ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಫಾಲಿ, ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್; ಆರ್‌ಸಿಬಿಗೆ ಬೃಹತ್ ಗುರಿ ನೀಡಿದ ಡೆಲ್ಲಿ

Last Updated 5 ಮಾರ್ಚ್ 2023, 11:48 IST
ಅಕ್ಷರ ಗಾತ್ರ

ಮುಂಬೈ: ಆರಂಭಿಕ ಆಟಗಾರ್ತಿಯರಾದ ಶೆಫಾಲಿ ವರ್ಮಾ ಹಾಗೂ ಮೆಗ್‌ ಲ್ಯಾನಿಂಗ್‌ ತೋರಿದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಗೆಲುವಿಗೆ 224 ರನ್‌ಗಳ ಬೃಹತ್‌ ಗುರಿ ನೀಡಿದೆ.

ಇಲ್ಲಿನ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಆದರೆ, ಅವರ ನಿರ್ಧಾರವನ್ನು ಸಮರ್ಥಿಸುವಲ್ಲಿ ಬೌಲರ್‌ಗಳು ವಿಫಲರಾದರು.

ಡೆಲ್ಲಿ ಪರ ಇನಿಂಗ್ಸ್‌ ಆರಂಭಿಸಿದ ಶೆಫಾಲಿ ಹಾಗೂ ನಾಯಕಿ ಲ್ಯಾನಿಂಗ್‌ ಆರ್‌ಸಿಬಿಯ ಎಲ್ಲ ಬೌಲರ್‌ಗಳನ್ನು ಲೀಲಾಜಾಲವಾಗಿ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 14.3 ಓವರ್‌ಗಳಲ್ಲಿ 162 ರನ್‌ ಕಲೆಹಾಕಿತು. 45 ಎಸೆತಗಳನ್ನು ಎದುರಿಸಿದ ಶೆಫಾಲಿ 10 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಹಿತ 84 ರನ್‌ ಚಚ್ಚಿದರು. ಅವರಿಗೆ ಉತ್ತಮ ನೆರವು ನೀಡಿದ ಲ್ಯಾನಿಂಗ್‌ 43 ಎಸೆತಗಳಲ್ಲಿ 73 ರನ್‌ ಬಾರಿಸಿ ಮಿಂಚಿದರು.

ಕೊನೆಯಲ್ಲಿ ಗುಡುಗಿದ ಮೆರಿಜನ್‌ ಕಾಪ್‌ (ಅಜೇಯ 39 ರನ್‌) ಹಾಗೂ ಜೆಮಿಮಾ ರಾಡ್ರಿಗಸ್‌ (ಅಜೇಯ 22 ರನ್‌) ತಮ್ಮ ತಂಡದ ಮೊತ್ತವನ್ನು 220ರ ಗಡಿ ದಾಟಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 31 ಎಸೆತಗಳಲ್ಲಿ 60 ರನ್‌ ಚಚ್ಚಿದರು.

ಆಸ್ಟ್ರೇಲಿಯಾದ ಮೇಗನ್‌ ಶುಟ್‌ 4 ಓವರ್‌ಗಳಲ್ಲಿ 45 ರನ್‌ ಬಿಟ್ಟುಕೊಟ್ಟರೆ, ನ್ಯೂಜಿಲೆಂಡ್‌ ಸೋಫಿ ಡಿವೈನ್‌ ಒಂದೇ ಓವರ್‌ನಲ್ಲಿ 20 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಇಂಗ್ಲೆಂಡ್‌ನ ಹೆಥರ್ ನೈಟ್‌ 3 ಓವರ್‌ಗಳಲ್ಲಿ 40 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಉಳಿದ ಯಾರಿಗೂ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT