚ್‌ 21ರಂದು ಆಕ್ಲೆಂಡ್‌ನ ಈಡನ್‌ ಪಾರ್ಕ್‌ ಕ್ರೀಡಾಂಗಣ ಭರ್ತಿಯಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಈ ತಂಡದವರು 262 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿದರು. ನಾಯಕ ಮಾರ್ಟಿನ್ ಕ್ರೋವ್‌ 91 ರನ್‌ ಗಳಿಸಿದ್ದರು. ಆದರೆ, ಇಂಜಮಾಮ್‌ ಉಲ್‌ ಹಕ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. 37 ಎಸೆತಗಳಲ್ಲಿ 60 ರನ್‌ ಚಚ್ಚಿದರು. ಇನ್ನೂ ಒಂದು ಓವರ್‌ ಇರುವಾಗಲೇ ಪಾಕ್ ತಂಡದವರು ಜಯಭೇರಿ ಮೊಳಗಿಸಿದರು. 

* ಇದರೊಂದಿಗೆ ಆತಿಥೇಯ ರಾಷ್ಟ್ರಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ವಿಶ್ವಕಪ್‌ನಿಂದ ಹೊರಬಿದ್ದವು. ಇತ್ತ ಪಾಕಿಸ್ತಾನ ಹಾಗೂ ಇಂಗ್ಲೆಂಡ್‌ ತಂಡಗಳು ಫೈನಲ್‌ನಲ್ಲಿ ಸೆಣಸಲು ಮೆಲ್ಬರ್ನ್ ಕ್ರಿಕೆಟ್‌ ಅಂಗಳದತ್ತ ಹೆಜ್ಜೆ ಇಟ್ಟವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು