ಭಾನುವಾರ, ಮೇ 22, 2022
21 °C

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ತಂಡ ನಿರ್ಧರಿಸಲಿರುವ ಭಾರತ vs ಇಂಗ್ಲೆಂಡ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ಕಾರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಇದರೊಂದಿಗೆ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ನಡೆಯಲಿರುವ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. ಮುಂಬರುವ ತವರಿನಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.

ಈಗಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಂತೆ ಶೇಕಡಾ 71.7ರಷ್ಟು ಅಂಕ ಕಾಯ್ದುಕೊಂಡಿರುವ ಭಾರತ ಅಗ್ರಸ್ಥಾನದಲ್ಲಿದೆ. ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿರುವ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಅನುಕ್ರಮವಾಗಿ 70.0%, 69.2% ಮತ್ತು 68.7% ಅಂಕವನ್ನು ಹೊಂದಿದೆ.

ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಫೈನಲ್ ಪ್ರವೇಶಿಸುವ ಆಸ್ಟ್ರೇಲಿಯಾ ಸಾಧ್ಯತೆಯು ಕ್ಷೀಣಿಸಿದೆ. ಇದು ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ಗೆ ವರದಾನವಾಗಿದ್ದು, ಬಹುತೇಕ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ. ಹಾಗಾಗಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯಲಿರುವ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ನಿರ್ಣಾಯಕವೆನಿಸಲಿದ್ದು, ಫೈನಲ್‌ಗೆ ಯಾರು ಪ್ರವೇಶಿಸಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.

ಇದನ್ನೂ ಓದಿ: 

ಫೈನಲ್‌ ಪ್ರವೇಶಿಸಲು ಭಾರತ ಏನು ಮಾಡಬೇಕು?
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಿಸಲು ಆಸ್ಟ್ರೇಲಿಯಾದ ಶೇಕಡವಾರು ಅಂಕವನ್ನು ಗುರಿಯಾಗಿಸಲಿದೆ. ಆಸ್ಟ್ರೇಲಿಯಾವನ್ನು ಮೀರಿಸಲು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ 70 ಅಂಕಗಳು ಬೇಕಾಗುತ್ತದೆ. ಇದರರ್ಥ ಕನಿಷ್ಠ 2-1ರ ಅಂತರದಲ್ಲಿ ಸರಣಿ ಗೆಲ್ಲಬೇಕಾಗುತ್ತದೆ. ಅಂದರೆ ಎರಡು ಗೆಲುವಿಗೆ ತಲಾ 30 ಅಂಕ ಮತ್ತು ಡ್ರಾ ಪಂದ್ಯಕ್ಕೆ 10 ಅಂಕಗಳನ್ನು ದೊರೆಯಲಿದೆ. 

ಇದಕ್ಕಿಂತಲೂ ಉತ್ತಮವಾದ 3-0, 3-1 ಅಥವಾ 4-0 ಸರಣಿ ಗೆಲುವುಗಳು ಭಾರತದ ಫೈನಲ್ ಹಾದಿಯನ್ನು ಸುಗಮಗೊಳಿಸಲಿದೆ.


ಈಗಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಇಂತಿದೆ (ಚಿತ್ರ ಕೃಪೆ: ಐಸಿಸಿ)

ಇಂಗ್ಲೆಂಡ್ ತಂಡ ಏನು ಮಾಡಬೇಕು?
ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾವನ್ನು ಮೀರಿಸಲು ಇಂಗ್ಲೆಂಡ್‌ಗೆ 87 ಅಂಕಗಳು ಬೇಕಾಗುತ್ತದೆ. ಅಂದರೆ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಆದರೆ ಭಾರತ ನೆಲದಲ್ಲಿ ಈ ಐತಿಹಾಸಿಕ ಸರಣಿ ಗೆಲುವು ಇಂಗ್ಲೆಂಡ್ ಪಾಲಿಗೆ ಕಷ್ಟಕರವೆನಿಸಲಿದೆ. ಯಾಕೆಂದರೆ ಭಾರತ ನೆಲದಲ್ಲಿ ಕೊನೆಯದಾಗಿ ಪ್ರವಾಸಿ ತಂಡವು ಸರಣಿಯೊಂದರಲ್ಲಿ ಮೂರು ಟೆಸ್ಟ್‌ಗಳನ್ನು ಗೆದ್ದಿರುವುದು 36 ವರ್ಷಗಳ ಹಿಂದೆ. 1983-84ನೇ ಸಾಲಿನಲ್ಲಿ ವೆಸ್ಟ್‌ಇಂಡೀಸ್ ಭಾರತ ನೆಲದಲ್ಲಿ ಮೂರು ಟೆಸ್ಟ್‌ಗಳನ್ನು ಜಯಿಸಿತ್ತು.

ಇದನ್ನೂ ಓದಿ: 

ಆಸ್ಟ್ರೇಲಿಯಾ ಫೈನಲ್ ಪ್ರವೇಶ ಸಾಧ್ಯತೆ ಹೇಗೆ?
ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂಜರಿದರೂ ಕೂಡಾ ಆಸ್ಟ್ರೇಲಿಯಾ ಸಂಪೂರ್ಣವಾಗಿ ರೇಸ್‌ನಿಂದ ಹೊರಬಿದ್ದಿಲ್ಲ. ಭಾರತ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಸರಣಿಯಲ್ಲಿ ನಿಧಾನಗತಿಯ ಓವರ್‌ರೇಟ್‌ಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳ ದಂಡ ಎದುರಿಸಿರುವ ಆಸ್ಟ್ರೇಲಿಯಾವು ಇದಕ್ಕಾಗಿ ದೊಡ್ಡ ಬೆಲೆ ತೆರಬೇಕಾಗಿ ಬಂದಿದೆ.

ಕಾಕತಾಳೀಯವೆಂಬಂತೆ ಆಸೀಸ್ ಫೈನಲ್ ಪ್ರವೇಶಿಸಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳ ಸಹಾಯ ಪಡೆಯಬೇಕಿದೆ. ಉಭಯ ತಂಡಗಳು ಸರಣಿಯ ಬಳಿಕ ಶೇಕಡಾವಾರು ಅಂಕಗಳನ್ನು ಆಸೀಸ್‌ಗಿಂತಲೂ ಕಡಿಮೆ ರೀತಿಯಲ್ಲಿ ಹಂಚಿಕೊಂಡರೆ, ಕಾಂಗರೂ ಪಡೆ ಫೈನಲ್ ಪ್ರವೇಶಿಸಲಿದೆ. ಅಂದರೆ ಇಂಗ್ಲೆಂಡ್ ತಂಡವು ಸರಣಿಯನ್ನು 1-0, 2-0, 2-1 ಮತ್ತು ಭಾರತ ತಂಡವು 1-0 ಅಂತರದಿಂದ ಗೆದ್ದರೂ ಆಸ್ಟ್ರೇಲಿಯಾ ತಂಡವು ಫೈನಲ್‌ಗೆ ಪ್ರವೇಶಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು