ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಬನಿ ‘ಯುವಿ’

Last Updated 13 ಜೂನ್ 2019, 20:00 IST
ಅಕ್ಷರ ಗಾತ್ರ

‘ಕ್ರಿಕೆಟ್ ನನಗೆ ಒಳ್ಳೆಯದನ್ನು ಮಾಡಿದೆ; ಕೆಟ್ಟದ್ದನ್ನೂ ಕೊಟ್ಟಿದೆ’ ಎಂಬ ಧಾಟಿಯಲ್ಲಿ ಯುವರಾಜ್ ಸಿಂಗ್ ಈಗ ಹೇಳುತ್ತಿರುವುದರ ಹಿಂದೆ ಅನುಭವದ ಹಲವು ಕಥೆಗಳು ಹುದುಗಿವೆ. ಈಗ ಅವರು ಬೂಟುಗಳನ್ನು ನೇತುಹಾಕಿದ್ದಾರೆ. ಬ್ಯಾಟನ್ನೂ ಬದಿಗಿರಿಸಿದ್ದಾರೆ. ಅವರಿನ್ನು ಕ್ರಿಕೆಟ್‌ ಆಡುವುದಿಲ್ಲ.

2012ರ ಮಾರ್ಚ್‌ನಲ್ಲಿ ಯುವರಾಜ್‌ ಮುಖದ ಆತಂಕದ ಗೆರೆಗಳು ಕಡಿಮೆಯಾದಾಗ ಅವರ ಆಪ್ತ ವಲಯದವರೆಲ್ಲ ನೆಮ್ಮದಿಯ ನಿಟ್ಟುಸಿರಿಟ್ಟಿದ್ದರು. ಖುದ್ದು ಯುವಿ ಕೂಡ ನಿರಾಳರಾಗಿದ್ದರು. ಅಮೆರಿಕದ ಇಂಡಿಯಾನಾಪೊಲೀಸ್‌ನ ಆಸ್ಪತ್ರೆಯಿಂದ ಕೊನೆಯ ಸುತ್ತಿನ ಕಿಮೋಥೆರಪಿ ಮುಗಿಸಿಕೊಂಡು ದೇಶಕ್ಕೆ ಮರಳಿದಾಗ ಅವರ ತಲೆಯನ್ನು ಮತ್ತೆ ಕ್ರಿಕೆಟ್ ಆಡಬೇಕೆಂಬ ಗುಂಗಿಹುಳ ಕೊರೆಯುತ್ತಿತ್ತು. ಅದನ್ನು ಅವರು ಸಾಕಾರವಾಗಿಸಿಕೊಂಡದ್ದು ದೊಡ್ಡ ಸ್ಫೂರ್ತಿ ಕಥನ. ಸೌರವ್‌ ಗಂಗೂಲಿ ತರಹದ ದಿಗ್ಗಜ ಆಟಗಾರರು ಕೂಡ ಅದನ್ನು ಅನುಮೋದಿಸಿದ್ದಾರೆ.

ಅಪ್ಪನ ಒತ್ತಾಸೆಗೆ ಮಣಿದು ಬಾಲ್ಯದಲ್ಲಿ ಒಲ್ಲದ ಮನಸ್ಸಿನಿಂದಲೇ ಕ್ರಿಕೆಟ್‌ ಬ್ಯಾಟ್‌ ಕೈಗೆತ್ತಿಕೊಂಡಿದ್ದವರು ಯುವರಾಜ್. ಬೆಳಿಗ್ಗೆ ಏಳಲು ಮನಸ್ಸಿಲ್ಲವೆಂದಾಗಲೆಲ್ಲ ಅಪ್ಪನೇ ಗದರಿ ಎಬ್ಬಿಸುತ್ತಿದ್ದುದು. ಮಗನನ್ನು ಶ್ರದ್ಧೆಯಿಂದ ಅವರು ತರಬೇತಿಗೆ ಕಳುಹಿಸಿದೇ ಹೋಗಿದ್ದರೆ ಈ ಯುವರಾಜ್‌ ನಮಗೆ ಸಿಗುತ್ತಲೇ ಇರಲಿಲ್ಲ.
ಅಪ್ಪ ಯೋಗರಾಜ್ ಸಿಂಗ್ ಖುದ್ದು ಕ್ರಿಕೆಟಿಗರಾಗಿದ್ದವರು. ತಾಯಿ ಶಬನಮ್ ಸಿಂಗ್‌ ರೋಲರ್‌ ಸ್ಕೇಟಿಂಗ್‌ನಲ್ಲಿ ಛಾಪು ಮೂಡಿಸಿದ್ದವರು. ಅಮ್ಮನ ಮುದ್ದಿನ ಮಗನಿಗೆ ಕೂಡ ರೋಲರ್‌ ಸ್ಕೇಟಿಂಗ್‌ ಪ್ರಾಯದವರೆಗೂ ಆಪ್ಯಾಯಮಾನವಾಗಿತ್ತು. ರಾಷ್ಟ್ರಮಟ್ಟದ, 14 ವರ್ಷದೊಳಗಿನವರ ರೋಲರ್‌ ಸ್ಕೇಟಿಂಗ್‌ನಲ್ಲಿ ಪದಕ ಗೆದ್ದು ಯುವಿ ಮನೆಗೆ ಬಂದರು. ಅಪ್ಪ ಆ ಪದಕವನ್ನು ಕಿತ್ತು ಎಸೆದಿದ್ದರು. ಕ್ರಿಕೆಟ್‌ ಮೇಲಷ್ಟೇ ಗಮನ ಇಡಬೇಕೆನ್ನುವ ತಾಕೀತು ಅವರದ್ದಾಗಿತ್ತು.

2011ರ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ಗೆದ್ದಾಗ ಯುವರಾಜ್‌ ಸಿಂಗ್‌ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. ಬಹುಶಃ ಮುಂದಿನ ವಿಶ್ವಕಪ್ ಪಂದ್ಯಗಳನ್ನು ದೂರದಿಂದಲೇ ನೋಡಬೇಕಾದೀತು ಎಂಬ ಆತಂಕ ಆಗ ಅವರಿಗೆ ಇದ್ದಿರಲಿಕ್ಕಿಲ್ಲ.

ಸಾಧನೆಉ ಆ ಸಂಭ್ರಮ ಮಾಸುವ ಮೊದಲೇ ಅವರಿಗೆ ಕ್ಯಾನ್ಸರ್‌ ಇದೆ ಎಂದು ಗೊತ್ತಾಯಿತು. ಮೊದ ಮೊದಲು ವೈದ್ಯರು ಸುಳ್ಳು ಹೇಳುತ್ತಿರಬೇಕು ಎಂದೇ ಯುವರಾಜ್ ಅಂದುಕೊಂಡರು. ಆಟದ ಅಭ್ಯಾಸ ನಿಲ್ಲಿಸಿ ಚಿಕಿತ್ಸೆ ಪಡೆಯುವಂತೆ ಕಟ್ಟುನಿಟ್ಟಾಗಿ ಸೂಚಿಸಿದರೂ ಕಿವಿಗೊಡಲಿಲ್ಲ. ಆದರೆ, ಬಹಳ ಬೇಗ ತಮ್ಮ ನಿರ್ಧಾರ ತಪ್ಪು ಎಂದು ಅವರಿಗೆ ಅರಿವಾಯಿತು. ಚಿಕಿತ್ಸೆ ಪಡೆದ ಮೇಲೆ ಮತ್ತೆ ಆಡಬಹುದಲ್ಲ ಎಂದು ಗಟ್ಟಿ ಮನಸ್ಸು ಮಾಡಿ, ಅಮೆರಿಕೆಗೆ ತೆರಳಿದರು.

ಶ್ರೀಲಂಕಾದಲ್ಲಿ 2012ರ ಸೆಪ್ಟೆಂಬರ್‌ನಲ್ಲಿ ನಡೆದ ಐಸಿಸಿ ಟ್ವೆಂಟಿ–20 ವಿಶ್ವಕಪ್‌ನಲ್ಲಿ 15 ಸಂಭವನೀಯ ಆಟಗಾರರಲ್ಲಿ ಒಬ್ಬರಾಗಿ ಆಯ್ಕೆಯಾದಾಗ ಯುವರಾಜ್‌ ಮರುಪ್ರವೇಶಕ್ಕೆ ವೇದಿಕೆ ಸಿಕ್ಕಂತಾಯಿತು. ಅದಕ್ಕೂ ಮೊದಲು ನ್ಯೂಜಿಲೆಂಡ್‌ ಎದುರು ಒಂದು ಚುಟುಕು ಕ್ರಿಕೆಟ್‌ ಆಡುವ ಅವಕಾಶ ಸಿಕ್ಕಿತ್ತು. 26 ಎಸೆತಗಳಲ್ಲಿ 34 ರನ್‌ ಗಳಿಸಿ ತಮ್ಮಲ್ಲಿ ಇನ್ನೂ ಸತ್ವವಿದೆ ಎಂದು ಆಗ ಸಾಬೀತುಪಡಿಸಿದರು. 2012ರ ಟಿ–20 ವಿಶ್ವಕಪ್‌ನಲ್ಲಿ ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳಲು ಅವರಿಗೆ ಆಗಲಿಲ್ಲ. ಆದರೆ, ಬೌಲಿಂಗ್‌ನಲ್ಲಿ ಮಿಂಚಿದರು. ಆ ಟೂರ್ನಿಯಲ್ಲಿ ಭಾರತದ ಪರ ಹೆಚ್ಚು ವಿಕೆಟ್‌ ಪಡೆದವರು ಅವರೇ. ಆಮೇಲೆ ಮತ್ತೆ ‘ಯುವಿ’ ಆಟಕ್ಕೆ ಕುದುರಿಕೊಳ್ಳಲು ಪರದಾಡಿದರು. 2013ರಲ್ಲಿ ಆಸ್ಟ್ರೇಲಿಯಾ ಎದುರು ಆಡುವ ಅವಕಾಶ ಒಲಿದುಬಂದಿತು. ಆಗ ನಡೆದ ಏಕೈಕ ಟ್ವೆಂಟಿ–20 ಪಂದ್ಯವನ್ನು ಅವರು ಗೆಲ್ಲಿಸಿಕೊಟ್ಟರು. ಕೇವಲ 35 ಎಸೆತಗಳಲ್ಲಿ 77 ರನ್‌ ದಾಖಲಿಸಿ ಅವರು ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡಿದ ಪಂದ್ಯ ಅದು.

ಈಗಲೂ ಯುವರಾಜ್‌ ಸಿಂಗ್‌ ಚುಟುಕು ಕ್ರಿಕೆಟ್‌ನಲ್ಲಿ ಫಾರ್ಮ್‌ ಉಳಿಸಿಕೊಳ್ಳುವ ಲಕ್ಷಣ ತೋರಿದ್ದಿದೆ. ಈ ವರ್ಷ ಐಪಿಲ್‌ನ ಮೊದಲ ಕೆಲವು ಪಂದ್ಯಗಳಲ್ಲಿ ಅವರ ಪಾದಚಲನೆ, ಚೆಂಡಿನ ಗತಿಯನ್ನು ಅಂದಾಜು ಮಾಡುತ್ತಿದ್ದ ರೀತಿ ನೋಡಿದರೆ ಇನ್ನಷ್ಟು ಇನಿಂಗ್ಸ್‌ಗಳಲ್ಲಿ ಆಡಬಲ್ಲ ಕಸುವು ಅವರಿಗೆ ಇದೆ ಎಂದೇ ಅನಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಅವರು 53 ರನ್‌ ಕಲೆಹಾಕಿದ್ದನ್ನು ಮೆಲುಕು ಹಾಕಬಹುದು.

ಭಾರತ ವಿಶ್ವಕಪ್‌ ಟೂರ್ನಿಯಲ್ಲಿ ಕನಸನ್ನು ಗಟ್ಟಿ ಮಾಡಿಕೊಳ್ಳುತ್ತಿರುವಾಗಲೇ ಯುವಿ ‘ಇನ್ನು ಆಡಿದ್ದು ಸಾಕು’ ಎಂದಿದ್ದಾರೆ. ಅವರು ಆಟ ನಿಲ್ಲಿಸಿದರೂ ಅದು ಉಳಿಸಿರುವ ನೆನಪುಗಳು ಕಾಡುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT