ಸೋಮವಾರ, ಮಾರ್ಚ್ 27, 2023
30 °C

ಮಹಿಳಾ ಮತ| ಲೈಂಗಿಕ ದೌರ್ಜನ್ಯದ ವಿರುದ್ಧ ‘ಕುಸ್ತಿ’

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಲೈಂಗಿಕ ಶೋಷಣೆ ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುತ್ತಿವೆ. ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ನಡೆದರೆ, ಮಠಾಧೀಶರೊಬ್ಬರು ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಇತ್ತೀಚೆಗೆ ಜೈಲು ಸೇರಿದ್ದಾರೆ. ಇದು ಕ್ರೀಡಾ ಕ್ಷೇತ್ರವನ್ನೂ ಬಿಟ್ಟಿಲ್ಲ. ಅದರ ವಿರುದ್ಧ ಖ್ಯಾತನಾಮ ಕುಸ್ತಿಪಟುಗಳು ತೊಡೆತಟ್ಟಿದ್ದಾರೆ

ಸಾಕ್ಷಿ ಮಲಿಕ್, ವಿನೇಶಾ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಕುಸ್ತಿ ಅಖಾಡದಲ್ಲಿ ಪದಕ ಗೆದ್ದು ಆನಂದಭಾಷ್ಪ ಸುರಿಸಿದ್ದನ್ನು ಭಾರತದ ಕುಸ್ತಿಪ್ರಿಯರು ಹಲವು ಬಾರಿ ನೋಡಿದ್ದಾರೆ. 

ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಕುಸ್ತಿಪಟುಗಳು ಬೇರೆಯದೇ ಕಾರಣಕ್ಕೆ ಕಣ್ಣೀರಿಟ್ಟಿದ್ದಾರೆ. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್  ಶರಣ್ ಸಿಂಗ್ ಕುರಿತು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಫೆಡರೇಷನ್‌ನಲ್ಲಿ ಅಧ್ಯಕ್ಷರು ಮತ್ತು ಕೆಲವು ತರಬೇತುದಾರರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆಂದು ವಿನೇಶಾ ಮತ್ತು ಕೆಲವು ಮಹಿಳಾಪಟುಗಳು ಆರೋಪಿಸಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಪ್ರತಿಭೆಗಳನ್ನು ತುಳಿಯುತ್ತಿದ್ದಾರೆ ಎಂದೂ ಬಜರಂಗ್ ಪೂನಿಯಾ ಸೇರಿ ಹಲವರು ದೂರಿದ್ದಾರೆ.

ನವದೆಹಲಿಯ ಜಂತರ್ ಮಂಥರ್‌ನಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಮೂರು ದಿವಸ ಧರಣಿ ನಡೆಸಿದ ಈ ಕುಸ್ತಿಪಟುಗಳಿಗೆ ಕೊನೆಗೂ ಮಣಿದ ಕೇಂದ್ರ ಕ್ರೀಡಾ ಇಲಾಖೆಯು ತನಿಖಾ ಸಮಿತಿ ರಚಿಸಲು ಮುಂದಾಗಿದೆ. ಬ್ರಿಜ್‌ಭೂಷಣ್ ಅವರನ್ನು ತಾತ್ಕಾಲಿಕವಾಗಿ ಪದಚ್ಯುತಗೊಳಿಸಲಾಗಿದೆ. ಕುಸ್ತಿಪಟುಗಳು ಧರಣಿ ಹಿಂತೆಗೆದುಕೊಂಡಿದ್ದಾರೆ. ಆದರೆ ಈ ಪ್ರಕರಣವು ತಾರ್ಕಿಕ ಅಂತ್ಯ ಕಾಣುವುದೇ ಅಥವಾ ಈ ಹಿಂದೆ ಬೇರೆ ಕ್ರೀಡೆಗಳಲ್ಲಿ ಇತ್ಯರ್ಥವಾಗದೇ ಉಳಿದ ಲೈಂಗಿಕ ಕಿರುಕುಳ ಪ್ರಕರಣಗಳ ಸಾಲಿಗೆ ಸೇರುವುದೇ ಎಂಬ ಅನುಮಾನವೂ ಮೂಡಿದೆ.

ಈ ಪ್ರಕರಣದಲ್ಲಿ ಬೀದಿಗಿಳಿದು ಆರೋಪ ಮಾಡಿದವರು ಸಾಮಾನ್ಯರಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವಿಜೇತರಾದ ವಿನೇಶಾ ಪೋಗಟ್, ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಟೋಕಿಯೊ ಒಲಿಂಪಿಕ್ಸ್ ಪದಕವಿಜೇತರಾದ ಬಜರಂಗ್ ಪೂನಿಯಾ, ರವಿ ದಹಿಯಾ, ಮಹಿಳಾ ಕುಸ್ತಿಪಟುಗಳಾದ ಬಬಿತಾ ಪೋಗಟ್, ಅನ್ಷು ಮಲಿಕ್ ಸೇರಿದಂತೆ ಸುಮಾರು 200 ಕುಸ್ತಿಪಟುಗಳು. ಇದು ಇಡೀ ವಿಶ್ವದ ಮಾಧ್ಯಮಗಳ ಗಮನ ಸೆಳೆಯಿತು. ದೇಶದ ಗೌರವಕ್ಕೆ ಧಕ್ಕೆಯಾಯಿತು ಎಂದು ಗೊತ್ತಿದ್ದರೂ ಕೇಂದ್ರ ಕ್ರೀಡಾ ಇಲಾಖೆ ತಕ್ಷಣ ಯಾಕೆ ಕ್ರಮಕ್ಕೆ ಮುಂದಾಗಲಿಲ್ಲ?  ‘ನಮ್ಮನ್ನು ನಂಬಿ. ನಾವು ಸುಳ್ಳು ಹೇಳುತ್ತಿಲ್ಲ. ನಮ್ಮ ಬಳಿ ಎಲ್ಲ ಸಾಕ್ಷ್ಯಾಧಾರಗಳಿವೆ’ ಎಂದು ವಿನೇಶಾ ಮತ್ತಿತರರು ಕೂಗಿ ಹೇಳಿದರೂ ತಕ್ಷಣಕ್ಕೆ ಯಾವುದೇ ಕ್ರಮ ಜರುಗಲಿಲ್ಲ. ಬದಲಿಗೆ ಪ್ರತಿಭಟನೆ ವಾಪಸ್ ‍ಪಡೆಯುವಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಕುಸ್ತಿಪಟುಗಳ ಮನವೊಲಿಸಲು ಹೆಚ್ಚು ಶ್ರಮಪಟ್ಟರು. ಪಿ.ಟಿ. ಉಷಾ ನೇತೃತ್ವದ ಭಾರತ ಒಲಿಂಪಿಕ್ ಸಂಸ್ಥೆಯು ಏಳು ಜನರ ತನಿಖಾ ಸಮಿತಿಯನ್ನು ಈಗಾಗಲೇ ರಚಿಸಿದೆ. ಹಾಗಿದ್ದರೂ ಕ್ರೀಡಾ ಇಲಾಖೆಯು ಮತ್ತೊಂದು ಸಮಿತಿ ರಚನೆಗೆ ಮುಂದಾಗಿದೆ.

ಪ್ರಭಾವಿ ಸಂಸದ: ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಉತ್ತರಪ್ರದೇಶದವರು. ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸಂಸದರೂ ಹೌದು. ಒಟ್ಟು ಆರು ಸಲ ಸಂಸದರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಟಾಡಾ ಕಾಯ್ದೆಯಡಿ ಬಂಧನಕ್ಕೂ ಒಳಗಾಗಿದ್ದರು.

ತತ್‌ಕ್ಷಣ ಕ್ರಮ ಜರುಗಿಸಿದರೆ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಕುಂದಬಹುದು ಎಂಬ ಆತಂಕವಿದೆ ಎಂಬ ಮಾತುಗಳೂ ಕೇಳಿಬಂದವು. ಆದರೆ, ‘ರಾಷ್ಟ್ರೀಯತೆ’ ಮತ್ತು ‘ಯುವಶಕ್ತಿಯಿಂದಲೇ ಅಭಿವೃದ್ಧಿ’ ಎಂಬುದಕ್ಕೆ ಒತ್ತು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಬ್ರಿಜ್‌ಭೂಷಣ್‌ ಅವರು ಪ್ರಭಾವಿಯಾಗಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಯಿತು ಎಂಬ ಆರೋಪವೂ ಇದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ  ಹಲವು ಕುಸ್ತಿಪಟುಗಳು ಬಿಜೆಪಿಯೊಂದಿಗೆ ಗುರುತಿಸಿಕೊಂಡವರು.

ಹಿನ್ನಡೆಯ ಆತಂಕ?: ಒಲಿಂಪಿಕ್ ಕೂಟದ ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ ಭಾರತಕ್ಕೆ ಹಾಕಿ ಕ್ರೀಡೆ ಬಿಟ್ಟರೆ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಟ್ಟ ಶ್ರೇಯ ಕುಸ್ತಿಪಟುಗಳಿಗೇ ಸಲ್ಲಬೇಕು. ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಮಹಿಳೆಯರ ವಿಭಾಗದಲ್ಲಿರುವುದು ಒಂದು ಕಂಚು ಮಾತ್ರ.

ಹರಿಯಾಣದಲ್ಲಿ ಮಹಿಳೆಯರ ಮೇಲಿದ್ದ ಅತ್ಯಂತ ಕಠಿಣ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆದು ನಿಂತ ಪೋಗಟ್ ಕುಟುಂಬದ ಕುಡಿಗಳಾದ ಗೀತಾ, ಬಬಿತಾ, ವಿನೇಶಾ, ಸಂಗೀತಾ ಅವರು ದಂತಕಥೆಯೇ ಆಗಿದ್ದಾರೆ.  ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಸಾಧನೆ ಮಾಡಿದ್ದಾರೆ.  ಅವರ ಯಶೋಗಾಥೆಯಿಂದ ಪ್ರಭಾವಿತರಾದ ದೇಶದ ಮೂಲೆಮೂಲೆಯಲ್ಲಿರುವ ಹೆಣ್ಣುಮಕ್ಕಳು ಕುಸ್ತಿ ಕ್ರೀಡೆಯತ್ತ ಆಕರ್ಷಿತರಾಗುತ್ತಿದ್ದಾರೆ. ಬಡ ಕುಟುಂಬಗಳ ಗ್ರಾಮೀಣ ಪ್ರತಿಭೆಗಳ ಸಂಖ್ಯೆಯೇ ಇಲ್ಲಿ ಹೆಚ್ಚು.

‘ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಲೈಂಗಿಕ ಶೋಷಣೆಗೊಳಗಾಗಿರುವ 10–20 ಹುಡುಗಿಯರು ನನಗೆ ಗೊತ್ತಿದ್ದಾರೆ. ಆದರೆ ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ದನಿಯೆತ್ತುವಷ್ಟು ಶಕ್ತಿ ಈ ಮಕ್ಕಳಿಗೆ ಇರುವುದಿಲ್ಲ. ಲಖನೌನಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕೆಲವು ಕೋಚ್‌ಗಳೂ ಮಹಿಳಾ ಪಟುಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ’ ಎಂದೂ ವಿನೇಶಾ ಆರೋಪಿಸಿದ್ದಾರೆ. ಇದನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಈ ಪ್ರಕರಣದಲ್ಲಿ ಪಾರದರ್ಶಕವಾದ ತನಿಖೆ ಅತ್ಯಂತ ಅವಶ್ಯಕ. ಏಕೆಂದರೆ, ಬೇರೆ ಪ್ರಕರಣಗಳಂತೆ ಇದು ಕೂಡ ಮೂಲೆಗುಂಪಾದರೆ ದೇಶದ ಕುಸ್ತಿ ಕ್ರೀಡೆಯು ಮಣ್ಣುಮುಕ್ಕುವ ಅಪಾಯವಿದೆ. ಹೆಣ್ಣುಮಕ್ಕಳು ಕ್ರೀಡೆಯಿಂದ ವಿಮುಖರಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ವಿಶ್ವಾಸಾರ್ಹತೆ, ಸುರಕ್ಷತೆ ಮತ್ತು ಜೀವನಭದ್ರತೆ ನೀಡದ ಯಾವ ಕ್ರೀಡೆಯೂ ವೃತ್ತಿಪರವಾಗಲು ಸಾಧ್ಯವಿಲ್ಲ. ವೃತ್ತಿಪರವಾಗದ ಕ್ರೀಡೆ ಬೆಳೆಯಲು ಸಾಧ್ಯವಿಲ್ಲ. ಈ ಪ್ರಕರಣ ಕುಸ್ತಿಗೆ ಮಾತ್ರ ಸೀಮಿತವಲ್ಲ. ಭಾರತದ ಇಡೀ ಕ್ರೀಡಾಕ್ಷೇತ್ರದ ವಿಶ್ವಾಸಾರ್ಹತೆಯ ಪ್ರಶ್ನೆಯಾಗಿದೆ.

ಏನು ಹೇಳುತ್ತದೆ ಕ್ರೀಡಾ ನೀತಿ?

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹಲವು ದಶಕಗಳಿಂದ ಲೈಂಗಿಕ ಶೋಷಣೆ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳ ತಡೆ ಕುರಿತು ಕೇಂದ್ರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2011ರಲ್ಲಿ ರೂಪಿಸಿರುವ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನೀತಿ ಹೀಗೆ ಹೇಳುತ್ತದೆ.

l ಮಹಿಳಾ ಕ್ರೀಡಾಪಟುಗಳ ಸುರಕ್ಷತೆ ಮತ್ತು ದೌರ್ಜನ್ಯ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳುವುದು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು (ಎನ್‌ಎಸ್‌ಎಫ್‌), ಭಾರತ ಒಲಿಂಪಿಕ್ಸ್ ಸಂಸ್ಥೆ ಮತ್ತು ಇತರ ಕ್ರೀಡಾ ಸಂಸ್ಥೆಗಳ ಜವಾಬ್ದಾರಿಯಾಗಿದೆ

l ಎನ್‌ಎಸ್‌ಎಫ್‌ಗಳು ತಾವು ರೂಪಿಸುವ ಕಾಯ್ದೆ ಅಥವಾ ನಿಯಮಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ನಿಯಮಗಳನ್ನೂ ಸೇರಿಸಬೇಕು. ನಿಯಮಗಳನ್ನು ಉಲ್ಲಂಘಿಸಿದವರಿಗೆ ತಕ್ಕ ದಂಡನೆ ವಿಧಿಸಬೇಕು

l ಆರೋಗ್ಯ, ನೈರ್ಮಲ್ಯದ ಕುರಿತು ಮಹಿಳಾ ಕ್ರೀಡಾಪಟುಗಳಿಗೆ ಯಾವುದೇ ಪ್ರತಿಕೂಲ ವಾತಾವರಣವಿಲ್ಲ ಎಂಬುದನ್ನು ಖಚಿತಪಡಿಸಬೇಕು

l ತಮ್ಮ ಮೇಲಾಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಲು ಮಹಿಳೆಯರಿಗೆ ಮುಕ್ತ ವಾತಾವರಣ ರೂಪಿಸಬೇಕು. ಅದಕ್ಕಾಗಿ ಸೂಕ್ತ ವೇದಿಕೆ ಹಾಗೂ ಅವಕಾಶ ಕಲ್ಪಿಸಬೇಕು 

l ಸಂತ್ರಸ್ತೆ ನೀಡಿದ ದೂರು ಕುರಿತು ಕ್ರಮ ಕೈಗೊಳ್ಳಲು ಎನ್ಎಸ್‌ಎಫ್‌ಗಳು ದೂರು ಪರಿಹಾರ ವ್ಯವಸ್ಥೆ ರೂಪಿಸಬೇಕು. ಸಮಯಮಿತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಆರೋಪಿಯ ನಡವಳಿಕೆಯು ದುಷ್ಕೃತ್ಯಕ್ಕೆ ಸಮಾನ ಎಂದು ಕಂಡುಬಂದರೆ ನಿಯಮಗಳನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು

l ಕ್ರಿಮಿನಲ್ ಮೊಕದ್ದಮೆ: ಭಾರತೀಯ ದಂಡಸಂಹಿತೆಯ ಪ್ರಕಾರ ಅಥವಾ ಇತರ ಯಾವುದೇ ಕಾನೂನಿನಡಿ ಆರೋಪಿಯ ಕೃತ್ಯವು ನಿರ್ದಿಷ್ಟ ಅಪರಾಧಕ್ಕೆ ಸಮಾನವಾದಾಗ ಎನ್‌ಎಸ್‌ಎಫ್‌ಗಳು ಸಂಬಂಧಿಸಿದ ಪ್ರಾಧಿಕಾರದಲ್ಲಿ ದೂರು ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಂತದಲ್ಲಿ ಸಂತ್ರಸ್ತರಿಗೆ ಅನ್ಯಾಯ ಅಥವಾ ತಾರತಮ್ಯ ಆಗುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು 

ಸಮಿತಿ ರಚನೆ: ಸಂತ್ರಸ್ತ ಕ್ರೀಡಾಪಟುವಿನ ದೂರು ಕುರಿತು ಕ್ರಮ ಕೈಗೊಳ್ಳಲು ಸಮಿತಿಯ ಅಗತ್ಯವಿದೆ ಎಂದಾದರೆ, ಸಮಿತಿ ರಚಿಸಬೇಕು. ವಿಶೇಷ ಸಮಾಲೋಚಕರನ್ನು ನೇಮಿಸಬೇಕು, ಗೋಪ್ಯತೆ ಕಾಯ್ದುಕೊಳ್ಳಬೇಕು ಮತ್ತು ಇತರ ನೆರವು ಒದಗಿಸಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಸಮಿತಿಗೆ ಮಹಿಳೆಯ ನೇತೃತ್ವ ಇರಬೇಕು. ಅಲ್ಲದೆ ಅರ್ಧದಷ್ಟು ಸದಸ್ಯರು ಮಹಿಳೆಯರಾಗಿರಬೇಕು. ಇದಲ್ಲದೆ, ಯಾವುದೇ ಅನಗತ್ಯ ಒತ್ತಡ ಅಥವಾ ಪ್ರಭಾವದ ಸಾಧ್ಯತೆಯನ್ನು ತಡೆಗಟ್ಟಲು, ಅಂತಹ ದೂರುಗಳ ಸಮಿತಿಯು ಲೈಂಗಿಕ ಕಿರುಕುಳದ ವಿಷಯದ ಬಗ್ಗೆ ಪರಿಣತಿ ಹೊಂದಿರುವ ಎನ್‌ಜಿಒ ಅಥವಾ ಇತರ ಸಂಸ್ಥೆಯನ್ನು ಒಳಗೊಂಡಿರಬೇಕು.

ಕುಸ್ತಿ ಬರೀ ಕ್ರೀಡೆಯಲ್ಲ; ಸಂಸ್ಕೃತಿ

ಭಾರತದಲ್ಲಿ ಕುಸ್ತಿಯು ಕ್ರೀಡೆಯಷ್ಟೇ ಅಲ್ಲ. ಸಂಸ್ಕೃತಿಯೂ ಹೌದು. ಕುಸ್ತಿ ತಾಲೀಮು ಮಾಡುವ ಮಟ್ಟಿಯನ್ನು ಅನಾದಿ ಕಾಲದಿಂದಲೂ ಅಂಬಾಭವಾನಿ ದೇವಿಯಂತೆ ಪೂಜಿಸುವ ಪರಂಪರೆ ಇದೆ. ಅಷ್ಟೇ ಅಲ್ಲ. ಕೆಲವು ದಶಕಗಳ ಹಿಂದೆ ಹಳ್ಳಿಹಳ್ಳಿಗಳಲ್ಲಿಯೂ ಇದ್ದ ಗರಡಿಮನೆಗಳ ಪೈಲ್ವಾನರು ತಮ್ಮ ಊರಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯುವ ರಕ್ಷಕರೂ ಆಗಿದ್ದರು.  

ಆಧುನಿಕತೆ ಬೆಳೆದಂತೆ ಮಹಿಳೆಯರೂ ಕುಸ್ತಿಪಟುಗಳಾದರು. ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿಯೂ ಪದಕ ಗೆದ್ದು ಭಾರತದ ಕೀರ್ತಿ ಬೆಳಗಿದರು. 

ಬೇರೆ ಕ್ರೀಡೆಗಳಲ್ಲಿ ನಡೆದ ಪ್ರಕರಣಗಳು

l ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್ (ಮಾಜಿ ಹಾಕಿಪಟುವೂ ಹೌದು) ವಿರುದ್ಧ ಮಹಿಳಾ ಅಥ್ಲೆಟಿಕ್ ತರಬೇತುದಾರರೊಬ್ಬರು ಹೋದ ತಿಂಗಳು ಎಫ್‌ಐಆರ್ ದಾಖಲಿಸಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದೀಪ್ ಸಿಂಗ್ ಅವರನ್ನು ಇನ್ನೊಂದು ಖಾತೆಯ ಸಚಿವರನ್ನಾಗಿ ನೇಮಕ ಮಾಡಲಾಯಿತು

l ಸೈಕ್ಲಿಂಗ್ ಕೋಚ್ ಆರ್‌.ಕೆ. ಶರ್ಮಾ ಅವರು ಮಹಿಳಾ ಸೈಕ್ಲಿಸ್ಟ್‌ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೋದ ಜೂನ್‌ನಲ್ಲಿ ಸದ್ದು ಮಾಡಿತ್ತು 

l ವಿದೇಶದಲ್ಲಿಯೂ ಇಂತಹ ಪ್ರಕರಣಗಳಾಗಿವೆ. ಹೋದ ವರ್ಷ ಅಮೆರಿಕದ ತಾರಾ ಜಿಮ್ನಾಸ್ಟ್ ಸಿಮೊನ್ ಬೈಲ್ಸ್‌ ಮತ್ತು ಜಿಮ್ನಾಸ್ಟ್‌ಗಳು ತಮ್ಮ ಕೋಚ್‌ ವಿರುದ್ಧ ಮಾಡಿದ್ದ ಆರೋಪ ಸುದ್ದಿಯಾಗಿತ್ತು. ಜಿಮ್ನಾಸ್ಟ್‌ಗಳು ತಮಗೆ ಆದ ದೌರ್ಜನ್ಯದ ವಿವರಗಳನ್ನು ಅಲ್ಲಿಯ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದರಲ್ಲಿ ಆಘಾತಕಾರಿ ವಿಚಾರಗಳಿದ್ದವು

****

‘ರಾಜಕೀಯ ಪ್ರೇರಿತ, ದುರುದ್ದೇಶದ ಧರಣಿ’

ಕುಸ್ತಿಪಟುಗಳು ಮಾಡಿದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ. ಮುಂದಿನ ತಿಂಗಳು  ಡಬ್ಲ್ಯುಎಫ್‌ಐ ಚುನಾವಣೆ ನಡೆಯಲಿದೆ. ಅದರಲ್ಲಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರಿಗೆ ಹಿನ್ನಡೆಯುಂಟು ಮಾಡುವ ಹುನ್ನಾರ ಇದು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಕುಸ್ತಿಪಟುಗಳು ಅಂತರರಾಷ್ಟ್ರೀಯ ಪದಕವಿಜೇತರು. ಪ್ರಧಾನಿಯವರಿಗೆ ನಿಕಟವಾಗಿದ್ದಾರೆ. ಆದರೂ ಪ್ರಧಾನಿಯವರಿಗೇಕೆ ದೂರು ನೀಡಿಲ್ಲ? ತಮ್ಮ ತವರು ರಾಜ್ಯದ ಕುಸ್ತಿ ಸಂಸ್ಥೆಗಾದರೂ ದೂರು ಕೊಟ್ಟಿಲ್ಲವೇಕೆ?  

ಬ್ರಿಜ್‌ ಭೂಷಣ್ ಅಧ್ಯಕ್ಷರಾದ ನಂತರ ಜಾರಿಗೊಳಿಸಿರುವ ಕೆಲವು ನಿಯಮಗಳ ಬಗ್ಗೆ ಈ ಕುಸ್ತಿಪಟುಗಳಿಗೆ ತಕರಾರು ಇದೆ. ಅಂತರರಾಷ್ಟ್ರೀಯ ಪದಕವಿಜೇತರಿಗೆ ನಂತರದ ವರ್ಷ ರಾಷ್ಟ್ರೀಯ ಶಿಬಿರಕ್ಕೆ ನೇರಪ್ರವೇಶ ಇತ್ತು. ಆದರೆ ಹೊಸ ನಿಯಮದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಮತ್ತು ಟ್ರಯಲ್ಸ್‌ನಲ್ಲಿ ಸ್ಪರ್ಧಿಸುವುದು ಕಡ್ಡಾಯ. ಒಬ್ಬ ಕುಸ್ತಿಪಟು ಒಂದು ರಾಜ್ಯವನ್ನು ಮಾತ್ರ ಪ್ರತಿನಿಧಿಸಬೇಕು ಎಂಬ ನಿಯಮದಿಂದ  ನಕಲಿ ಪ್ರಮಾಣಪತ್ರಗಳನ್ನು ನೀಡಿ ಅಕ್ಕಪಕ್ಕದ ರಾಜ್ಯಗಳಿಂದಲೂ ಭಾಗವಹಿಸುವ ಚಾಳಿ ನಿಂತಿದೆ. ಇದರಿಂದಾಗಿ ದೇಶದ ಎಲ್ಲ ರಾಜ್ಯದವರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ.  

ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಹರಿಯಾಣದವರು ಮತ್ತು ಮುಂದಾಳತ್ವ ವಹಿಸಿದ್ದವರು ಒಂದೇ ಕುಟುಂಬದವರು. ಆದರೆ ಅದೇ ರಾಜ್ಯದ ಕುಸ್ತಿಪಟು ಯೋಗೇಶ್ವರ್ ದತ್ ತಟಸ್ಥವಾಗಿದ್ದಾರೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆದು ಸತ್ಯಾಂಶ ಹೊರಬರಲಿದೆ ಎಂಬ ಭರವಸೆ ನಮಗಿದೆ. 

- ವಿನೋದ್‌ಕುಮಾರ್ ಕೆ., ಜಂಟಿ ಕಾರ್ಯದರ್ಶಿ, ಕರ್ನಾಟಕ ಕುಸ್ತಿ ಸಂಸ್ಥೆ

––––

ಕುಸ್ತಿ ಕ್ಷೇತ್ರದಲ್ಲಿ ಲೈಂಗಿಕ ಶೋಷಣೆಯ ಬಿಸಿ ನನಗೂ ತಟ್ಟಿದೆ. ಆ ಕಾರಣಕ್ಕಾಗಿಯೇ ನಾನು ಕುಸ್ತಿ ಬಿಟ್ಟು ಡಬ್ಲ್ಯುಡಬ್ಲ್ಯುಇ ಸ್ಪರ್ಧೆಗಳಿಗೆ ಸೇರಿಕೊಂಡೆ. ಅಧಿಕಾರಶಾಹಿಯು ಕ್ರೀಡಾಪಟುಗಳನ್ನು ಅನಿವಾರ್ಯಕ್ಕೆ ತಳ್ಳಿ ದುರ್ಲಾಭ ಪಡೆಯುವಲ್ಲಿ ನಿಷ್ಣಾತವಾಗಿದೆ.

- ಕವಿತಾ ದೇವಿ,  ಡಬ್ಲ್ಯುಡಬ್ಲ್ಯುಇ ಸ್ಪರ್ಧಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು