ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀವಿಲ್ಲದೆ ಈ ಪಯಣವಿಲ್ಲ: ವಿದಾಯ ಪಂದ್ಯದ ಬಳಿಕ ಅಭಿಮಾನಿಗಳೆದುರು ಛೆಟ್ರಿ ಕಣ್ಣೀರು

Published 7 ಜೂನ್ 2024, 2:51 IST
Last Updated 7 ಜೂನ್ 2024, 2:51 IST
ಅಕ್ಷರ ಗಾತ್ರ

ಕೋಲ್ಕತ್ತ: ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ಕೋಲ್ಕತ್ತದಲ್ಲಿ ಕುವೈತ್‌ ವಿರುದ್ಧ ಗುರುವಾರ ನಡೆದ ಪಂದ್ಯದ ಮೂಲಕ ತೆರೆಬಿದ್ದಿತು. ಸುಮಾರು 59 ಸಾವಿರ ಪ್ರೇಕ್ಷಕರಿಂದ ತುಂಬಿದ್ದ ಕ್ರೀಡಾಂಗಣದಲ್ಲಿ ಭಾವುಕರಾದ ಚೆಟ್ರಿ, ಪಂದ್ಯದ ಬಳಿಕ ಕಣ್ಣೀರು ಹಾಕಿದರು.

2026ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ ಅರ್ಹತೆಗಾಗಿ ಕುವೈತ್‌ ವಿರುದ್ಧ ನಡೆದ ನಿರ್ಣಾಯಕ ಪಂದ್ಯವು ಗೋಲು ರಹಿತವಾಗಿ ಡ್ರಾ ನಲ್ಲಿ ಅಂತ್ಯವಾಯಿತು.

ಪಂದ್ಯದ ಬಳಿಕ ಮಾತನಾಡಿದ ಚೆಟ್ರಿ, 'ಆಟವನ್ನು ವೀಕ್ಷಿಸಿದವರು, ಹಸ್ತಾಕ್ಷರ ಪಡೆದವರು, ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲ ಇಲ್ಲದಿದ್ದರೆ, 19 ವರ್ಷಗಳ ಈ ಪಯಣ ಸಾಧ್ಯವಾಗುತ್ತಿರಲಿಲ್ಲ' ಎಂದು ಭಾವುಕರಾದರು.

'ಇಲ್ಲಿರುವ ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ, ಸಂತೋಷವಾಗಿರಿ' ಎಂದು ಅಭಿಮಾನಿಗಳಿಗೆ ಹೇಳಿದರು.

ಕಳೆದ ತಿಂಗಳೇ ವಿದಾಯ ಘೋಷಿಸಿದ್ದ ಚೆಟ್ರಿ ಅವರನ್ನು, ಪಂದ್ಯದ ನಂತರ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸನ್ಮಾನಿಸಿತು.

ಭಾರತದ ಫುಟ್‌ಬಾಲ್‌ಗೆ ಅಪಾರ ಕೊಡುಗೆ ನೀಡಿರುವ ಈ ದಿಗ್ಗಜ ಆಟಗಾರ, 2011, 2015, 2021 ಮತ್ತು 2023ರಲ್ಲಿ ಟೀಂ ಇಂಡಿಯಾ ದಕ್ಷಿಣ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಎಸ್‌ಎಎಫ್‌ಎಫ್‌) ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲಲು ನೆರವಾಗಿದ್ದರು.

2007, 2009 ಮತ್ತು 2012ರಲ್ಲಿ ನೆಹರೂ ಕಪ್‌ ಗೆಲ್ಲುವಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಚೆಟ್ರಿ, ಭಾರತದ ಪರ ಅತಿಹೆಚ್ಚು (151) ಪಂದ್ಯಗಳನ್ನು ಆಡಿರುವ ಹಾಗೂ ಹೆಚ್ಚು (94) ಗೋಲುಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ.

ದಿಗ್ಗಜ ಆಟಗಾರರಾದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (128), ಇರಾನ್‌ನ ಅಲಿ ದಾಯಿ (108) ಮತ್ತು ಅರ್ಜೆಂಟಿನಾದ ಲಿಯೋನೆಲ್‌ ಮೆಸ್ಸಿ (106) ಅವರಷ್ಟೇ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಚೆಟ್ರಿಗಿಂತ ಹೆಚ್ಚು ಗೋಲು ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT